ಶುಕ್ರವಾರ, ಡಿಸೆಂಬರ್ 4, 2020
24 °C
ಜೆಸಿಬಿ ಬಳಸಿ ಹಂಪಿ ಕೋರ್‌ ವಲಯದಲ್ಲಿ ಪೈಪ್‌ಲೈನ್‌ ಕಾಮಗಾರಿ

ಹೊಸಪೇಟೆ: ಆಗ ಕೊಳವೆಬಾವಿ, ಈಗ ಪೈಪ್‌ಲೈನ್‌

ಶಶಿಕಾಂತ್ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ವಿರೋಧ ಲೆಕ್ಕಿಸದೆ ಹಂಪಿ ಕೋರ್‌ ವಲಯದಲ್ಲಿ ಪೈಪ್‌ಲೈನ್‌ ಕಾಮಗಾರಿ ಭರದಿಂದ ಮುಂದುವರಿದಿದೆ.

‘ಹಂಪಿ ಕೋರ್‌ ವಲಯದಲ್ಲಿ ಕೊಳವೆಬಾವಿ’ ಶೀರ್ಷಿಕೆ ಅಡಿ ಸೆಪ್ಟೆಂಬರ್‌ 18ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಕೊಳವೆಬಾವಿ ಹಾಕುವುದಕ್ಕೆ ತೀವ್ರ ವ್ಯಕ್ತವಾಗಿದ್ದರಿಂದ ಪೈಪ್‌ಲೈನ್‌ ಕಾಮಗಾರಿ ಕೈಬಿಡಲಾಗಿತ್ತು. ಒಂದುವರೆ ತಿಂಗಳ ಬಳಿಕ ಈಗ ಕಾಮಗಾರಿ ಕೈಗೆತ್ತಿಕೊಂಡಿದ್ದು ಮತ್ತೆ ಅಪಸ್ವರ ಕೇಳಿ ಬಂದಿದೆ.

ವಿರೋಧವೇಕೆ?: ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಹಾಗೂ ಉದ್ಯಾನ ನಿರ್ವಹಣೆಗಾಗಿ ಹಂಪಿಯ ಕೋರ್‌ ಜೋನ್‌ ವ್ಯಾಪ್ತಿಗೆ ಬರುವ ಚಂದ್ರಶೇಖರ ದೇವಸ್ಥಾನ ಸಮೀಪ ಕೊಳವೆಬಾವಿ ಕೊರೈಸಲಾಗಿದೆ. ಈಗ ಅಲ್ಲಿಂದ ಹಂಪಿಯ ಪರಿಸರದೊಳಕ್ಕೆ ಪೈಪ್‌ಲೈನ್‌ ಹಾಕಲು ಜೆಸಿಬಿಯಿಂದ ನೆಲ ಅಗೆಯಲಾಗುತ್ತಿದೆ. ಸಮೀಪದಲ್ಲಿಯೇ ರಾಣಿ ಸ್ನಾನಗೃಹ ಸ್ಮಾರಕವೂ ಇದೆ. ಸ್ಮಾರಕ ಸಮೀಪವೇ ಕಾಮಗಾರಿ ಕೈಗೆತ್ತಿಕೊಂಡಿರುವುದೇ ವಿರೋಧಕ್ಕೆ ಪ್ರಮುಖ ಕಾರಣ.

‘ಹಂಪಿ ಕೋರ್‌ ವಲಯದಲ್ಲಿ ಹೊಸದಾಗಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಯಂತ್ರೋಪಕರಣಗಳನ್ನು ಬಳಸುವಂತಿಲ್ಲ ಎಂದು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರವೇ ನಿಯಮ ರೂಪಿಸಿದೆ. ಆದರೆ, ಈಗ ಸ್ವತಃ ಅದೇ ನಿಯಮ ಉಲ್ಲಂಘಿಸಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದ್ದಾರೆ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ.

‘ಹಂಪಿ ಪರಿಸರದಲ್ಲಿ ಎಂದೂ ನೀರಿಗೆ ಕೊರತೆಯಾಗಿಲ್ಲ. ಸಮೀಪದಲ್ಲೇ ತುಂಗಭದ್ರಾ ನದಿ ಹರಿಯುತ್ತದೆ. ತುಂಗಭದ್ರಾ ಜಲಾಶಯ ಹಾಗೂ ವಿಜಯನಗರ ಕಾಲದ ಉಪಕಾಲುವೆಗಳಿವೆ. ಈಗ ನಡೆಯುತ್ತಿರುವ ಕಾಮಗಾರಿ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಪುರಾತನ ಬಾವಿ ಇದೆ. ಇಷ್ಟೆಲ್ಲ ನೀರಿಗೆ ಅವಕಾಶಗಳಿದ್ದರೂ ಹೊಸದಾಗಿ ಕೊಳವೆಬಾವಿ ಕೊರೈಸುವ ಅವಶ್ಯಕತೆಯಾದರೂ ಏನಿತ್ತು’ ಎಂದು ಮಾಳಗಿ ಪ್ರಶ್ನಿಸಿದ್ದಾರೆ.

‘ಒಂದಾದ ನಂತರ ಒಂದು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡರೆ ಹಂಪಿಯ ಅಸ್ತಿತ್ವವೇ ಅಳಿಸಿ ಹೋಗಬಹುದು. ಕೂಡಲೇ ಕಾಮಗಾರಿ ನಿಲ್ಲಿಸಲು ಪ್ರಾಧಿಕಾರ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

*********

ಕುಡಿಯುವ ನೀರು, ಉದ್ಯಾನ ನಿರ್ವಹಣೆಗೆ ನೀರಿನ ಅಗತ್ಯವಿದೆ. ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ

-ಪಿ. ಕಾಳಿಮುತ್ತು, ಉಪ ಅಧಿಕ್ಷಕ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತ

ಇದನ್ನೂ ಓದಿ: ಹಂಪಿ ಕೋರ್‌ ಜೋನ್‌ನಲ್ಲಿ ನಿತ್ಯ ಸ್ಫೋಟ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು