ಮತ್ತೆ ಮರಳಿದ ಸಂಭ್ರಮದ ಆ ದಿನ...

7
ಸ್ವಾತಂತ್ರ್ಯ ದಿನೋತ್ಸವಕ್ಕೆ ವಿಶೇಷ ಅಲಂಕಾರ, ಝಗಮಗಿಸಲಿದೆ ಅಣೆಕಟ್ಟೆ; ಎರಡು ಲಕ್ಷಕ್ಕೂ ಅಧಿಕ ಜನ ಭೇಟಿ ನಿರೀಕ್ಷೆ

ಮತ್ತೆ ಮರಳಿದ ಸಂಭ್ರಮದ ಆ ದಿನ...

Published:
Updated:
Deccan Herald

ಹೊಸಪೇಟೆ: ನಾಲ್ಕು ವರ್ಷಗಳ ಬಳಿಕ ಇಲ್ಲಿನ ತುಂಗಭದ್ರಾ ಜಲಾಶಯ ಮೈದುಂಬಿಕೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನ ಇಡೀ ಜಲಾಶಯ ಮದುವಣಗಿತ್ತಿಯಂತೆ ಸಿಂಗಾರಗೊಂಡು ಪ್ರವಾಸಿಗರ ಸಂಭ್ರಮ ಇಮ್ಮಡಿಗೊಳಿಸಲು ಅಣಿಯಾಗುತ್ತಿದೆ.

ಜಲಾಶಯ ನಿರ್ಮಾಣಗೊಂಡ ವರ್ಷದಿಂದಲೂ ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವ ದಿನದಂದು ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಎಲ್ಲ ಗೇಟ್‌ಗಳಿಗೆ ವಿಶಿಷ್ಟ ರೀತಿಯಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗುತ್ತದೆ. ಸ್ವಾಗತ ಕೋರುವ ಕಟೌಟ್‌, ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ಒಂದೆಡೆ ಹಾಲಿನ ನೊರೆಯಂತಹ ನೀರಿನ ಸೊಬಗು, ಇನ್ನೊಂದೆಡೆ ಕಣ್ಮನ ತಣಿಸುವ ವಿಶಿಷ್ಟ ಬಗೆಯ ವಿದ್ಯುದ್ದೀಪಾಲಂಕಾರ. ಈ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಜನ ಮನೆ ಮಂದಿಯೆಲ್ಲ ಸೇರಿಕೊಂಡು ಆ. 15ರಂದು ತಪ್ಪದೇ ಅಣೆಕಟ್ಟೆಗೆ ಭೇಟಿ ಕೊಡುತ್ತಾರೆ.

ಆದರೆ, ಬರದಿಂದ ಕಳೆದ ನಾಲ್ಕು ವರ್ಷ ಜಲಾಶಯ ತುಂಬಿರಲಿಲ್ಲ. ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಸೃಷ್ಟಿಯಾಗಿದ್ದರಿಂದ ಮಂಡಳಿ ಆ ನಾಲ್ಕೂ ವರ್ಷ ಸ್ವಾತಂತ್ರ್ಯದ ದಿನದಂದು ನೀರು ಹರಿಸಿರಲಿಲ್ಲ. ಯಾವುದೇ ರೀತಿಯ ಸಂಭ್ರಮದ ವಾತಾವರಣ ಇರಲಿಲ್ಲ. ಜನ ಕೂಡ ಅಣೆಕಟ್ಟೆ ಕಡೆ ತಿರುಗಿಯೂ ನೋಡಿರಲಿಲ್ಲ.

ಆದರೆ, ಈ ವರ್ಷ ಅದೆಲ್ಲ ದೂರವಾಗಿದೆ. ಮೊದಲಿನ ಸಂಭ್ರಮ ಮತ್ತೆ ಮನೆ ಮರುಕಳಿಸಿದೆ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಮಂಡಳಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಕೆಟ್ಟು ಹೋಗಿರುವ ವಿದ್ಯುದ್ದೀಪಗಳನ್ನು ಬದಲಿಸಿ ಹೊಸದನ್ನು ಅಳವಡಿಸಿದೆ. ಪ್ರವೇಶ ದ್ವಾರದಲ್ಲಿ ಸ್ವಾಗತ ಕೋರುವ ಕಟೌಟ್‌ ಹಾಗೂ ಇಡೀ ಉದ್ಯಾನಕ್ಕೆ ದೀಪಾಲಂಕಾರ ಮಾಡಲಾಗುತ್ತಿದೆ.

‘ಜುಲೈನಲ್ಲೇ ಜಲಾಶಯ ತುಂಬಿರುವುದರಿಂದ ಪ್ರತಿ ವಾರಾಂತ್ಯಕ್ಕೆ ಲಕ್ಷಕ್ಕೂ ಹೆಚ್ಚು ಜನ ಭೇಟಿ ಕೊಡುತ್ತಿದ್ದಾರೆ. ಆ. 15ರಂದು ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡಿ, ನೀರು ಹರಿಸುವುದರಿಂದ ಅದನ್ನು ಕಣ್ತುಂಬಿಕೊಳ್ಳಲು ಅನ್ಯ ಭಾಗಗಳಿಂದ ಜನ ಬರುತ್ತಾರೆ. ಅಂದಾಜು 2 ಲಕ್ಷ ಜನ ಭೇಟಿ ಕೊಡಬಹುದು ಎಂದು ನಿರೀಕ್ಷಿಸಲಾಗಿದೆ. ಅದಕ್ಕೆ ಅನುಗುಣವಾಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುವುದು’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಕೆ.ವಿ. ವೆಂಕಟರಮಣ ತಿಳಿಸಿದರು.

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !