ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಮಾಡಿದ್ದಕ್ಕೆ ಠಾಣೆಗೆ ದೂರು

ಕೆಲಸಕ್ಕೆ ಹಾಜರಾಗಲು ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ– ಸಾರಿಗೆ ನೌಕರರ ಆರೋಪ
Last Updated 11 ಏಪ್ರಿಲ್ 2021, 11:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಮಾಡಿದ ಸಾರಿಗೆ ಸಂಸ್ಥೆಯ ನಗರದ ಬಸ್‌ ಡಿಪೊ ಮೆಕ್ಯಾನಿಕ್‌ ಕೆ. ಸುರೇಶ್‌ ರೇವಣ್ಣ ವಿರುದ್ಧ ಡಿಪೊ ವ್ಯವಸ್ಥಾ‍ಪಕ ಪೊಲೀಸ್‌ ಠಾಣೆಗೆ ದೂರು ಕೊಟ್ಟು ಬೆದರಿಸಿ, ಕೆಲಸಕ್ಕೆ ಕರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೆಎಸ್‌ಆರ್‌ಟಿಸಿ ನೌಕರರ ಕೂಟದ ಸಂಸ್ಥಾಪಕ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಅವರು ಏ. 9ರಂದು ಮುಷ್ಕರ ಕುರಿತ ವಿಡಿಯೊ ಒಂದನ್ನು ಅವರ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು. ‘ನಮ್ಮ ಜೀವ ಹೋದರೂ ಪರವಾಗಿಲ್ಲ. ಆರನೇ ವೇತನ ಆಯೋಗ ಆಗಲೇಬೇಕು. ಇತಿಹಾಸ ಪುಟ ಸೇರಲು ನಮ್ಮ ಹೋರಾಟ’ ಎಂದು ಅದನ್ನು ಬೆಂಬಲಿಸಿ ಸುರೇಶ್‌ ಕಾಮೆಂಟ್‌ ಮಾಡಿದ್ದರು.

‘ನಿಷ್ಠಾವಂತ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ, ಕಾನೂನುಬಾಹಿರ ಮುಷ್ಕರದಲ್ಲಿ ಪಾಲ್ಗೊಂಡು ಸದರಿ ಮುಷ್ಕರ ಮುಂದುವರೆಯಲು ಸುರೇಶ್‌ ಫೇಸ್‌ಬುಕ್‌ನಲ್ಲಿ ಪ್ರಚೋದಿಸಿದ್ದಾರೆ. ನಂತರ ಫೇಸ್‌ಬುಕ್‌ನಲ್ಲಿ ಮಾಡಿದ ಕಾಮೆಂಟ್‌ನ ಪ್ರಿಂಟ್‌ ತೆಗೆದು ಇತರೆ ಸಿಬ್ಬಂದಿಗೆ ಹಂಚಿ ಕರ್ತವ್ಯಕ್ಕೆ ಗೈರಾಗುವಂತೆ ಮಾಡಿದ್ದಾರೆ. ಇದು ಸರ್ಕಾರದ ಆದೇಶದ ಉಲ್ಲಂಘನೆ. ಸುರೇಶ್‌ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಡಿಪೊ ವ್ಯವಸ್ಥಾಪಕ ಸತ್ಯನಾರಾಯಣ ಮೂರ್ತಿ ಯಾದವ್‌ ಅವರು ಠಾಣೆಗೆ ದೂರು ಕೊಟ್ಟಿದ್ದಾರೆ.

ಆದರೆ, ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಸಣ್ಣಪುಟ್ಟ ವಿಷಯಗಳಿಗೆಲ್ಲ ಕಾನೂನು ಕ್ರಮ ಜರುಗಿಸಲು ಆಗುವುದಿಲ್ಲ’ ಎಂದು ಪೊಲೀಸರು, ಡಿಪೊ ವ್ಯವಸ್ಥಾಪಕರಿಗೆ ತಿಳಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ವಿಷಯವನ್ನು ಪೊಲೀಸರೇ ಖಚಿತಪಡಿಸಿದ್ದಾರೆ.

ಠಾಣೆಗೆ ದೂರು ಕೊಟ್ಟಿರುವ ವಿಷಯ ಗೊತ್ತಾಗಿ ಸುರೇಶ್‌ ಅವರು ಕೆಲಸಕ್ಕೆ ಮರಳಿದ್ದಾರೆ. ಬಳಿಕ ಅವರ ವಿರುದ್ಧ ಕೊಟ್ಟಿರುವ ದೂರು ಹಿಂಪಡೆದಿದ್ದಾರೆ. ಈ ಕುರಿತು ‘ಪ್ರಜಾವಾಣಿ’ ಸುರೇಶ್‌ ಅವರನ್ನು ಸಂಪರ್ಕಿಸಿದಾಗ, ‘ಫೇಸ್‌ಬುಕ್‌ನಲ್ಲಿ ನಾನು ಕಾಮೆಂಟ್‌ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಠಾಣೆಗೆ ದೂರು ಕೊಟ್ಟಿದ್ದರು. ದೂರು ಕೊಡುವುದು ಬೇಡ ಎಂದು ವಿನಂತಿಸಿದಾಗ, ಪುನಃ ಕೆಲಸಕ್ಕೆ ಬರುವಂತೆ ಒತ್ತಡ ಹೇರಿದರು. ಇಡೀ ಕುಟುಂಬ ನಿರ್ವಹಣೆಯ ಹೊಣೆ ನನ್ನ ಮೇಲಿದೆ. ಅನಿವಾರ್ಯವಾಗಿ ಕೆಲಸಕ್ಕೆ ಮರಳಿರುವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಮೇಲಧಿಕಾರಿಗಳ ಸೂಚನೆ ಮೇರೆಗೆ ಸುರೇಶ್‌ ವಿರುದ್ಧ ಠಾಣೆಗೆ ದೂರು ಕೊಡಲಾಗಿತ್ತು. ಸುರೇಶ್‌ ಅವರು ತಪ್ಪಾಗಿದೆ ಎಂದು ಕ್ಷಮೆ ಕೇಳಿ ಪುನಃ ಕೆಲಸಕ್ಕೆ ಮರಳಿದ್ದಾರೆ. ದೂರು ಹಿಂಪಡೆಯಲಾಗಿದೆ’ ಎಂದು ಡಿಪೊ ವ್ಯವಸ್ಥಾಪಕ ಸತ್ಯನಾರಾಯಣ ಯಾದವ್‌ ತಿಳಿಸಿದ್ದಾರೆ.

ಬೆದರಿಕೆ ಆರೋಪ:

‘ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಗೂ ವೈಯಕ್ತಿಕವಾಗಿ ಕರೆ ಮಾಡಿ ಬೆದರಿಸುತ್ತಿದ್ದಾರೆ. ಮೊಬೈಲ್‌ ಕರೆ ಸ್ವೀಕರಿಸದವರ ಮನೆಗೆ ಸಿಬ್ಬಂದಿಯನ್ನು ಕಳುಹಿಸಿ, ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಸುರೇಶ್‌ ಅವರಿಗೂ ಹಾಗೆಯೇ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕಿಗಾಗಿ ಮಾತಾಡುವುದು ತಪ್ಪೇ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಪ್ರಶ್ನಿಸಿದ್ದಾರೆ.

‘ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೊ ವ್ಯವಸ್ಥಾಪಕರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸಿಬ್ಬಂದಿಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಉಸಿರು ಗಟ್ಟುವ ವಾತಾವರಣದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಡಿಪೊ ವ್ಯವಸ್ಥಾಪಕ ಸತ್ಯನಾರಾಯಣ ಅವರು ಈ ಹಿಂದೆ ಹಗರಿಬೊಮ್ಮನಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಸಂಘದ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಅವರನ್ನು ಸತ್ಕರಿಸಿದ್ದರು. ಹಾಗಿದ್ದರೆ ಅವರ ವಿರುದ್ಧವೂ ಈಗ ಕ್ರಮ ಜರುಗಿಸಬಹುದೇ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಅಂದಿನ ಸ್ಥಿತಿಯೇ ಬೇರೆ. ಇಂದಿನ ಪರಿಸ್ಥಿತಿಯೇ ಬೇರೆ. ಹೋರಾಟಕ್ಕೆ ಸಂಬಂಧಿಸಿದಂತೆ ನಾನು ಚಂದ್ರಶೇಖರ್‌ ಅವರನ್ನು ಸನ್ಮಾನಿಸಿರಲಿಲ್ಲ. ಸಂಘದ ಅಧ್ಯಕ್ಷರಾಗಿದ್ದರಿಂದ ಅವರನ್ನು ಆತ್ಮೀಯವಾಗಿ ಸ್ವಾಗತ ಕೋರಿ ಸನ್ಮಾನಿಸಿದ್ದೆ’ ಎಂದು ಸತ್ಯನಾರಾಯಣ ತಿಳಿಸಿದ್ದಾರೆ.

ಮುಂದುವರಿದ ಮುಷ್ಕರ

ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಭಾನುವಾರ ಐದನೇ ದಿನಕ್ಕೆ ಕಾಲಿರಿಸಿದೆ.
ಪಟ್ಟು ಪಡದೆ ಮುಷ್ಕರ ಬೆಂಬಲಿಸಿ ಬಹುತೇಕ ಸಿಬ್ಬಂದಿ ಈಗಲೂ ಕೆಲಸದಿಂದ ದೂರ ಉಳಿದಿದ್ದಾರೆ. ಇದರ ಪರಿಣಾಮ ಬೆರಳೆಣಿಕೆಯಷ್ಟು ಬಸ್ಸುಗಳು ಕೇಂದ್ರ ಬಸ್‌ ನಿಲ್ದಾಣದಿಂದ ಸಂಚರಿಸಿದವು. ಭಾನುವಾರವೂ ನಿಲ್ದಾಣದಲ್ಲಿ ಖಾಸಗಿ ವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದವು.

ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳನ್ನು ಹೊರತುಪಡಿಸಿ ತಾಲ್ಲೂಕು ಕೇಂದ್ರಗಳಿಗೆ ಸೀಮಿತವಾಗಿ ಕೆಲವು ಬಸ್‌ಗಳು ಸಂಚರಿಸುತ್ತಿರುವುದು ಕಂಡು ಬಂತು. ಆದರೆ, ಪ್ರಯಾಣಿಕರೇ ಇರಲಿಲ್ಲ. ಖಾಸಗಿ ವಾಹನಗಳು ಬಸ್‌ ನಿಲ್ದಾಣದಿಂದಲೇ ಸಂಚರಿಸುತ್ತಿದ್ದರೂ ಜನ ನಿಲ್ದಾಣದತ್ತ ಸುಳಿಯುತ್ತಿಲ್ಲ.

ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಪ್ರಚೋದಿಸಿದ್ದರಿಂದ ಸುರೇಶ್‌ ವಿರುದ್ಧ ಠಾಣೆಗೆ ದೂರು ಕೊಡಲಾಗಿತ್ತು. ಯಾವ ಸಿಬ್ಬಂದಿಗೂ ಹೆದರಿಸಿಲ್ಲ, ನಿಂದಿಸಿಲ್ಲ.
–ಜಿ. ಶೀನಯ್ಯ, ವಿಭಾಗೀಯ ನಿಯಂತ್ರಣಾಧಿಕಾರಿ, ಹೊಸಪೇಟೆ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT