ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪ್ಪ ಛಾಯೆ ನನ್ನ ಮೇಲಿತ್ತು: ಬೇಳೂರು

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಪಕ್ಷ ನಿಷ್ಠೆ ತೋರದೆ ಇರಲು ಹಾಗೂ 2013ರ ಚುನಾವಣೆ ವೇಳೆ ಪಕ್ಷಾಂತರ ಮಾಡಲು ನನ್ನ ರಾಜಕೀಯ ಗುರು ಎಸ್‌. ಬಂಗಾರಪ್ಪ ಅವರ ಛಾಯೆ ಕಾರಣ’ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಪಾದಿಸಿದರು.

ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಂಗಾರಪ್ಪ ಅವರು ಎಂತಹ ಪರಿಸ್ಥಿತಿ ಎದುರಾದರೂ ಚಿಟಿಕೆ ಹೊಡೆಯುವುದರೊಳಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಪಕ್ಷ ತೊರೆಯಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಅವರ ಛಾಯೆಯಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಂಡೆ. ಅದನ್ನೆಲ್ಲ ಬಿಜೆಪಿ ಮುಖಂಡರು ಕ್ಷಮಿಸಿದ್ದಾರೆ’ ಎಂದರು.

‘ಈಗ ಸಂಪೂರ್ಣ ಬದಲಾಗಿದ್ದೇನೆ. ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ. ಯಾರಿಗೆ ಟಿಕೆಟ್ ನೀಡಿದರೂ ಪಕ್ಷ ತೊರೆಯುವುದಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ಸಾಗರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗುತ್ತದೆ’ ಎಂದು
ಅಭಿಪ್ರಾಯಪಟ್ಟರು.

ಯಡಿಯೂರಪ್ಪ ಅವರ ಸೂಚನೆಯಂತೆ ಸೊರಬದಿಂದ ಸಾಗರದತ್ತ ಮುಖ ಮಾಡಿದ್ದ ಹರತಾಳು ಹಾಲಪ್ಪ ಅವರಿಗೆ ಪಕ್ಷ ಮೋಸ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ, ರಾಜಕೀಯದಲ್ಲಿ ಎಲ್ಲವೂ ಸಹಜ. ಇರುವ ಸಣ್ಣಪುಟ್ಟ ವ್ಯತ್ಯಾಸ ಸರಿಪಡಿಸಿಕೊಳ್ಳಲಾಗುವುದು. ಹರತಾಳು ಅವರಿಗೆ ಟಿಕೆಟ್ ಕೈತಪ್ಪಿದರೆ ಯಾರಿಗೂ ಮುಖಭಂಗ ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಹಾಲಪ್ಪ ವಿರುದ್ಧ ದಾಖಲಾದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ತಮ್ಮ ಪಾತ್ರ ಇತ್ತು ಎಂದು ಅವರೇ ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ವಿಚಾರದಲ್ಲಿ ತಾವು ನಿರಾಪರಾಧಿ. ಸಿಗಂದೂರೇಶ್ವರಿ ತಾಯಿ ಮೇಲಾಣೆ. ಅವರು ಇಚ್ಛಿಸಿದರೆ ದೇವಿಯ ಸನ್ನಿಧಾನದಲ್ಲಿ ಪ್ರಮಾಣ ಮಾಡಲು ಸಿದ್ಧ. ತಪ್ಪು ಮಾಡಿದವರಿಗೆ ದೇವಿ ಶಿಕ್ಷೆ ನೀಡಲಿ ಎಂದರು.

**

ಕಾಗೋಡು ತಿಮ್ಮಪ್ಪ ನನಗೆ ಮಾವ. ರಾಜಕೀಯವಾಗಿ ಅವರು ಕಂಸ. ಈ ಬಾರಿಯೂ ಅವರೇ ನನಗೆ ಎದುರಾಳಿ ಆಗಬೇಕು. ಸೋಲಿಗೆ ಸೇಡು ತೀರಿಸಿಕೊಳ್ಳಬೇಕು.
– ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT