ಶನಿವಾರ, ಮೇ 15, 2021
23 °C

ಯುಗಾದಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಯುಗಾದಿ ಹಬ್ಬದ ಮುನ್ನ ದಿನವಾದ ಸೋಮವಾರ ನಗರದಲ್ಲಿ ಸಾರ್ವಜನಿಕರ ಖರೀದಿ ಭರಾಟೆ ಕಂಡು ಬಂತು.

ನಗರದ ಮಹಾತ್ಮ ಗಾಂಧಿ ವೃತ್ತ, ಸೋಗಿ ಮಾರುಕಟ್ಟೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂತು. ವಿವಿಧ ಕಡೆಗಳಿಂದ ಜನ ಮಾರುಕಟ್ಟೆಗೆ ಬಂದು, ಹೂ ಹಣ್ಣು, ಕಾಯಿ, ಕರ್ಪೂರ, ಬಾಳೆ ಎಲೆ, ಬಾಳೆ ದಿಂಡು, ಮಾವಿನ ಎಲೆ, ತರಕಾರಿ ಸೇರಿದಂತೆ ಪೂಜೆ, ತರಹೇವಾರಿ ಅಡುಗೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂತು.

ಮೂರೂ ಮಾರುಕಟ್ಟೆಗಳಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಒಂಬತ್ತು ಗಂಟೆಯ ವರೆಗೆ ಜನ ಖರೀದಿಗೆ ಬಂದಿದ್ದರು. ಬಿಸಿಲು ಹೆಚ್ಚಾದ ಬಳಿಕ ಯಾರೊಬ್ಬರೂ ಸುಳಿಯಲಿಲ್ಲ. ಸಂಜೆ 6.45ರ ವರೆಗೆ ಇದೇ ಪರಿಸ್ಥಿತಿ ಇತ್ತು. ಹೆಚ್ಚಿನ ಜನ ಬರಬಹುದು ಎಂದು ವ್ಯಾಪಾರಿಗಳು ಮಾರಾಟಕ್ಕೆ ವಸ್ತುಗಳನ್ನು ಇಟ್ಟುಕೊಂಡಿದ್ದರು. ಆದರೆ, ಜನ ಏಳು ಗಂಟೆಯ ಬಳಿಕ ಮಾರುಕಟ್ಟೆಗಳಿಗೆ ಧಾವಿಸಿದರು. ಜನ ಬರುತ್ತಿದ್ದಂತೆ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಅರಳಿತು. ರಾತ್ರಿ ಒಂಬತ್ತರ ವರೆಗೆ ಜನ ಖರೀದಿಯಲ್ಲಿ ತೊಡಗಿದ್ದರು.

ಬೇಳೆ ಕಾಳು, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದರೂ ಹಬ್ಬದ ಸಂಭ್ರಮ ಕಮ್ಮಿ ಇರಲಿಲ್ಲ. ಜನ ಚೌಕಾಸಿ ಮಾಡುತ್ತಲೇ ವಸ್ತುಗಳನ್ನು ಖರೀದಿಸಿದರು. ‘ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಆದರೆ, ವರ್ಷಕ್ಕೊಮ್ಮೆ ಹಬ್ಬ ಬರುತ್ತದೆ. ಅದು ಕೂಡ ಯುಗಾದಿ. ಈ ಹಬ್ಬ ನಾವು ಸೇರಿದಂತೆ ಅನೇಕರ ಪಾಲಿಗೆ ಹೊಸ ವರ್ಷ ಇದ್ದಂತೆ. ಬೇರೆ ಕಡೆ ಕೆಲಸ ಮಾಡುತ್ತಿರುವ ಮಕ್ಕಳೆಲ್ಲ ಊರಿಗೆ ಬರುತ್ತಾರೆ. ಯಾವುದೇ ಕೊರತೆ ಆಗದಂತೆ ಪ್ರತಿ ವರ್ಷ ಹಬ್ಬ ಆಚರಿಸುತ್ತೇವೆ. ಈ ವರ್ಷವೂ ಹಾಗೆಯೇ ಆಚರಣೆ ಮಾಡುತ್ತೇವೆ’ ಎಂದು ಪಟೇಲ್‌ ನಗರದ ಗೃಹಿಣಿ ಶೋಭಾ ಹೇಳಿದರು.

‘ತರಕಾರಿ ಬೆಲೆ ಪರವಾಗಿಲ್ಲ ಎಂದು ಹೇಳಬಹುದು. ಆದರೆ, ಬೇಳೆ ಕಾಳು, ಅಡುಗೆ ಎಣ್ಣೆ ಬೆಲೆ ಸಾಕಷ್ಟು ಹೆಚ್ಚಾಗಿದೆ. ನಾವು ದಿನ ಕೆಲಸ ಮಾಡಿ ಬದುಕೋ ಜನ. ಒಂದು ಕೆ.ಜಿ. ಅಡುಗೆ ಎಣ್ಣೆಗೆ ₹200 ಕೊಟ್ಟರೆ ಹೊಟ್ಟೆಗೆ ಏನು ತಿನ್ನಬೇಕು. ಎಲ್ಲವೂ ದುಬಾರಿಯಾಗುತ್ತಿದೆ. ಬದುಕುವುದೇ ಕಷ್ಟವಾಗುತ್ತಿದೆ. ಹೀಗಂತ ಹಬ್ಬ ಆಚರಿಸದೇ ಇರುವುದಕ್ಕೆ ಆಗುವುದಿಲ್ಲ’ ಎಂದು ಚಿತ್ತವಾಡ್ಗಿಯ ಲಕ್ಷ್ಮಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.