ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ದುಬಾರಿ; ಹೊಸ ಲೇಔಟ್‌ಗಿಲ್ಲ ಆಸಕ್ತಿ

ಕೃಷಿ ಜಮೀನಿನ ಮೇಲೆ ಎಲ್ಲರ ಕಣ್ಣು; ಸಿರಿವಂತರಿಂದ ಹೆಚ್ಚಿನ ಹೂಡಿಕೆ
Last Updated 17 ಸೆಪ್ಟೆಂಬರ್ 2022, 9:05 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆ ರಚನೆಯಾದ ನಂತರ ನಿವೇಶನಗಳ ಬೆಲೆ ಭಾರಿ ಹೆಚ್ಚಳವಾಗಿದ್ದು, ಖರೀದಿಗೆ ಜನ ಹಿಂದೇಟು ಹಾಕುತ್ತಿರುವುದರಿಂದ ಹೊಸ ಲೇಔಟ್‌ ಮಾಡುವುದಕ್ಕೆ ಯಾರೂ ಆಸಕ್ತಿ ತೋರುತ್ತಿಲ್ಲ ಎಂದು ಗೊತ್ತಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ವ್ಯಾಪ್ತಿಯಲ್ಲಿ ಹೊಸ ಲೇಔಟ್‌ಗಳ ನಿರ್ಮಾಣಕ್ಕಾಗಿ ಅನುಮತಿ ಕೋರಿ ಈ ವರ್ಷ ಇದುವರೆಗೆ 30 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಏಕ ನಿವೇಶನ, ಬಹು ನಿವೇಶನ ಹಾಗೂ ವಾಣಿಜ್ಯ ಉದ್ದೇಶದ ಲೇಔಟ್‌ಗಳಿವೆ. ಈ ಹಿಂದೆಯೂ ಇಷ್ಟೇ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು.

ಹುಡಾ ಮೂಲಗಳ ಪ್ರಕಾರ, ಈ ಹಿಂದೆ ವರ್ಷಕ್ಕೆ 25 ರಿಂದ 30 ಅರ್ಜಿಗಳು ಅರ್ಜಿಗಳು ಹೊಸ ಲೇಔಟ್‌ ನಿರ್ಮಿಸಲು ಸಲ್ಲಿಕೆಯಾಗುತ್ತಿದ್ದವು. ನೂತನ ಜಿಲ್ಲೆ ರಚನೆಯಾದ ನಂತರ ಇದರಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ. ಆದರೆ, ಅರ್ಜಿ ಸಲ್ಲಿಸಿದವರೆಲ್ಲ ನಿಗದಿತ ಅವಧಿಯೊಳಗೆ ಶುಲ್ಕ ಭರಿಸದ ಕಾರಣ ಅಷ್ಟಕ್ಕೂ ಅನುಮೋದನೆ ಸಿಗುವುದಿಲ್ಲ.

ಹೊಸಪೇಟೆ ಜಿಲ್ಲಾ ಕೇಂದ್ರವಾದ ನಂತರ ನಗರದಲ್ಲಿ ಪ್ರತಿ ಚದರ ಅಡಿ ನಿವೇಶನದ ಮೌಲ್ಯ ₹3 ರಿಂದ ₹4 ಸಾವಿರಕ್ಕೆ ಹೆಚ್ಚಳವಾಗಿದೆ. ಈ ಹಿಂದೆ ಇದು ₹2ರಿಂದ ₹3 ಸಾವಿರದೊಳಗೆ ಇತ್ತು. ಏಕಾಏಕಿ ದರ ಏರಿಕೆಯಾಗಿರುವುದರಿಂದ ಬಡವರು, ಮಧ್ಯಮ ವರ್ಗದವರು ನಿವೇಶನ ಖರೀದಿಸುವ ಯೋಚನೆಯನ್ನೇ ಬಿಟ್ಟು ಬಿಟ್ಟಿದ್ದಾರೆ. ಮೇಲ್ಮಧ್ಯಮ ವರ್ಗದವರೂ ಹತ್ತು ಸಲ ಯೋಚಿಸುವಂತಾಗಿದೆ. ಸಹಜವಾಗಿಯೇ ಸದ್ಯದ ಮಟ್ಟಿಗೆ ನಿವೇಶನಗಳಿಗೆ ಬೇಡಿಕೆ ತಗ್ಗಿರುವುದರಿಂದ ಹೊಸ ಲೇಔಟ್‌ ನಿರ್ಮಿಸಲು ಯಾರೂ ಮುಂದಾಗುತ್ತಿಲ್ಲ.

ಎಲ್ಲರಿಗೂ ಬೇಕು ಕೃಷಿ ಜಮೀನು:

ಹೊಸ ಜಿಲ್ಲೆಯಾದ ನಂತರ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಆದರೆ, ಭವಿಷ್ಯದ ದಿನಗಳಲ್ಲಿ ಅದಕ್ಕೆ ಇನ್ನಷ್ಟು ಬೇಡಿಕೆ ಹೆಚ್ಚಾಗುವುದು ಖಚಿತ. ಈ ವಿಷಯವನ್ನು ಮನಗಂಡು ಹಣವಂತರು ಹೊಸಪೇಟೆ ಸುತ್ತಮುತ್ತಲಿನ ಕೃಷಿ ಜಮೀನು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಪ್ರತಿ ಎಕರೆ ಕೃಷಿ ಜಮೀನು ₹2.5 ಕೋಟಿಯಿಂದ ₹3 ಕೋಟಿಗೆ ಮಾರಾಟವಾಗುತ್ತಿದೆ. ಬೆಲೆ ಭಾರಿ ಹೆಚ್ಚಳವಾಗಿದ್ದರೂ ಅದರ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಸದ್ಯ ಕೃಷಿ ಜಮೀನು ಖರೀದಿಸಿ, ಭೂಮಿಗೆ ಬೇಡಿಕೆ ಸೃಷ್ಟಿಯಾದ ನಂತರ ಎನ್‌.ಎ. ಮಾಡಿಸಿಕೊಂಡು ನಿವೇಶನಗಳನ್ನು ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸುವ ಉದ್ದೇಶ ಇದರ ಹಿಂದೆ ಅಡಗಿದೆ.

ಅನ್ಯ ರಾಜ್ಯಗಳ ಶಿಕ್ಷಣ ಸಂಸ್ಥೆಯವರು ಕೂಡ ದುಬಾರಿ ಬೆಲೆಗೆ ಕೃಷಿ ಜಮೀನು ಖರೀದಿಸಿ, ಭವಿಷ್ಯದಲ್ಲಿ ಹೈಟೆಕ್‌ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಯೋಜನೆ ರೂಪಿಸಿದ್ದಾರೆ. ಇದೇ ರೀತಿ ಮುಂದುವರೆದರೆ ಹೊಸಪೇಟೆ ಸುತ್ತಮುತ್ತಲಿನ ಫಲವತ್ತಾದ ಕೃಷಿ ಜಮೀನು, ಹಸಿರು ಮಾಯವಾಗಿ ಕಾಂಕ್ರೀಟ್‌ ಕಾಡಾಗಿ ಬದಲಾಗುವುದರಲ್ಲಿ ಅನುಮಾನವೇ ಇಲ್ಲ.

‘33 ಉದ್ಯಾನ ನಗರಸಭೆಗೆ ಹಸ್ತಾಂತರ’:

‘ಉದ್ಯಾನದ ಜಾಗ ಒತ್ತುವರಿ ತಡೆಗೆ ಹುಡಾ ಮುಂದಾಗಿದ್ದು, ನಗರದ 11 ಉದ್ಯಾನಗಳಿಗೆ ತಂತಿ ಬೇಲಿ ಹಾಕಲು ಟೆಂಡರ್ ಕರೆದಿದೆ. ಈಗಾಗಲೇ 33 ಉದ್ಯಾನಗಳಿಗೆ ತಂತಿ ಬೇಲಿ ಹಾಕಿ ನಗರಸಭೆ ಹಸ್ತಾಂತರಿಸಿದೆ. 2012ರ ನಂತರ ಅನುಮೋದನೆಗೊಂಡ ಲೇಔಟ್‌ಗಳಲ್ಲಿ ಉದ್ಯಾನದ ಪ್ರದೇಶಗಳನ್ನು ವಿನ್ಯಾಸದ ಮಾಲೀಕರೆ ನೇರವಾಗಿ ಹೊಸಪೇಟೆ ನಗರಸಭೆಗೆ ಹಸ್ತಾಂತರ ಮಾಡುತ್ತಿದ್ದಾರೆ’ ಎಂದು ಹುಡಾ ಆಯುಕ್ತ ಈರಣ್ಣ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT