ಭಾರಿ ಬಿರುಗಾಳಿಯೊಂದಿಗೆ ವರ್ಷಧಾರೆ

7
ತುಂಬಿ ಹರಿದ ಚರಂಡಿಗಳು, ರಸ್ತೆ ಮೇಲೆ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತ

ಭಾರಿ ಬಿರುಗಾಳಿಯೊಂದಿಗೆ ವರ್ಷಧಾರೆ

Published:
Updated:
Deccan Herald

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಭಾರಿ ಬಿರುಗಾಳಿಯೊಂದಿಗೆ ಬಿರುಸಿನ ಮಳೆಯಾಯಿತು.

ಬೆಳಿಗ್ಗೆಯಿಂದ ದಟ್ಟ ಕಾರ್ಮೋಡ ಆವರಿಸಿಕೊಂಡಿತ್ತು. ಮೋಡ ಬದಿಗೆ ಸರಿದು ಕೆಂಡದಂತಹ ಬಿಸಿಲು ಬಿದ್ದಿತ್ತು. ಮಧ್ಯಾಹ್ನ 3ರ ಹೊತ್ತಿಗೆ ದಟ್ಟ ಮೋಡಗಳು ಆವರಿಸಿಕೊಂಡು, ಬಿರುಗಾಳಿಯೊಂದಿಗೆ ಬಿರುಸಿನ ವರ್ಷಧಾರೆಯಾಯಿತು.

ಸತತ ಒಂದು ಗಂಟೆ ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ನಗರದ ಬಹುತೇಕ ಭಾಗಗಳು ಹಾಗೂ ರಸ್ತೆಗಳಲ್ಲಿ ನೀರು ನಿಂತುಕೊಂಡಿತ್ತು. ರಾಘವೇಂದ್ರ ಗುಡಿ, ಈಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯ ಚರಂಡಿಗಳು ತುಂಬಿ ಹರಿದವು.

ಹೊಲಸು ರಸ್ತೆಯ ಮಧ್ಯ ಭಾಗದಲ್ಲೇ ಹರಿಯಿತು. ಸಿದ್ಧಲಿಂಗಪ್ಪ ಚೌಕಿ, ಅಮರಾವತಿ, ಚಿತ್ತವಾಡ್ಗಿ, ರಾಣಿಪೇಟೆ, ಬಸವೇಶ್ವರ ಬಡಾವಣೆಯ ಕೆಲವು ಭಾಗಗಳಲ್ಲಿ ರಸ್ತೆ ಮೇಲೆ ನೀರು ನಿಂತುಕೊಂಡಿದ್ದರಿಂದ ಜನ ಹಾಗೂ ವಾಹನ ಓಡಾಟಕ್ಕೆ ಸಮಸ್ಯೆಯಾಯಿತು.

ಹಂಪಿ ಹಾಗೂ ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ, ಬಸ್‌ ನಿಲ್ದಾಣ ಎದುರಿನ ಮುಖ್ಯರಸ್ತೆಯಲ್ಲೂ ಮೊಳಕಾಲುದ್ದ ನೀರು ನಿಂತಿತ್ತು. ಭಾರಿ ಮಳೆಯಿಂದಾಗಿ ವಾಹನ ಚಲಾಯಿಸುವವರಿಗೆ ದೂರದಲ್ಲಿ ಏನೂ ಕಾಣುತ್ತಿರಲಿಲ್ಲ. ಇದರಿಂದಾಗಿ ಹಗಲಿನಲ್ಲೇ ದೀಪ ಬೆಳಗಿಸಿಕೊಂಡು ವಾಹನ ಓಡಿಸಿದರು.

ತಾಲ್ಲೂಕಿನ ಹಂಪಿ, ಕಡ್ಡಿರಾಂಪುರ, ಕಮಲಾಪುರ, ವ್ಯಾಸನಕೆರೆ, ಕಾರಿಗನೂರು, ಹೊಸೂರು, ಬಸವನದುರ್ಗ, ನಾಗೇನಹಳ್ಳಿ, ಮರಿಯಮ್ಮನಹಳ್ಳಿ, ಡಣಾಪುರ, ಸಣಾಪುರ ಸೇರಿದಂತೆ ವಿವಿಧ ಕಡೆ ಉತ್ತಮ ವರ್ಷಧಾರೆಯಾಗಿದೆ. ಮಳೆಯಿಂದಾಗಿ ಎಲ್ಲೆಡೆ ವಾತಾವರಣ ಸಂಪೂರ್ಣ ತಂಪಾಗಿತ್ತು.

ರೈತರಿಗೆ ಸಂತಸ:
ಮೇ ಎರಡನೇ ವಾರದ ನಂತರ ತಾಲ್ಲೂಕಿನಲ್ಲಿ ಮಳೆಯಾಗಿರಲಿಲ್ಲ. ಇದರಿಂದಾಗಿ ಅನೇಕ ಕಡೆ ಬೆಳೆ ಒಣಗಿ ಹೋಗಿತ್ತು. ಕೆಲವರು ಕಿತ್ತು ಹಾಕಿ, ಹೊಸ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದರು. ಇನ್ನು ಕೆಲವರು ಮಳೆಯ ನಿರೀಕ್ಷೆಯಲ್ಲಿದ್ದರು. ಮಳೆ ಬಂದ ಕಾರಣ ರೈತ ವರ್ಗಕ್ಕೆ ಸಂತಸವಾಗಿದೆ. ಸ್ವಲ್ಪ ಬೆಳೆಯಾದರೂ ಕೈ ಸೇರಿ, ಬಿತ್ತನೆಗೆ ಖರ್ಚು ಮಾಡಿದ ಹಣ ವಾಪಸ್‌ ಬಂದರೆ ಸಾಕು ಎನ್ನುತ್ತಿದ್ದಾರೆ ರೈತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !