ಮಂಗಳವಾರ, ಆಗಸ್ಟ್ 16, 2022
30 °C
ಕಟ್ಟಡಗಳ ಅವಶೇಷ ತೆರವಿಗೆ ಬಂದಿದ್ದ ನಗರಸಭೆ ಸಿಬ್ಬಂದಿಯೊಂದಿಗೆ ವಾಗ್ವಾದ

ತಪ್ಪು ತಿಳಿವಳಿಕೆ; ಬಿಗುವಿನ ವಾತಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ತಪ್ಪು ಭಾವಿಸಿ ನಗರಸಭೆ ಸಿಬ್ಬಂದಿಗೆ ಸ್ಥಳೀಯ ಯುವಕರು ಪ್ರತಿರೋಧ ತೋರಿಸಿ ಅವರ ಕೆಲಸಕ್ಕೆ ಅಡ್ಡಿಪಡಿಸಿದ್ದರಿಂದ ಮಂಗಳವಾರ ಸಂಜೆ ಇಲ್ಲಿನ ಹಜರತ್‌ ಷಾ ವಲಿ ಮಸೀದಿ ಬಳಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಸ್ಥಳೀಯ ಯುವಕರಿಗೆ ಮನವರಿಕೆ ಮಾಡಿಕೊಟ್ಟ ನಂತರ ವಾತಾವರಣ ತಿಳಿಗೊಂಡಿತು.

‘ನಗರಸಭೆಯು ಈ ಹಿಂದೆ ಮಸೀದಿಗೆ ಹೊಂದಿಕೊಂಡಂತೆ ನಿರ್ಮಿಸಿದ್ದ ಕೆಲ ಮಳಿಗೆಗಳನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿತ್ತು. ಬಳಿಕ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಕಾರ್ಯಾಚರಣೆ ಕೈಬಿಟ್ಟಿತು. ಕಟ್ಟಡಗಳ ಅವಶೇಷಗಳು ಅಲ್ಲಿಯೇ ಬಿದ್ದದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಮಂಗಳವಾರ ಸಂಜೆ ನಗರಸಭೆ ಸಿಬ್ಬಂದಿಯು ಜೆ.ಸಿ.ಬಿ., ಟ್ರ್ಯಾಕ್ಟರ್‌ನೊಂದಿಗೆ ಸ್ಥಳಕ್ಕೆ ತೆರಳಿ, ಅವಶೇಷ ತೆರವುಗೊಳಿಸಲು ಮುಂದಾಗಿದ್ದರು. ತಡೆಯಾಜ್ಞೆಯಿದ್ದರೂ ತೆರವು ಕಾರ್ಯಾಚರಣೆಗೆ ಬಂದಿದ್ದಾರೆ ಎಂದು ತಪ್ಪಾಗಿ ತಿಳಿದು ಅಲ್ಲಿದ್ದ ಯುವಕರು ನಗರಸಭೆಯ ಸಿಬ್ಬಂದಿಗೆ ತಡೆಯೊಡ್ಡಿದ್ದಾರೆ. ಬಳಿಕ ಅವರೊಂದಿಗೆ ವಾಗ್ವಾದ ನಡೆಸಿ, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಯುವಕರಿಗೆ ವಸ್ತುಸ್ಥಿತಿ ತಿಳಿಸಿದ ನಂತರ ಸುಮ್ಮನಾದರು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ತಪ್ಪು ತಿಳಿವಳಿಕೆಯಿಂದ ಯುವಕರು ಆವೇಶಭರಿತರಾಗಿ ಆ ರೀತಿ ವರ್ತಿಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ತಿಳಿಸಿದ್ದಾರೆ.

‘ತಪ್ಪಾಗಿ ಭಾವಿಸಿ ನಮ್ಮ ಸಿಬ್ಬಂದಿಯ ಜತೆ ಸ್ಥಳೀಯ ಯುವಕರು ವಾಗ್ವಾದ ನಡೆಸಿ, ನೂಕಾಟ, ತಳ್ಳಾಟ ನಡೆಸಿದ್ದಾರೆ. ಬೇರೇನೂ ಆಗಿಲ್ಲ. ಬಳಿಕ ವಿಷಯ ಗೊತ್ತಾಗಿ ಸುಮ್ಮನಾಗಿದ್ದಾರೆ’ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು