ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಳ್ಳಾರಿ ಜಿಲ್ಲೆಯಲ್ಲಿ ಶೇ 74.37 ಮತದಾನ

ಬಿಸಿಲ ಲೆಕ್ಕಿಸದೇ ಪ್ರಚಾರ
Last Updated 28 ಅಕ್ಟೋಬರ್ 2020, 13:15 IST
ಅಕ್ಷರ ಗಾತ್ರ

ಬಳ್ಳಾರಿ: ಬಿರುಬಿಸಿಲ ನಡುವೆಯೇ ಜಿಲ್ಲೆಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಬುಧವಾರ ಜಿಲ್ಲೆಯಾದ್ಯಂತ ಭರದಿಂದ ನಡೆದುಶೇ 74.37 ಮತದಾನ ದಾಖಲಾಯಿತು.

ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾದಾಗ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕ ಮತದಾರರು ಕಂಡುಬಂದಿರಲಿಲ್ಲ. ಆದರೆ ಬೆಳಿಗ್ಗೆ 11 ಗಂಟೆಯ ಬಳಿಕ ಬಿಸಿಲು ಹೆಚ್ಚಾದಂತೆ ಮತಗಟ್ಟೆಗಳ ಮುಂದೆ ಮತದಾರ ಸಾಲುಗಳು ದೊಡ್ಡದಾಗಿದ್ದವು. ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ವಿವಿಧ ಪಕ್ಷಗಳ ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರು ಮತಗಟ್ಟೆಗಳ ಹೊರಗೆ ನೆರೆದು ಮತದಾರರನ್ನು ಓಲೈಸುತ್ತಿದ್ದರು.
ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರಿರುವ ಬಳ್ಳಾರಿ ತಾಲ್ಲೂಕಿನ ಎರಡ ಮತಗಟ್ಟೆಗಳನ್ನು ನಗರದ ತಹಶೀಲ್ದಾರ್ ಕಚೇರಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾಗಿತ್ತು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನೂ ಮತಗಟ್ಟೆಯಾಗಿ ಪರಿವರ್ತಿಸಲಾಗಿತ್ತು. ಮತದಾರರ ಸಾಲಿನಲ್ಲಿ ಪರಸ್ಪರ ದೈಹಿಕ ಅಂತರ ಕಂಡುಬರಲಿಲ್ಲ.

ತಹಶೀಲ್ದಾರ್‌ ಕಚೇರಿ ಮತ್ತು ಉಪ ಆಯುಕ್ತರ ಕಚೇರಿ ಮುಂದೆ ನೆರಳು ಇಲ್ಲದ್ದರಿಂದ ನೂರಾರು ಮತದಾರರು ಗೊಣಗುಟ್ಟುತ್ತಾ ಸಾಲಿನಲ್ಲಿ ನಿಂತಿದ್ದು ಕಂಡು ಬಂತು.

ಪ್ರತಿ ಮತಗಟ್ಟೆಯಲ್ಲೂ ಮತದಾರರ ಜ್ವರ ತಪಾಸಣೆ ಮಾಡಿಯೇ ಒಳಗೆ ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಕೈಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಲಾಗುತ್ತಿತ್ತು. ನಗರದ ಮತಗಟ್ಟೆಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್‌ ಭೇಟಿ ನೀಡಿ ಪರಿಶೀಲಿಸಿದರು.

ವಾಹನ ಸಂಚಾರಕ್ಕೆ ತೊಂದರೆ: ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯ ಎರಡೂ ಬದಿ ವಿವಿಧ ಪಕ್ಷಗಳ ಮುಖಂಡರು ಪ್ರಚಾರಕ್ಕಾಗಿ ಪೆಂಡಾಲ್‌ ಹಾಕಿಕೊಂಡು ಕುಳಿತಿದ್ದರಿಂದ ಹಾಗೂ ಮತದಾರರ ಓಲೈಕೆಯಲ್ಲಿ ತೊಡಗಿದ್ದರಿಂದ ಹಾಗೂ ಮತದಾರರ ವಾಹನಗಳನ್ನೂ ರಸ್ತೆಯ ಎರಡೂ ಬದಿಯಲ್ಲಿ ಗುಂಪಾಗಿ ನಿಲ್ಲಿಸಿದ್ದರಿಂದ ಆ ಮಾರ್ಗದಲ್ಲಿ ವಾಹನಗಳ ಸಂಚಾರ ಅಸ್ಯವ್ಯಸ್ತವಾಗಿತ್ತು.

ಮತಗಟ್ಟೆ ಮುಂಭಾಗ ಶಾಸಕರ ಮೊಕ್ಕಾಂ!

ಬಳ್ಳಾರಿ ನಗರದ ಮತಗಟ್ಟೆಗಳ ಎದುರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯ ಒಂದು ಬದಿಯಲ್ಲಿ ಶಾಸಕರಾದ ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ಮತ್ತು ಅಲ್ಲಂ ವೀರಭದ್ರಪ್ಪ ಕುಳಿತು ಪ್ರಮುಖ ಮುಖಂಡರನ್ನು ಉತ್ತೇಜಿಸಿದರು.ಇನ್ನೊಂದು ಬದಿಯಲ್ಲಿ ಬಿಜೆಪಿಯ ಶಾಸಕ ಜಿ.ಸೋಮಶೇಖರ ರೆಡ್ಡಿ ಮುಖಂಡರೊಂದಿಗೆ ನಿಂತು ಮತದಾರರನ್ನು ಓಲೈಸುತ್ತಿದ್ದುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT