ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಅದಿರು ರಫ್ತು ಪ್ರಕ್ರಿಯೆಗೆ ಹಿನ್ನಡೆ

ರಫ್ತು ಮೇಲಿನ ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ: ಮತ್ತೆ ಸಂಕಷ್ಟಕ್ಕೆ ಸಿಲುಕಿದ ಗಣಿ ಉದ್ಯಮಿಗಳು
Last Updated 25 ಮೇ 2022, 19:31 IST
ಅಕ್ಷರ ಗಾತ್ರ

ಬಳ್ಳಾರಿ: ಅದಿರು ರಫ್ತಿಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿರುವುದರ ಹಿಂದೆಯೇಕೇಂದ್ರ ಸರ್ಕಾರ ಅದಿರು ರಫ್ತು ಮೇಲಿನ ತೆರಿಗೆ ಏರಿಸಿರುವುದರಿಂದ ರಾಜ್ಯದ ಗಣಿಗಳಲ್ಲಿ ದಶಕದಿಂದ ಬಿದ್ದಿರುವ ಸುಮಾರು ಒಂದು ಕೋಟಿ ಟನ್ ಅದಿರು ರಫ್ತು ಪ್ರಕ್ರಿಯೆ ಪುನರಾರಂಭಕ್ಕೆ ಹಿನ್ನಡೆಯಾಗಿದೆ. ಇದರಿಂದ ಗಣಿ ಉದ್ಯಮಿಗಳು ಮತ್ತೆ ಸಂಕಷ್ಟಕ್ಕೆ ಸಿಕ್ಕಿದ್ದಾರೆ.

ಅದಿರು ರಫ್ತಿಗೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿಸಿದ ಮರು ದಿನವೇ ಕಾಕತಾಳೀಯ ಎಂಬಂತೆ ಕೇಂದ್ರ ಸರ್ಕಾರ ಅದಿರು ರಫ್ತು ಮೇಲಿನ ತೆರಿಗೆ ಏರಿಸಿದೆ. ಅದಿರು ರಫ್ತಿನ ಮೇಲಿನ ತೆರಿಗೆ ಈ ಮೊದಲು ಶೇ 30ರಷ್ಟಿತ್ತು. ಈಗ ಅದನ್ನು ಶೇ 50ಕ್ಕೆ ಏರಿಸಲಾಗಿದೆ. ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿ ‘ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ’ (ಎಫ್‌ಐಎಂಐ–ಫಿಮಿ) ಪ್ರಧಾನ ಮಂತ್ರಿಗೆ ಪ‌ತ್ರ ಬರೆಯಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದ ಕಾರಣಕ್ಕೆ 2011ರಲ್ಲಿ ಅದಿರು ರಫ್ತು ನಿಷೇಧಿಸಲಾಗಿತ್ತು. ಅಂದಿನಿಂದ ‘ಫಿಮಿ’ ಅದಿರು ರಫ್ತಿಗೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿತ್ತು.

ಗಣಿ ಬಾಧಿತ ಮೂರು ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮಗಳ ಪ್ರಮಾಣದ ಆಧಾರದಲ್ಲಿ ಗಣಿಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿದ್ದು, ಎ ಮತ್ತು ಬಿ ವರ್ಗದ ಗಣಿಗಳಲ್ಲಿ 2022ರ ಮಾರ್ಚ್‌ 31ರವರೆಗೆ ಸುಮಾರು 83 ಲಕ್ಷ ಟನ್‌ ಅದಿರು ದಾಸ್ತಾನಿದೆ. ಗುತ್ತಿಗೆ ಅವಧಿ ಮುಗಿದು ಮರು ಹರಾಜಾದ ಎ ಹಾಗೂ ಬಿ ವರ್ಗದ ಗಣಿಗಳಲ್ಲಿ 2.33 ಲಕ್ಷ ಟನ್‌ ಅದಿರು ದಾಸ್ತಾನಿದೆ ಎಂದು ‘ಫಿಮಿ’ ಮೂಲಗಳು ತಿಳಿಸಿವೆ.

ವ್ಯಾಪಕ ಅಕ್ರಮಗಳಿಗೆ ಸಾಕ್ಷಿಯಾದ ಸಿ ವರ್ಗದ ಗಣಿಗಳಲ್ಲಿ 12.25 ಲಕ್ಷ ಟನ್ ಅದಿರಿದೆ. ಈ ಅದಿರು ಸರ್ಕಾರದ ವಶದಲ್ಲಿದ್ದು, ಅದರ ಮಾರಾಟ ಅಧಿ ಕಾರವೂ ಸರ್ಕಾರಕ್ಕಿದೆ. ಇ–ಹರಾಜಿನ ಮೂಲಕ ಮಾರಾಟ ಮಾಡುವುದೇ ಇಲ್ಲವೆ ಬೇರೆ ವಿಧಾನ ಅನುಸರಿಸುವುದೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಹೊರಗೆ ಅಂದರೆ ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲೂ ಅದಿರು ದಾಸ್ತಾನಿದೆ. 2022ರ ಮಾರ್ಚ್‌ 31ರವರೆಗೆ ರಾಜ್ಯದಲ್ಲಿ ಸುಮಾರು 1.20ಕೋಟಿ ಟನ್‌ ಅದಿರು ದಾಸ್ತಾನಿದ್ದು, ಕೇಂದ್ರ ಸರ್ಕಾರ ರಫ್ತು ಮೇಲಿನ ತೆರಿಗೆ ಕಡಿಮೆ ಮಾಡದಿದ್ದರೆ ಗಣಿಗಳಲ್ಲೇ ಅದಿರು ಉಳಿಯಲಿದೆ ಎಂಬುದು ಗಣಿ ಉದ್ಯಮಿಗಳ ಆತಂಕ.

ಕೇಳುವವರಿಲ್ಲದೆ ಬಿದ್ದಿದೆ ಅದಿರು!
ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿ ಗುತ್ತಿಗೆ ಪರವಾನಗಿಗಳ ಪೈಕಿ 15ಕ್ಕೂ ಹೆಚ್ಚಿನ ಗಣಿಗಳಲ್ಲಿ 1 ಲಕ್ಷ ಟನ್‌ನಿಂದ ಹಿಡಿದು 25 ಲಕ್ಷ ಟನ್‌ವರೆಗೆ ಅದಿರು ದಾಸ್ತಾನಿದೆ. ಎ ಹಾಗೂ ಬಿ ಗಣಿಗಳಲ್ಲೇ 1 ಕೋಟಿ ಟನ್‌ ಅದಿರು ದಾಸ್ತಾನಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT