ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗ ನೂರರ ಸಂಭ್ರಮ.
1920ರಲ್ಲಿ ಹೊಸಪೇಟೆಯಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿದ್ದ ಈ ನೆಲವೂ ಚಾರಿತ್ರಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವ ಪಡೆದಿದ್ದ ಕಾರಣಕ್ಕಾಗಿ ಸಮ್ಮೇಳನಕ್ಕೆ ಹೊಸಪೇಟೆ ನಗರ ಆಯ್ಕೆ ಮಾಡಲಾಗಿತ್ತು ಎನ್ನುವುದು ವಿಶೇಷ.
ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಬಳ್ಳಾರಿ ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ತಮಿಳು ಆಡಳಿತ ಭಾಷೆಯಾಗಿತ್ತು. ಶಾಲೆಗಳಲ್ಲಿ ತೆಲುಗು ಕಲಿಕೆಗೆ ಹೆಚ್ಚಿನ ಬೇಡಿಕೆಯಿತ್ತು. ಕನ್ನಡ ಮನೆಯ ಭಾಷೆಯಾಗಿ ಸೀಮಿತವಾಗಿತ್ತು. ಕನ್ನಡ ಭಾಷೆಯ ಅಸ್ತಿತ್ವ ಉಳಿಸಿಕೊಂಡು, ಅದನ್ನು ಬೆಳೆಸುವ ದೃಷ್ಟಿಯಿಂದ ಸಾಹಿತ್ಯ ಸಮ್ಮೇಳನ ಆ ಕಾಲಕ್ಕೆ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು.
ಅಂದಹಾಗೆ, ಆ ಕಾಲಕ್ಕೆ ಜಿಲ್ಲೆಯಲ್ಲಿ ಅಖಿಲ ಭಾರತ ಮಟ್ಟದ ಸಮ್ಮೇಳನ ಆಯೋಜಿಸುವುದರಲ್ಲಿ ಇಲ್ಲಿನ ಚಿತ್ತವಾಡ್ಗಿ ಹನುಮಂತಗೌಡರು ಪ್ರಮುಖ ಪಾತ್ರ ವಹಿಸಿದ್ದರು. ವೃತ್ತಿಯಿಂದ ವಕೀಲರಾಗಿದ್ದ ಅವರು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದ ಬಗ್ಗೆ ವಿಶೇಷ ಅಭಿರುಚಿ ಹೊಂದಿದ್ದರು.
ನಗರಸಭೆಯ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದರು. ಅವರ ವಿಶೇಷ ಆಸ್ಥೆಯಿಂದಾಗಿ, ತಮಿಳು, ತೆಲುಗು ಭಾಷೆಗಳ ಪ್ರಭಾವ ಹೊಂದಿದ್ದ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಸಾಧ್ಯವಾಯಿತು ಎಂದು ನೆನಪಿಸಿಕೊಳ್ಳುತ್ತಾರೆ ಸಾಹಿತಿಗಳು.
‘ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ ಐದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿವೆ. ಆದರೆ, 1920ರಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನ ಅನೇಕ ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿತ್ತು. ತಮಿಳು, ತೆಲುಗು ಭಾಷೆಗಳ ಪ್ರಭಾವದಲ್ಲಿ ಕನ್ನಡ ಭಾಷೆ ಕುಗ್ಗಿ ಹೋಗಿತ್ತು. ಆದರೆ, ಸಮ್ಮೇಳನದ ಮೂಲಕ ಅದರ ಅಸ್ತಿತ್ವ ಉಳಿಸಿಕೊಳ್ಳುವ ದೊಡ್ಡ ಪ್ರಯತ್ನ ನಡೆಯಿತು. ಅದರ ಫಲ ಈಗ ನಮ್ಮ ಮುಂದಿದೆ. ತಮಿಳು, ತೆಲುಗು ಭಾಷೆಗಳನ್ನು ಮೀರಿಸಿ ಈಗ ಕನ್ನಡ ಹೆಚ್ಚು ಚಾಲ್ತಿಯಲ್ಲಿದೆ’ ಎಂದು ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ಖುಷಿಯಿಂದ ಹೇಳಿದರು.
‘1920ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಾಗ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಆದರೆ, ಅದನ್ನು ಗೊತ್ತುಪಡಿಸುವ ಕೆಲಸ ಆ ಸಮ್ಮೇಳನದ ಮೂಲಕ ಚಿತ್ತವಾಡ್ಗಿ ಹನುಮಂತಗೌಡರು ಮಾಡಿದರು. ಧರ್ಮಸಾಗರದ ಅಯ್ಯಪ್ಪ ರೆಡ್ಡಿಯವರ ಖಾಸಗಿ ಒಡೆತನದ ರಂಗಮಂದಿರದಲ್ಲಿ ಸಮ್ಮೇಳನಕ್ಕೆ ವ್ಯವಸ್ಥೆ ಮಾಡಿದ್ದರು. ಸಮ್ಮೇಳನಕ್ಕೆ ಬಂದಿದ್ದ ಜನಪ್ರತಿನಿಧಿಗಳು, ಗಣ್ಯರು ಹಾಗೂ ನೂರಾರು ಅತಿಥಿಗಳ ವ್ಯವಸ್ಥೆಯ ಸಂಪೂರ್ಣ ಹೊಣೆಗಾರಿಕೆಯನ್ನು ಹನುಮಂತಗೌಡರೊಬ್ಬರೇ ವಹಿಸಿಕೊಂಡಿದ್ದರು’ ಎಂದು ಸ್ಮರಿಸಿದರು.
‘ಹೊಸಪೇಟೆಯಲ್ಲಿ ನಡೆದ ಆ ಸಮ್ಮೇಳನದ ಸರ್ವಾಧ್ಯಕ್ಷತೆ ದಿವಾನ್ ಬಹಾದ್ದೂರ್ ದೊಡ್ಡ ಶ್ರೀನಿವಾಸರಾಯರು ವಹಿಸಿದ್ದರು. ಪ. ಶಿವರಾಯ ಮತ್ತು ಆರ್ಕಾಟ್ ಭೀಮಾಚಾರ್ಯರು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಸಮ್ಮೇಳನ ಆಯೋಜಿಸಿದ್ದ ರಂಗಮಂದಿರ ಬಳಿಕ ರಾಮಾ ಟಾಕೀಸ್ ಆಗಿ ಬದಲಾಯಿತು. ಈಗ ಆ ಚಲನಚಿತ್ರ ಮಂದಿರದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ತಲೆ ಎತ್ತಿದೆ’ ಎಂದು ವಿವರಿಸಿದರು.
‘ಹನುಮಂತಗೌಡರು ವೃತ್ತಿಯಿಂದ ವಕೀಲರಾಗಿದ್ದರೂ ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಸ್ವತಃ ಅವರೊಬ್ಬ ಕವಿ, ಲೇಖಕರಾಗಿದ್ದರು. ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯು ಅವರಿಗೆ ‘ರಾವ್ ಬಹಾದ್ದೂರ್’, ‘ಹಾನರರಿ ಮ್ಯಾಜಿಸ್ಟ್ರೇಟ್’ ಪುರಸ್ಕಾರದಿಂದ ಗೌರವಿಸಿತ್ತು. ಅವರ ಒಂದು ಸಣ್ಣ ಪ್ರಯತ್ನದಿಂದ ಬಹಳಷ್ಟು ಬದಲಾವಣೆ ತಂದಿತು’’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.