ಬುಧವಾರ, ಮಾರ್ಚ್ 3, 2021
29 °C
ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಸಲಹೆ

₹70 ಸಾವಿರ ಬೈಕ್‌ನೊಂದಿಗೆ ₹500 ಹೆಲ್ಮೆಟ್‌ ಖರೀದಿಸಿ: ಸೈದುಲು ಅಡಾವತ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘₹70,000 ಮೌಲ್ಯದ ಬೈಕ್‌ ಖರೀದಿಸುವಾಗ ಅದರೊಂದಿಗೆ ₹500ರ ಹೆಲ್ಮೆಟ್‌ ಕೂಡ ಖರೀದಿಸಿ. ಅಪಘಾತದ ಸಂದರ್ಭದಲ್ಲಿ ಅದು ನಿಮ್ಮ ಜೀವ ಉಳಿಸುತ್ತದೆ’ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಸಲಹೆ ನೀಡಿದರು.

ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ನಿನ್ನೆಯಷ್ಟೇ 23 ವರ್ಷದ ಯುವಕ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಕಾರಣ ಆತ ಹೆಲ್ಮೆಟ್‌ ಧರಿಸಿರಲಿಲ್ಲ. ಆತನ ಬಳಿ ₹70,000ದ ಬೈಕ್‌ ಇತ್ತು. ಆದರೆ, ₹500ರ ಹೆಲ್ಮೆಟ್‌ ಇರಲಿಲ್ಲ. ಇದ್ದಿದ್ದರೆ ಆತನ ಜೀವ ಉಳಿಯುತ್ತಿತ್ತು. ಕುಟುಂಬದವರಿಗೆ ನೋವು ಉಂಟಾಗುತ್ತಿರಲಿಲ್ಲ’ ಎಂದು ಹೇಳಿದರು.

‘ಬಳ್ಳಾರಿ ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 1,100 ರಸ್ತೆ ಅಪಘಾತಗಳು ಸಂಭವಿಸುತ್ತಿವೆ, ಅದರಲ್ಲಿ 320ರಷ್ಟು ಅಪಘಾತಗಳು ಮರಣದಲ್ಲೇ ಕೊನೆಯಾಗುತ್ತಿವೆ. ಅಪಘಾತದಲ್ಲಿ ಮೃತಪಡುವ ಬಹುತೇಕ ಸವಾರರು ವಯಸ್ಕರು. ಅಪಘಾತಕ್ಕೆ ಮೂಲ ಕಾರಣ ನಿರ್ಲಕ್ಷ್ಯ, ಉದಾಸೀನತೆ, ಸುರಕ್ಷತಾ ನಿಯಮ ಪಾಲನೆ ಮಾಡದೇ ಇರುವುದು’ ಎಂದರು.

‘ನಿಯಮ ಉಲ್ಲಂಘನೆಗೆ ದಂಡ ಹಾಕಿದರೂ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲ್ಲ. ಜಾಗೃತಿ ಮೂಡಿಸುವುದಕ್ಕಾಗಿ ದಂಡ ವಿಧಿಸಲಾಗುತ್ತದೆ. ನಗರದಲ್ಲಿ ಹತ್ತು ಸಾವಿರ ಗಣಿ ಲಾರಿಗಳು ಸಂಚರಿಸುತ್ತವೆ. ಲಾರಿಗಳ ಅತಿವೇಗದ ಚಾಲನೆ ತಡೆಗೆ ಈಗಾಗಲೇ ಸಭೆ ನಡೆಸಲಾಗಿದೆ. ಲಾರಿಗಳ ವೇಗದ ಮಿತಿ ಪರಿಶೀಲಿಸುವ ಸಾಫ್ಟ್‌ವೇರ್‌ ಕಾರ್ಯರೂಪಕ್ಕೆ ಬರಲಿದೆ’ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್ ಮಾತನಾಡಿ, ‘ಅಪಘಾತದಲ್ಲಿ ಗಾಯಗೊಂಡು ಒಮ್ಮೆ ಅಂಗವಿಕಲರಾದರೇ ಜೀವನ ಪರ್ಯಂತ ಅಂಗವಿಕಲರಾಗಿಯೇ ಇರಬೇಕಾಗುತ್ತದೆ. ಬದುಕಿದ್ದು ಸತ್ತಂತೆ. ನಿಯಮ ಪಾಲಿಸಿ, ಜಾಗರೂಕರಾಗಿ ವಾಹನ ಓಡಿಸಬೇಕು’ ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಚವ್ಹಾಣ್ ಮಾತನಾಡಿ, ‘ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಸಂಚಾರ ಮತ್ತು ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು’ ಎಂದು ಹೇಳಿದರು.

ಹಿರಿಯ ಮೋಟಾರು ವಾಹನ ಇನ್‌ಸ್ಪೆಕ್ಟರ್‌ ಎಸ್.ಎಸ್.ಕುಮಾರ್, ಸಿಪಿಐ ಮೇಟಿ ಶ್ರೀನಿವಾಸ್, ಸಾರಿಗೆ ಅಧಿಕಾರಿ ಎಸ್.ಎಂ.ಇ ಅತ್ಯೈರ್ ಸೇರಿದಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಸಿಬ್ಬಂದಿ, ವಾಹನ ಸವಾರರು ಇದ್ದರು.

ಪ್ರತಿಯೊಬ್ಬರಿಗೂ ಪ್ರಾಣದ ಮೇಲೆ ಭಯ ಇರಬೇಕು. ಸಂಚಾರ ನಿಯಮ ಸರಿಯಾಗಿ ಪಾಲಿಸಿದರೆ ಅಪಘಾತ ಸಂಭವಿಸುವುದಿಲ್ಲ.
-ಸೈದುಲು ಅಡಾವತ್‌, ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು