ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಆಹಾರ ಅದಾಲತ್– ಸ್ಥಳದಲ್ಲೇ ಸಿಕ್ಕಿತು ಪಡಿತರ ಚೀಟಿ!

ಕೋಟಾಲಪಲ್ಲಿ ಕೊಳಚೆಪ್ರದೇಶದಲ್ಲಿ ಅದಾಲತ್
Last Updated 23 ಜುಲೈ 2019, 8:38 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಕೋಟಾಲಪಲ್ಲಿ ಕೊಳಚೆ ಪ್ರದೇಶದಲ್ಲಿ ಪಡಿತರ ಚೀಟಿಗಾಗಿ ಹಲವು ದಿನಗಳಿಂದ ಕಾಯುತಿದ್ದ ಬಡಕುಟುಂಬಗಳಿಗೆ ಮಂಗಳವಾರ ಶುಭಕರವಾಗಿತ್ತು.

ಆಹಾರ,ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಯ ಪರಿಣಾಮವಾಗಿ, ಅರ್ಜಿ ಸಲ್ಲಿಸಿದ ಕೂಡಲೇ ಹಲವರು ಸ್ಥಳದಲ್ಲೇ ಪಡಿತರ ಚೀಟಿಯನ್ನು ಪಡೆದುಕೊಂಡರು.

ನಾಲ್ಕು ನ್ಯಾಯಬೆಲೆ ಬೆಲೆ ಅಂಗಡಿಗಳ ವ್ಯಾಪ್ತಿಯ ಸತ್ಯನಾರಾಯಣಪೇಟೆ, ಪಟೇಲ್ ನಗರ, ಹುಸೇನ್ ನಗರ, ಕೋಟಾಲಪಲ್ಲಿ, ಜಿಲ್ಲಾ ಸಶಸ್ತ್ರಮೀಸಲು ಪಡೆ ವಸತಿಗೃಹದ ನಿವಾಸಿಗಳಿಗೆಹೊಸ ಪಡಿತರ ಚೀಟಿ ವಿತರಣೆ, ಚೀಟಿಯ ತಿದ್ದುಪಡಿ ಹಾಗೂ ಪಡಿತರ ವಿತರಣೆ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಇತ್ಯರ್ಥಪಡಿಸಿದ್ದು ವಿಶೇಷ. ಇಲಾಖೆಯ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಖುದ್ದು ಹಾಜರಿದ್ದು ಹಲವರಿಗೆ ಹೊಸ ಪಡಿತರ ಚೀಟಿಗಳನ್ನು ವಿತರಿಸಿದರು.

ಅರ್ಜಿ ಸಲ್ಲಿಸಲು ನೆರವು: ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಆಗದೇ ಅಸಹಾಯಕರಾಗಿದ್ದವರಿಗೂ ಈ ಕಾರ್ಯಾಚರಣೆಯು ಅತೀವ ಸಂತಸವನ್ನು ತಂದಿತು. ಏಕೆಂದರೆ, ಇಲಾಖೆಯ ಸಿಬ್ಬಂದಿಯೇ ಅಂಥವರಿಂದ ದಾಖಲೆಗಳನ್ನು ಪಡೆದು ಸ್ಥಳದಲ್ಲಿಯೇ ಆನ್‌ಲೈನ್‌ ಅರ್ಜಿಗಳನ್ನು ಪಡೆದುಕೊಂಡು ಹೊಸ ಪಡಿತರ ಚೀಟಿಗಳನ್ನು ವಿತರಿಸಿದರು.

ಅರ್ಜಿ ಸಲ್ಲಿಸಿ ಕೆಲವು ವರ್ಷಗಳಿಂದ ಕಾದರೂ ಚೀಟಿ ದೊರಕದೆ ಹತಾಶೆಗೊಂಡಿದ್ದ ಹಲವರಿಗೂ ಹೊಸ ಚೀಟಿ ದೊರಕಿತು. ಪಡಿತರ ಚೀಟಿಗಳ ತಿದ್ದುಪಡಿಯೂ ಕೂಡ ವೇಗದಿಂದ ನಡೆಯಿತು.

ಭೇಟಿಯ ಪರಿಣಾಮ: ರಾಮೇಶ್ವರಪ್ಪ ಅವರು ಸೋಮವಾರ ಈ ಪ್ರದೇಶಗಳಲ್ಲಿ ಸಂಚರಿಸಿದಾಗ, ಹಲವರು ಇಲಾಖೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅರ್ಜಿ ಸಲ್ಲಿಸಿ ವರ್ಷಗಳಾದರೂ ಚೀಟಿ ದೊರಕಿಲ್ಲ. ತಿದ್ದುಪಡಿ ಕಷ್ಟವಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.

ಅಲ್ಲಿಯೇ ಮಂಗಳವಾರದ ಕಾರ್ಯಕ್ರಮವನ್ನು ನಿಗದಿ ಮಾಡಿದ್ದ ಅಧಿಕಾರಿ, ಜನರಿಗೆ ಮಾತುಕೊಟ್ಟಂತೆ ಕೋಟಾಲಪಲ್ಲಿ ಕೊಳಚೆ ಪ್ರದೇಶದ 4ನೇ ಕ್ರಾಸ್‌ನಲ್ಲಿ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸುವ ಕಾರ್ಯಕ್ರಮವನ್ನು ಏರ್ಪಡಿಸಿದರು. ಇಲಾಖೆಯ ಸಹಾಯಕ ನಿರ್ದೇಶಕಿ ಹಲೀಮ, ಆಹಾರ ನಿರೀಕ್ಷಕರಾದ ರವಿ ರಾಠೋಡ್, ಆದಿಶೇಷ ಅಂಬೇಡ್ಕರ್ ನಿರ್ವಹಿಸಿದರು.

ಮೂರು ವರ್ಷದಿಂದ ಕಾಯುತ್ತಿದ್ದ ವೃದ್ಧೆ!
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಮೂರು ವರ್ಷದಿಂದ ಕಾಯುತ್ತಿದ್ದ ಕೋಟಾಲಪಲ್ಲಿಯ 81ರ ವೃದ್ಧೆ ಮುತ್ಯಾಲಮ್ಮ ಅವರಿಗೆ ಪಡಿತರ ಚೀಟಿ ದೊರಕಿದ್ದು ಅವರಲ್ಲಿ ಅತೀವ ಸಂತೋಷವನ್ನು ತಂದಿತ್ತು. ಸೋಮವಾರ ಅಧಿಕಾರಿಯ ಭೇಟಿಯ ಸಂದರ್ಭದಲ್ಲಿ, ವೃದ್ಧೆಯು ತಮಗೆ ಪಡಿತರ ಚೀಟಿ ದೊರಕದೇ ಇರುವ ಕುರಿತು ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT