ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ಸಂತೆ ಜಾಗ ಬದಲಿಗೆ ವಿರೋಧ

Last Updated 17 ಡಿಸೆಂಬರ್ 2018, 12:12 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಕಮಲಾಪುರದ ಹಳೆ ಬಸ್‌ ನಿಲ್ದಾಣ ಸಮೀಪವಿರುವ ವಾರದ ಸಂತೆ ಮಾರುಕಟ್ಟೆಯನ್ನು ಬೇರೆಡೆ ಸ್ಥಳಾಂತರಿಸದಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ವ್ಯಾಪಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ನಂತರ ಕಮಲಾಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

‘ಅನೇಕ ವರ್ಷಗಳಿಂದ ವಾರದ ಸಂತೆ ಹಳೆ ಬಸ್‌ ನಿಲ್ದಾಣದ ಸಮೀಪ ನಡೆಯುತ್ತಿದೆ. ಅದನ್ನು ಏಕಾಏಕಿ ಪಟ್ಟಣ ಹೊರವಲಯದ ಕೆ.ಇ.ಬಿ. ಹಿಂಭಾಗ ಸ್ಥಳಾಂತರಿಸಿರುವುದರಿಂದ ವ್ಯಾಪಾರಿಗಳು ಹಾಗೂ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತಿದೆ. ಅಷ್ಟೇ ಅಲ್ಲ, ಕೆ.ಇ.ಬಿ. ಹಿಂಭಾಗ ಮಲ ಮೂತ್ರ ವಿಸರ್ಜನೆಯಿಂದ ದುರ್ಗಂಧ ಬರುತ್ತದೆ. ಅಂತಹ ಸ್ಥಳದಲ್ಲಿ ಕುಳಿತುಕೊಂಡು ವ್ಯಾಪಾರ ಮಾಡಲು ಆಗುವುದಿಲ್ಲ. ಅಸ್ವಚ್ಛತೆಯಿಂದ ಕೂಡಿರುವ ಅಂತಹ ಸ್ಥಳಕ್ಕೆ ಜನ ಕೂಡ ಬರುವುದಿಲ್ಲ. ಹೀಗಾಗಿ ಮೊದಲಿನಂತೆ ಬಸ್‌ ನಿಲ್ದಾಣದ ಬಳಿಯೇ ವಾರದ ಸಂತೆ ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

‘ತರಕಾರಿ, ಹಣ್ಣು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ರೈತರು, ವ್ಯಾಪಾರಿಗಳು ಸಂತೆಗೆ ತಂದು ಮಾರಾಟ ಮಾಡುತ್ತಾರೆ. ಪಟ್ಟಣದ ಮಧ್ಯ ಭಾಗದಲ್ಲಿ ಸಂತೆ ನಡೆಯುತ್ತಿದ್ದರಿಂದ ಜನರಿಗೆ ಅನುಕೂಲವಾಗುತ್ತಿದೆ. ಹೀಗಿರುವಾಗ ಏಕಾಏಕಿ ಸ್ಥಳಾಂತರಿಸಿದ್ದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

ಮಹಾಸಭಾ ಅಧ್ಯಕ್ಷ ಗಂಗಪ್ಪ, ಮುಖಂಡರಾದ ಬಿ. ನಾಗರಾಜ, ಕೃಷ್ಣ, ಎಲ್‌.ಎಂ. ವೀರೇಶ್‌ ಮನವಿಗೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT