ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ‘ರೋಜಾ’ ಪಾಲನೆಯೂ, ಹೆಣ್ಣು ಮಕ್ಕಳ ರಕ್ಷಣೆಯೂ

ನಾಳೆ ಈದ್‌ ಉಲ್‌ ಫಿತ್ರ್‌ ಸಂಭ್ರಮ; ಸೈಯದ್‌ ಚಾಂದ್‌ಪಾಷಾ ಅವರಿಗೆ ದೈವನಿಷ್ಠೆ ಜತೆಗೆ ಕರ್ತವ್ಯನಿಷ್ಠೆ
Last Updated 23 ಮೇ 2020, 19:45 IST
ಅಕ್ಷರ ಗಾತ್ರ

ಬಳ್ಳಾರಿ: ‘ತಾಲ್ಲೂಕಿನ ಶಂಕರಬಂಡೆ ಗ್ರಾಮದಲ್ಲಿ ನಾಳೆ ಬೆಳಗಿನ ಜಾವವೇ ಬಾಲ್ಯ ವಿವಾಹ ನಡೆಯಲಿದೆ ಎಂಬ ಕರೆಯೊಂದು ಬಂತು. ಬೆಳಗಿನ ಜಾವ ನಾವು ರೋಜಾ ಆರಂಭಿಸುವ ಸಮಯ. ಅದನ್ನು ಬಿಟ್ಟು ಬೇರೆಲ್ಲಿಗೂ ಹೋಗಲು ಆಗದು. ಹೀಗಾಗಿ ರಾತ್ರಿಯೇ ಕಾರ್ಯಾಚರಣೆ ರೂಪಿಸಿದೆವು. ಗ್ರಾಮಕ್ಕೆ ತೆರಳಿ ಬಾಲ್ಯವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಿಸಿ ಬಂದೆವು..’

ಹೀಗೆ ಹೇಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸೈಯದ್‌ ಚಾಂದ್‌ಪಾಷಾ ಅವರ ಕಣ್ಣಲ್ಲಿ ಕರ್ತವ್ಯನಿಷ್ಠೆ ಹೊಳೆಯಿತು.

ಇಂಥ ಬದ್ಧತೆಯ ಜೊತೆಗೇ, ರೋಜಾ ವ್ರತವನ್ನು ತಪ್ಪದೇ ಪಾಲಿಸಿದ ಸಂಭ್ರಮದಲ್ಲಿ ಹಾಗೂ ಹತ್ತಾರು ಬಾಲಕಿಯರನ್ನು ಅಕಾಲ ಮದುವೆಯಿಂದ ರಕ್ಷಿಸಿದ ಧನ್ಯತೆಯಲ್ಲಿ ಅವರು ಸೋಮವಾರದ ಈದ್‌ ಉಲ್‌ ಫಿತ್ರ್‌ಗೆ ಸಿದ್ಧರಾಗುತ್ತಿದ್ದಾರೆ.

‘ಬೆಳಿಗ್ಗೆ 10ರಿಂದ ಸಂಜೆ 5ರವರೆಗಷ್ಟೇ ಕೆಲಸ ಮಾಡುತ್ತೇವೆ ಎಂದರೆ ಬಾಲ್ಯವಿವಾಹಗಳನ್ನು ತಡೆಯಲು ಆಗುವುದಿಲ್ಲ. ಕದ್ದುಮುಚ್ಚಿ ಮದುವೆ ಮಾಡುವವರ ಬಗ್ಗೆ ಹಗಲು ರಾತ್ರಿ ಎಚ್ಚರದಲ್ಲಿರಬೇಕು. ಆದರೆ ದಿನವಿಡೀ ಉಪವಾಸ ಮತ್ತು ಪ್ರಾರ್ಥನೆಯಲ್ಲೇ ಇರಬೇಕಾದ ರೋಜಾ ವ್ರತ ಪಾಲನೆಯಿಂದ ದೇಹ ಮತ್ತು ಮನಸ್ಸು ದಣಿದಿರುತ್ತದೆ. ಅದೆಲ್ಲವನ್ನೂ ಪಕ್ಕಕ್ಕಿಟ್ಟೇ ಕೆಲಸ ಮಾಡಬೇಕು’ ಎಂದ ಅವರು, ಇಡೀ ತಿಂಗಳಲ್ಲಿ ಹಲವು ಕಾರ್ಯಾಚರಣೆಗಳನ್ನು ನಡೆಸಿದ್ದನ್ನು ಸ್ಮರಿಸಿದರು.

ಬಳ್ಳಾರಿ ತಾಲ್ಲೂಕಷ್ಟೇ ಅಲ್ಲ, ಜಿಲ್ಲೆಯ ಇತರೆ ತಾಲ್ಲೂಕಿನ ಕುಗ್ರಾಮಗಳಲ್ಲೂ ಏರ್ಪಾಡಾಗಿದ್ದ ಬಾಲ್ಯವಿವಾಹಗಳನ್ನು ಅವರು ತಡೆದು ಬಂದಿದ್ದಾರೆ. ಆದರೆ ಯಾವತ್ತೂ ರಂಜಾನ್‌ ಹಬ್ಬದ ಉಪವಾಸ ಮತ್ತು ಪ್ರಾರ್ಥನೆಗೆ ತೊಡಕಾಗದಂತೆ ಅದನ್ನು ನಿರ್ವಹಿಸಿರುವುದು ಅವರ ಹೆಗ್ಗಳಿಕೆ. ಹೀಗಾಗಿಯೇ ಚಂದ್ರಮ ಅವರಿಗೆ ಈ ಬಾರಿ ವಿಶೇಷವಾಗಿ ಕಾಣಿಸಬಹುದು!

‘ಇಂಥ ಅವಕಾಶ ಮತ್ತು ಸವಾಲು ಎಲ್ಲರಿಗೂ ಸಿಗುವುದಿಲ್ಲ. ಯಾರಿಗೂ ಕೇಡು ಬಗೆಯದೆ, ಎಲ್ಲರ ಒಳಿತನ್ನೇ ಬಯಸುತ್ತಾ ಉಪವಾಸ, ದಿನಕ್ಕೆ ಐದು ಬಾರಿ ನಮಾಜು ಮಾಡುವುದು ಕಷ್ಟ. ಆದರೆ ಸಾಧ್ಯ ಎಂಬುದಕ್ಕೆ ಈ ಹಬ್ಬವೇ ನಿದರ್ಶನ’ ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು.

ಈ ಮುಂಚೆ ಅವರಿಗೆ ಇಂಥ ಸವಾಲು ಎದುರಾಗಿರಲಿಲ್ಲ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನಿವೃತ್ತರನ್ನು ನೇಮಕ ಮಾಡಿಕೊಳ್ಳಬೇಕೆಂಬ ಸರ್ಕಾರದ ನಿಯಮದಿಂದಾಗಿ ಅವರು ರಕ್ಷಣಾ ಘಟಕಾಧಿಕಾರಿಯಾಗಿ ಕೆಲವು ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದರು.

ಕೊರೊನಾ ಕಾಲದಲ್ಲಿ ಯಾರ ಭೀತಿಯೂ ಇಲ್ಲದೆ ಬಾಲ್ಯ ವಿವಾಹ ಮಾಡಬಹುದು ಎಂಬ ಗ್ರಾಮೀಣ ಪ್ರದೇಶ ಜನರ ಅಭಿಪ್ರಾಯವನ್ನು ಅವರು ಈಗ ಹುಸಿಗೊಳಿಸಿದ್ದಾರೆ. ‘ಅಲ್ಲಾಹುವಿನ ಕಾರುಣ್ಯದ ಮೂಲಕವೇ ಒಳಿತು ಮಾಡಲು ಸಾಧ್ಯವಾಗುತ್ತಿದೆ’ ಎಂಬ ದೈವನಿಷ್ಠೆ ಮತ್ತು ಕರ್ತವ್ಯನಿಷ್ಠೆ ಎರಡೂ ಅವರಿಗೆ 2020ರ ಈದ್‌ ಉಲ್‌ ಫಿತ್ರ್‌ ಅನ್ನು ವಿಶೇಷವಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT