ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಗಣಿನಗರಿಯ ಕಾರಿನ ಖದರ್‌

Last Updated 6 ಅಕ್ಟೋಬರ್ 2020, 3:21 IST
ಅಕ್ಷರ ಗಾತ್ರ
ADVERTISEMENT
"‘ಕೋನಿಗ್‌ ಸೇಗ್‌’ ಕಂಪನಿಯ ಕಾರು"

ಹೊಸಪೇಟೆ: ಅಕ್ರಮ ಗಣಿಗಾರಿಕೆಗೆ ಬ್ರೇಕ್‌ ಬಿದ್ದು ದಶಕಕ್ಕೂ ಹೆಚ್ಚು ಕಾಲ ಕಳೆದಿದೆ. ಆದರೆ, ಗಣಿನಗರಿಯ ಜನರ ಐಷಾರಾಮಿ ಬದುಕಿನಲ್ಲೇನೂ ವ್ಯತ್ಯಾಸವಾಗಿಲ್ಲ.

ಅದರಲ್ಲೂ ಈ ಭಾಗದ ಜನರ ಐಷಾರಾಮಿ ಕಾರುಗಳ ಬಗೆಗಿನ ವ್ಯಾಮೋಹ ಕಿಂಚಿತ್ತೂ ಕಡಿಮೆ ಆಗಿಲ್ಲ. ಮಾರುಕಟ್ಟೆಯಲ್ಲಿ ಯಾವುದೇ ಹೊಸ ಬಗೆಯ ಐಷಾರಾಮಿ ಕಾರು ಬಂದರೆ, ಅದು ಮೊದಲು ಬರುವುದು ಗಣಿನಗರಿಗೆ. ಕಾರುಗಳ ಬಗೆಗಿನ ಹುಚ್ಚು ಎಷ್ಟಿದೆ ಎನ್ನುವುದನ್ನು ಇದರಿಂದಲೇ ಮನಗಾಣಬಹುದು. ಇದಕ್ಕೆ ತಾಜಾ ನಿದರ್ಶನ, ಹೋದ ವರ್ಷದ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಕಿಯಾ’.

‘ಕಿಯಾ’ ಮಾರುಕಟ್ಟೆಗೆ ಬಂದ ನಂತರ ಅತಿ ಹೆಚ್ಚು ಬೇಡಿಕೆ ಬಂದಿದ್ದು, ಬಳ್ಳಾರಿ ಜಿಲ್ಲೆಯಿಂದ ಎನ್ನುವುದು ವಿಶೇಷ. ಮೊದಲೆರಡು ತಿಂಗಳಲ್ಲಿ ಜಿಲ್ಲೆಗೆ 20 ‘ಕಿಯಾ’ ಕಾರುಗಳು ಬಂದವು. ವರ್ಷ ಕಳೆಯುವುದರೊಳಗೆ ಆ ಸಂಖ್ಯೆ ಬಹಳ ಹೆಚ್ಚಾಗಿದೆ. ‘ಕಿಯಾ ಕಾರ್ನಿವಲ್‌’ ಕೂಡ ಹಿಂದುಳಿದಿಲ್ಲ. ಕಂಪನಿಯ ಕಾರುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದರಿಂದ ಬಳ್ಳಾರಿಯಲ್ಲಿ ಪ್ರತ್ಯೇಕವಾಗಿ ಡೀಲರ್‌ ಒಬ್ಬರನ್ನು ‘ಕಿಯಾ’ ಕಂಪನಿ ನಿಯೋಜಿಸಿದೆ.

ಅಂದಹಾಗೆ, ಜಿಲ್ಲೆಯ ಗಣಿ ಮಾಲೀಕರ ಬಳಿ ಆರು ಕೋಟಿಗೂ ಅಧಿಕ ಮೊತ್ತದ ಐಷಾರಾಮಿ ಕಾರುಗಳಿವೆ. ₹6.5 ಕೋಟಿಗೂ ಅಧಿಕ ಬೆಲೆಯ ರೋಲ್ಸ್‌ ರಾಯ್ಸ್‌, ವರ್ಷಕ್ಕೆ ಕೇವಲ ನಾಲ್ಕು ಕಾರುಗಳಷ್ಟೇ ತಯಾರಿಸುವ ‘ಕೋನಿಗ್‌ ಸೇಗ್‌’ ಕಂಪನಿಯ ಕಾರು ಕೂಡ ಜಿಲ್ಲೆಯಲ್ಲಿದೆ. ಅದರ ಬರೋಬ್ಬರಿ ಮೊತ್ತ ₹4.5 ಕೋಟಿ. ಇದಲ್ಲದೇ ₹3.5 ಕೋಟಿ ಬೆಲೆಬಾಳುವ ‘ಆ್ಯಸ್ಟನ್‌ ಮಾರ್ಟಿನ್‌’, ₹2 ಕೋಟಿಯ ‘ಫೆರಾರಿ’, ಇನ್ನುಳಿದಂತೆ ಲ್ಯಾಂಬೊರ್ಗಿನಿ, ಮರ್ಸಿಡಿಜ್‌ ಬೆಂಜ್‌, ಬಿಎಂಡಬ್ಲ್ಯೂ, ರೇಂಜ್‌ ರೋವರ್‌, ಲ್ಯಾಂಡ್‌ ರೋವರ್‌, ಆಡಿ ಕಾರುಗಳಿವೆ.

ಇವುಗಳ ಜತೆಗೆ ಎಂ.ಜಿ., ಟೊಯೊಟಾ, ಹೊಂಡಾ, ಟಾಟಾ, ಮಾರುತಿ ಸುಜುಕಿ, ಹುಂಡೈ, ಮಹೀಂದ್ರಾ ಕಂಪನಿಯ ಎಸ್‌ಯುವಿ, ಸೆಡಾನ್‌ ಕಾರುಗಳಿವೆ. ಈ ಕಂಪನಿಗೆ ಸೇರಿದ ಹೊಸ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾದ ನಂತರ ಬಳ್ಳಾರಿಯಲ್ಲಿ ಪ್ರತ್ಯೇಕವಾಗಿ ಬಿಡುಗಡೆಗೊಳಿಸುವ ಪರಿಪಾಠವನ್ನು ಇಲ್ಲಿನ ಶೋ ರೂಂಗಳು ಬೆಳೆಸಿಕೊಂಡಿವೆ. ಕಾರುಗಳ ಬಗೆಗೆ ಇಲ್ಲಿನ ಜನರಿಗಿರುವ ಒಲವು, ಅದನ್ನು ಬಂಡವಾಳವಾಗಿಸಿಕೊಂಡು ವಹಿವಾಟು ಹೆಚ್ಚಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶ.

‘ಗಣಿಗಾರಿಕೆ ತಗ್ಗಿದರೂ ಐಷಾರಾಮಿ ಕಾರುಗಳ ಬಗೆಗಿನ ವ್ಯಾಮೋಹ ಗಣಿ ಮಾಲೀಕರಿಗೆ ಕಡಿಮೆಯಾಗಿಲ್ಲ. ಈಗಲೂ ಹೊಸ ಕಾರು ಮಾರುಕಟ್ಟೆಗೆ ಬಂದರೆ ಗಣಿ ಮಾಲೀಕರ ಮನೆ ಎದುರು ಕಾಣಿಸಿಕೊಳ್ಳುತ್ತದೆ. ಅದನ್ನು ಓಡಿಸುವುದು ಅಪರೂಪ. ಆದರೆ, ಪ್ರತಿಷ್ಠೆಗಾಗಿ ಖರೀದಿಸುವುದು ಇದೆ’ ಎಂದು ಹೆಸರು ಹೇಳಲಿಚ್ಛಿಸದ ಗಣಿ ಉದ್ಯಮಿಯೊಬ್ಬರು ತಿಳಿಸಿದರು.

ತಗ್ಗಿದ ವಹಿವಾಟು:

ಅಕ್ರಮ ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಬಹುತೇಕ ಕಾರು ಕಂಪನಿಯ ಶೋ ರೂಂಗಳು ಜಿಲ್ಲೆಯಲ್ಲಿ ಆರಂಭವಾಗಿದ್ದವು. ನಿರೀಕ್ಷಿಸಿದಂತೆ ಅವುಗಳ ವಹಿವಾಟು ಕೂಡ ಹೆಚ್ಚಿತ್ತು. ಆದರೆ, ಅಕ್ರಮ ಗಣಿಗಾರಿಕೆಗೆ ತಡೆ ಬಿದ್ದ ನಂತರ ವಹಿವಾಟಿನಲ್ಲಿ ಸ್ವಲ್ಪ ಇಳಿಕೆಯಾಗಿದೆ.

‘2005–6ರಲ್ಲಿ ಪ್ರತಿ ತಿಂಗಳು ಬೊಲೊರೆ, ಸ್ಕಾರ್ಪಿಯೊ ಸೇರಿದಂತೆ ನಮ್ಮ ಕಂಪನಿಯ ಸುಮಾರು 200 ವಾಹನಗಳು ಮಾರಾಟವಾಗುತ್ತಿದ್ದವು. ಈಗ ಆ ಸಂಖ್ಯೆ ಕಡಿಮೆಯಾಗಿದೆ. ಜನರ ಬಳಿ ಹಣದ ಓಡಾಟ ಕಡಿಮೆಯಾಗಿದೆ. ಪ್ರತಿಸ್ಪರ್ಧಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಲಗ್ಗೆ ಇಟ್ಟಿವೆ. ಜನ ಒಂದೇ ಕಂಪನಿಯ ಬದಲು ಬೇರೆ ಬೇರೆ ಕಂಪನಿಯ ವಾಹನಗಳ ಮೊರೆ ಹೋಗುತ್ತಿದ್ದಾರೆ’ ಎನ್ನುತ್ತಾರೆ ಹೊಸಪೇಟೆಯ ಮಹೀಂದ್ರಾ ಶೋ ರೂಂ ವ್ಯವಸ್ಥಾಪಕ ರಾಮಚಂದ್ರ.

‘2007–08ರಲ್ಲಿ ನಾವು ಶೋ ರೂಂ ಆರಂಭಿಸಿದ್ದೆವು. ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತಿಂಗಳಿಗೆ ಸರಾಸರಿ 30 ವಾಹನಗಳು ಮಾರಾಟವಾಗುತ್ತಿದ್ದವು. ಈಗ ಆ ಸಂಖ್ಯೆ ಸ್ವಲ್ಪ ತಗ್ಗಿದೆ. ಅಷ್ಟೇ ಅಲ್ಲ, ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಶೋ ರೂಂಗಳು ಬಂದಿವೆ. ನೆರೆಯ ಸಣ್ಣ ಜಿಲ್ಲೆಗಳಲ್ಲೂ ಶೋ ರೂಂಗಳು ಹೆಚ್ಚಾಗಿವೆ. ಗಣಿಗಾರಿಕೆ ತಗ್ಗಿದ ನಂತರ ಜನರ ಬಳಿ ಹಣ ಓಡಾಡುವುದು ಕೂಡ ಕಮ್ಮಿಯಾಗಿದೆ. ಸಹಜವಾಗಿಯೇ ಖರೀದಿಸುವುದು ಸಹ ಕಡಿಮೆಯಾಗಿದೆ’ ಎಂದು ಮುನೀರ್‌ ಕಾರ್‌ ಶೋ ರೂಂನ ವ್ಯವಸ್ಥಾಪಕ ಕಾಸಿಂ ರೌಫ್‌ ತಿಳಿಸಿದರು.

ಗಣಿಗಳಲ್ಲಿ ದುಡಿಯುವವರು ಆಟೊ ಚಾಲಕರಾದರು:

ಈ ಹಿಂದೆ ಗಣಿಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದವರು ಈಗ ಆಟೊ ಓಡಿಸಿ ಜೀವನ ನಡೆಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ನಿಂತ ನಂತರ ಹೆಚ್ಚಿನವರು ಕೆಲಸ ಕಳೆದುಕೊಂಡರು. ಗಳಿಸಿದ ಹಣದಿಂದ ಆಟೊ ಖರೀದಿಸಿ, ಅದನ್ನು ಓಡಿಸುತ್ತ ಜೀವನ ನಡೆಸುತ್ತಿದ್ದಾರೆ.

ದಶಕದ ಹಿಂದೆ ಜಿಲ್ಲೆಯಲ್ಲಿ ಸರಿಸುಮಾರು ಎರಡು ಸಾವಿರ ಆಟೊಗಳಿದ್ದವು. ಈಗ ಆ ಸಂಖ್ಯೆ ಹತ್ತು ಸಾವಿರ ಮೀರಿದೆ. ಅದರಲ್ಲಿ ಬಳ್ಳಾರಿ, ಹೊಸಪೇಟೆಯದ್ದು ಸಿಂಹಪಾಲು. ‘ಗಣಿಗಾರಿಕೆ ನಿಂತ ನಂತರ ನೂರಾರು ಜನ ಕೆಲಸ ಕಳೆದುಕೊಂಡರು. ಬೇರೆ ಕೆಲಸ ಗೊತ್ತಿಲ್ಲದ ಜನ ಗಳಿಸಿದ ಹಣದಿಂದ ಆಟೊ ಖರೀದಿಸಿದರು. ಆಟೊಗಳ ಸಂಖ್ಯೆ ಹೆಚ್ಚಾಗಲು ಅದು ಕೂಡ ಒಂದು ಕಾರಣ’ ಎನ್ನುತ್ತಾರೆ ಆಟೊ ಯೂನಿಯನ್‌ ಅಧ್ಯಕ್ಷ ಕೆ.ಎಂ. ಸಂತೋಷ್‌ ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT