ಮಂಗಳವಾರ, ಏಪ್ರಿಲ್ 20, 2021
27 °C

ನಾಡ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ: ಅವೈಜ್ಞಾನಿಕ ಕ್ರಮ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟೂರು: ತಾಲ್ಲೂಕಿನ ಕೋಗಳಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ರದ್ದುಗೊಳಿಸಿರುವುದನ್ನು ಕೋಗಳಿ ಸೇರಿ 7 ಗ್ರಾಮದ ಜನರು ವಿರೋಧಿಸಿದ್ದಾರೆ. ಗುರುವಾರ ಕೋಗಳಿಯ ನಾಡ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅವರು, ತಹಶೀಲ್ದಾರ್‌ ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದರು.

ಇತ್ತೀಚೆಗೆ ಹೊರಡಿಸಿದ ಕ್ಷೇತ್ರ ವಿಂಗಡಣೆ ಪಟ್ಟಿಯಲ್ಲಿ ಕೋಗಳಿ ಜಿ.ಪಂ ಮತ್ತು ತಾ. ಪಂ ಅನ್ನು ರದ್ದುಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಟ್ಟೂರು ತಾಲ್ಲೂಕಿನ ಕೋಗಳಿ ಗ್ರಾಮವು 1978 ರಿಂದ ಹೋಬಳಿಯ ಕೇಂದ್ರವಾಗಿದ್ದು, ಜಿಲ್ಲಾ ಪಂಚಾಯತಿ ಕ್ಷೇತ್ರ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಹೊಂದಿತ್ತು. ಈ ಕ್ಷೇತ್ರಗಳನ್ನು ಪುನರ್ವಿಂಗಡಣೆ ಮಾಡಿದ್ದರಿಂದ ಭೌಗೋಳಿಕವಾಗಿ ಹತ್ತಿರವಿರುವ ಅಂಬಳಿ, ಅಲಬೂರು, ಕೋಡಿಹಳ್ಳಿ, ಕೆ.ಕೆ.ತಾಂಡಾ ಗ್ರಾಮಗಳು ಹೊಂದಿಕೊಂಡಿವೆ. 2011ರ ಜನಗಣತಿ ಪ್ರಕಾರ ಕೋಗಳಿ ಕ್ಷೇತ್ರದಲ್ಲಿ ಒಟ್ಟು 6224 ಜನಸಂಖ್ಯೆ ಇದ್ದು, ಇದನ್ನು ಪರಿಗಣಿಸದ ಇಲಾಖೆ ಅಧಿಕಾರಿಗಳು ಕೇವಲ 3548 ಜನಸಂಖ್ಯೆ ಹೊಂದಿರುವ ದೂಪದಹಳ್ಳಿ ಗ್ರಾಮಕ್ಕೆ ನೂತನ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನಾಗಿ ರಚಿಸಲು ತಯಾರಿ ನಡೆಸಿರುವುದು ಖಂಡನೀಯ ಎಂದು ಕೋಗಳಿ ಗ್ರಾಮದ ಮುಖಂಡರಾದ ಸಿದ್ದಲಿಂಗನಗೌಡ ಕಿಡಿಕಾರಿದರು.

ಭೌಗೋಳಿಕವಾಗಿ ಜನಸಂಖ್ಯೆಗೆ ಅನುಗುಣವಾಗಿ ಕೋಗಳಿ ಗ್ರಾಮವು ಎಂಟರಿಂದ ಹತ್ತು ಹಳ್ಳಿಗಳ ಹಿರಿಯರ ಹೋರಾಟದ ಪ್ರತಿಫಲವಾಗಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರವಾಗಿದ್ದು. ಈ ಎರಡು ಕ್ಷೇತ್ರವನ್ನು ಪುನರ್‌ರಚಿಸಿ ಆದೇಶ ಹೊರಡಿಸಿದ್ದಾರೆ. ಕ್ಷೇತ್ರಗಳು ಕೈ ತಪ್ಪಿದರೆ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಗ್ರಾಮದ ಮುಖಂಡರು ಕಿಡಿಕಾರಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎನ್. ಚಾಮರಾಜೇಂದ್ರ ಗೌಡ, ಹೊಂಬಾಳೆ ಕೊಟ್ರೇಶ್, ವಿಶ್ವನಾಥ್ ಗೌಡ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿ ಎಂ ಕೊಚಲಿ, ಮಂಜುನಾಥ್ ಕರಿಬಸಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಿಜಗುಣ, ಅಶೋಕ್, ರವೀಂದ್ರ, ಕಾರ್ಮಿಕ ಸಂಘಟನೆಯ ಅಧ್ಯಕ್ಷ ಟಿ.ಶಿವರುದ್ರಪ್ಪ, ಎಂ ಶೇಖರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿದ್ದಲಿಂಗಪ್ಪ, ಗಚ್ಚಿನ ಕೊಟ್ರಪ್ಪ ಇದ್ದರು.

ಇಟಗಿ ಪೊಲೀಸ್ ಠಾಣೆಯ ಪಿಎಸ್ಐ ಎಚ್. ಆರ್. ನಾಯಕ್, ಹಾಗೂ ಎಎಸ್ಐ ವಿಶ್ವೇಶ್ವರಯ್ಯ, ಉಮೇಶ್, ಶ್ರೀನಿವಾಸ್ ಬಂದೋಬಸ್ತ್ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು