ಶನಿವಾರ, ಫೆಬ್ರವರಿ 27, 2021
31 °C
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

ಪಡಿತರ ಚೀಟಿ ವಿತರಣೆಗೆ ವಿಳಂಬ: ಆಹಾರ ಇನ್‌ಸ್ಪೆಕ್ಟರ್‌ ವಿರುದ್ಧ ಗರಂ ಆದ ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ನಗರದಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬ ಆಗುತ್ತಿರುವುದಕ್ಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸದಸ್ಯ ಗಾದಿಲಿಂಗಪ್ಪ, ‘ಹಳ್ಳಿಗಳಲ್ಲಿ ರೇಷನ್‌ ಕಾರ್ಡ್‌ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ. ಈ ಕುರಿತು ಆಹಾರ ಇಲಾಖೆಯ ಅಧಿಕಾರಿಗಳನ್ನು ಕೇಳಬೇಕೆಂದರೆ ಅವರು ಸಭೆಗೆ ಬಂದಿಲ್ಲ. ಹಿಂದಿನ ಸಭೆಗೂ ಅವರು ಗೈರು ಹಾಜರಾಗಿದ್ದರು. ಅವರು ಬರುವವರೆಗೆ ಸಭೆ ಮುಂದುವರಿಸಬಾರದು’ ಎಂದು ಪಟ್ಟು ಹಿಡಿದರು. ಅದಕ್ಕೆ ಸದಸ್ಯರಾದ ಷಣ್ಮುಖಪ್ಪ, ಸಿ.ಡಿ. ಮಹಾದೇವ ದನಿಗೂಡಿಸಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ‘ಈ ಸಂಬಂಧ ತಹಶೀಲ್ದಾರ್‌ ಜತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಆಹಾರ ಇನ್‌ಸ್ಪೆಕ್ಟರ್‌ ಅವರನ್ನು ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದಾರೆ. ಅವರು ಇಷ್ಟರಲ್ಲೇ ಬರಬಹುದು. ಅವರು ಬರುವವರೆಗೆ ಬೇರೆ ವಿಷಯಗಳ ಬಗ್ಗೆ ಚರ್ಚಿಸಬಹುದು’ ಎಂದರು.

ಕೆಲ ನಿಮಿಷಗಳ ನಂತರ ಆಹಾರ ಇನ್‌ಸ್ಪೆಕ್ಟರ್‌ ಅಜ್ಜಪ್ಪ ಸಭೆಗೆ ಬಂದರು. ಈ ವೇಳೆ ಮಾತನಾಡಿದ ಷಣ್ಮುಖಪ್ಪ, ‘ಒಂದು ವರ್ಷದಿಂದ ಜನ ರೇಷನ್‌ ಕಾರ್ಡಿಗಾಗಿ ಅಲೆದಾಡುತ್ತಿದ್ದಾರೆ. ಎಲ್ಲ ಕೆಲಸ ಬಿಟ್ಟು ಅದರ ಹಿಂದೆ ಬಿದ್ದಿದ್ದಾರೆ. ಮೇಲಿಂದ ಮೇಲೆ ನಮಗೆ ಕೇಳುತ್ತಿದ್ದಾರೆ. ನೀವು ಒಮ್ಮೆಯೂ ಗ್ರಾಮಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುವುದಿಲ್ಲ. ಸಭೆಗೂ ಬರುವುದಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿ’ ಎಂದು ಸಿಟ್ಟು ಹೊರಹಾಕಿದರು.

‘ಈಗ ಪ್ರತಿಯೊಂದು ಇಲಾಖೆಯಲ್ಲಿ ಎಲ್ಲ ಕೆಲಸಕ್ಕೂ ರೇಷನ್‌ ಕಾರ್ಡ್‌ ಕೇಳುತ್ತಾರೆ. ಪರಿಸ್ಥಿತಿ ಹೀಗಿದ್ದರೂ ಕಾರ್ಡ್‌ ಕೊಡಲು ವಿಳಂಬ ಮಾಡುತ್ತಿರುವುದೇಕೇ? ಯಾವಾಗ ಕೇಳಿದರೂ ಸರ್ವರ್‌ ನೆಪವೊಡ್ಡುತ್ತೀರಿ ಇಲ್ಲವೇ ಕಾರ್ಡುಗಳು ಮುದ್ರಣಗೊಂಡು ಬರಬೇಕು ಎಂದು ಹೇಳಿ ನುಣುಚಿಕೊಳ್ಳುತ್ತೀರಿ. ಇದು ಕೆಲಸ ಮಾಡುವ ವಿಧಾನವಲ್ಲ. ಜನ ಎದುರಿಸುತ್ತಿರುವ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದರೆ ಬಗೆಹರಿಯುತ್ತದೆ. ಆದರೆ, ನೀವು ಆ ಕೆಲಸ ಮಾಡುವುದಿಲ್ಲ’ ಎಂದು ಮಹಾದೇವ ಅಸಮಾಧಾನ ವ್ಯಕ್ತಪಡಿಸಿದರು.

‘ಜನರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಕೆಲಸ ನಿರ್ವಹಿಸಬೇಕು. ನಿರ್ಲಕ್ಷ್ಯ ತೋರುವುದು ಸರಿಯಲ್ಲ. ನಿಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದವರಿಗೆ ನೋಟಿಸ್‌ ನೀಡಲಾಗುವುದು. ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು’ ಎಂದು ಟಿ. ವೆಂಕೋಬಪ್ಪ ತಿಳಿಸಿದರು.

ಅಜ್ಜಪ್ಪ ಮಾತನಾಡಿ, ‘ನನ್ನ ಇಲಾಖೆಯ ಜತೆಗೆ ಇತರೆ ಇಲಾಖೆಯ ಜವಾಬ್ದಾರಿ ಕೂಡ ವಹಿಸಿದ್ದಾರೆ. ಹೆಚ್ಚಿನ ಗಮನ ವಹಿಸಲು ಆಗುತ್ತಿಲ್ಲ. ಕಾರ್ಡ್‌ಗಳು ಮುದ್ರಣಗೊಂಡು ಬಂದಿಲ್ಲ. ಈ ಕುರಿತು ಸಂಬಂಧಿಸಿದವರೊಂದಿಗೆ ಮಾತನಾಡಿ, ಆದಷ್ಟು ಬೇಗ ತರಿಸಿಕೊಂಡು ವಿತರಣೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

‘ಮಾತೃಪೂರ್ಣ ಯೋಜನೆ ಜಾರಿಗೆ ಬಂದು ವರ್ಷವಾಗುತ್ತಿದೆ. ಬಹುತೇಕ ಅಂಗನವಾಡಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ನೀರಿಗೆ ವ್ಯವಸ್ಥೆ ಮಾಡಬೇಕು’ ಎಂದು ಷಣ್ಮುಖಪ್ಪ, ಗಾದಿಲಿಂಗಪ್ಪ ಆಗ್ರಹಿಸಿದರು.

‘ರಾಜೀವ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಕಾರ್ಯಾದೇಶ ಪತ್ರ ಕೊಡಲಾಗಿದೆ. ಕೆಲವರು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ, ಈಗ ಏನೇನೋ ಕಾರಣಗಳನ್ನು ಕೊಟ್ಟು ಅನುದಾನ ಬಿಡುಗಡೆಗೆ ವಿಳಂಬ ಮಾಡಲಾಗುತ್ತಿದೆ. ಇದರಿಂದ ಫಲಾನುಭವಿಗಳಿಗೆ ಸಮಸ್ಯೆಯಾಗುತ್ತಿದೆ’ ಎಂದು ಮಹಾದೇವ ಸಭೆಯ ಗಮನಕ್ಕೆ ತಂದರು.

ವೆಂಕೋಬಪ್ಪ ಪ್ರತಿಕ್ರಿಯಿಸಿ, ‘ಈ ಕುರಿತು ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಶೌಚಾಲಯಕ್ಕೆ ಎಲ್ಲಿಗೆ ಹೋಗಬೇಕು?’

‘ನಗರದ ಪ್ರಮುಖ ಭಾಗಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ಅಷ್ಟೇಕೆ, ತಾಲ್ಲೂಕು ಪಂಚಾಯಿತಿಯಲ್ಲಿ ಮಹಿಳೆಯರಿಗೆ ಒಂದು ಸುಸಜ್ಜಿತವಾದ ಶೌಚಾಲಯವಿಲ್ಲ. ಹೆಣ್ಣು ಮಕ್ಕಳು ಎಲ್ಲಿಗೆ ಹೋಗಬೇಕು?’ ಎಂದು ಗಾದಿಲಿಂಗಪ್ಪ ಕೇಳಿದರು.

‘ಅದು ನಗರಸಭೆಯ ವ್ಯಾಪ್ತಿಗೆ ಬರುತ್ತದೆ. ಶೌಚಾಲಯ ನಿರ್ಮಿಸುವುದು ಅವರ ಕೆಲಸ’ ಎಂದು ಟಿ. ವೆಂಕೋಬಪ್ಪ ಹೇಳಿದರು. ಅದಕ್ಕೆ ಸಿಟ್ಟಾದ ಸಿ.ಡಿ. ಮಹಾದೇವ, ‘ತಾಲ್ಲೂಕು ಪಂಚಾಯಿತಿ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಬಂದು, ಹೋಗುವವರು ಗ್ರಾಮೀಣ ಪ್ರದೇಶದ ಜನ. ಮೊದಲು ನಮ್ಮ ಕಚೇರಿಯಲ್ಲಿ ಒಂದು ಶೌಚಾಲಯ ನಿರ್ಮಿಸಬೇಕು. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಶೌಚಾಲಯಗಳನ್ನು ನಿರ್ಮಿಸುವಂತೆ ನಗರಸಭೆ ಪೌರಾಯುಕ್ತರಿಗೆ ತಿಳಿಸಬೇಕು’ ಎಂದು ತಾಕೀತು ಮಾಡಿದರು. ‘ನಮ್ಮ ಊರಿನಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ. ಎಷ್ಟು ಸಲ ಸಭೆಗೆ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಸದಸ್ಯೆ ಮಲ್ಲೆ ಹನುಮಕ್ಕ ಹೇಳಿದರು.

ಸಭೆಯಲ್ಲಿ ಮಾತಾಡಿದ ಸದಸ್ಯೆಯ ಪತಿ!

ಡಣಾಯನಕೆರೆ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯೆ ಶಾರದಾ ಅವರ ಪತಿ ಬಸವರಾಜ ಅವರು ಸಭೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದರು.

ಪತ್ರಕರ್ತರ ಪಕ್ಕದ ಸಾಲಿನಲ್ಲಿ ಕುಳಿತಿದ್ದ ಅವರು ಸಭೆ ನಡೆಯುತ್ತಿರುವಾಗಲೇ ಎದ್ದು ನಿಂತು, ‘ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಡಣಾಯನಕೆರೆಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದವರನ್ನು ಬಿಟ್ಟು ಬೇರೋಬ್ಬರ ಖಾತೆಗೆ ಹಣ ಜಮೆ ಮಾಡಲಾಗಿದೆ. 15 ದಿನ ಕೆಲಸ ಮಾಡಿದವರಿಗೆ ನಾಲ್ಕೈದು ದಿನಗಳ ಕೂಲಿ ಪಾವತಿಸಲಾಗಿದೆ’ ಎಂದು ಏರಿದ ದನಿಯಲ್ಲಿ ಮಾತನಾಡಿದರು. ಆದರೆ, ಯಾರೊಬ್ಬರೂ ಅವರನ್ನು ತಡೆಯುವ ಗೋಜಿಗೆ ಹೋಗಲಿಲ್ಲ.

ಬಸವರಾಜ ಅವರು ಸಭೆಯಲ್ಲಿ ಮಾತನಾಡಿದಲ್ಲದೆ ವೇದಿಕೆಯ ಮೇಲೆ ಹೋಗಿ, ದಾಖಲೆಗಳನ್ನು ತೋರಿಸಿ ಟಿ. ವೆಂಕೋಬಪ್ಪ ಹಾಗೂ ಬಿ.ಎಸ್‌. ರಾಜಪ್ಪ ಅವರೊಂದಿಗೆ ಚರ್ಚಿಸಿದರು. ಸಭೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭಗೊಂಡಿತು. ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಕೈಬಿಡುವ ಉದ್ದೇಶದಿಂದ ಸಭೆಗೆ ಬಂದ ಎಲ್ಲರಿಗೂ ಬಾಟಲಿ ನೀರಿನ ಬದಲು, ಲೋಟದಲ್ಲಿ ಕೊಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು