ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಹೊಸ ಅಧಿಕಾರಿಗಳಿಗಿಲ್ಲ ಕನಿಷ್ಠ ಸೌಕರ್ಯ!

ಅಧಿಕಾರಿಗಳಿಗಿಲ್ಲ ಪ್ರತ್ಯೇಕ ಕಚೇರಿ; ತಾತ್ಕಾಲಿಕ ಜಿಲ್ಲಾ ಕಚೇರಿ ಸಂಕೀರ್ಣ ಆರಂಭವೂ ವಿಳಂಬ
Last Updated 4 ಆಗಸ್ಟ್ 2022, 10:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷದ ನಂತರ ಒಂದೊಂದಾಗಿ ಇಲಾಖೆಗಳಿಗೆ ಅಧಿಕಾರಿಗಳ ನೇಮಕ ಪ್ರಕ್ರಿಯೆ ಆಗುತ್ತಿದೆ. ಆದರೆ, ಈಗಾಗಲೇ ನೇಮಕಗೊಂಡ ಅಧಿಕಾರಿಗಳಿಗೆ ಕನಿಷ್ಠ ಸೌಕರ್ಯ ಇಲ್ಲದೇ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರ ನೇರ ಪರಿಣಾಮ ಜನರ ಮೇಲಾಗುತ್ತಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿ.ಇ.ಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಪ್ರಮುಖ ಕಚೇರಿಗಳೆಲ್ಲ ಇನ್ನೂ ಅನ್ಯ ಇಲಾಖೆ, ಸಮುದಾಯ ಭವನ, ಅತಿಥಿ ಗೃಹಗಳಲ್ಲಿಯೇ ನಡೆಯುತ್ತಿವೆ. ಅಲ್ಲಿ ಅಗತ್ಯ ಸೌಕರ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ, ಇತರೆ ಇಲಾಖೆಯ ಅಧಿಕಾರಿಗಳ ಪರಿಸ್ಥಿತಿ ಹಾಗಿಲ್ಲ. ಯಾವುದೇ ಸವಲತ್ತುಗಳಿಲ್ಲದೇ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಹೊಸ ಜಿಲ್ಲೆ ಹೊಸ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ತುಂಗಭದ್ರಾ ಸ್ಟೀಲ್‌ ಪ್ರಾಡಕ್ಟ್ಸ್‌ಗೆ (ಟಿ.ಎಸ್‌.ಪಿ.) ಸೇರಿದ ಜಾಗ ಗುರುತಿಸಲಾಗಿದೆ. ಆದರೆ, ಅದು ನಿರ್ಮಾಣವಾಗಲು ಇನ್ನೂ ಕೆಲವು ವರ್ಷಗಳೇ ಬೇಕಾಗಬಹುದು. ಅದಕ್ಕಾಗಿ ಕಾಯದೇ ಟಿ.ಎಸ್‌.ಪಿ. ಹಳೆಯ ಕಟ್ಟಡ ನವೀಕರಿಸಿ ಅದರಲ್ಲಿ ಹೆಚ್ಚಿನ ಕಚೇರಿ ಆರಂಭಿಸಲು ನಿರ್ಧರಿಸಲಾಗಿತ್ತು. ನೆಲಮಹಡಿ ನವೀಕರಿಸಿ, ಜನವರಿ 26ರಂದು ಅದರ ಉದ್ಘಾಟನೆಯೂ ನೆರವೇರಿಸಲಾಗಿತ್ತು. ಆದರೆ, ಇದುವರೆಗೆ ಅಲ್ಲಿ ಒಂದೇ ಒಂದು ಕಚೇರಿ ಆರಂಭಗೊಂಡಿಲ್ಲ. ಈಗ ಮೊದಲ ಮತ್ತು ಎರಡನೇ ಮಹಡಿ ನವೀಕರಣ ಪೂರ್ಣಗೊಳ್ಳುವವರೆಗೆ ಅನ್ಯ ಸ್ಥಳದಲ್ಲಿಯೇ ಕಾರ್ಯನಿರ್ವಹಿಸಲು ತೀರ್ಮಾನಿಸಲಾಗಿದೆ. ಅದರ ಕೆಲಸ ಪೂರ್ಣಗೊಳ್ಳುವುದಕ್ಕೂ ಮುನ್ನ ಅದನ್ನು ತುರ್ತಾಗಿ ಉದ್ಘಾಟಿಸಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.

ಅಧಿಕಾರಿಗಳಿಗಿಲ್ಲ ಸೌಕರ್ಯ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾಗಿ ರಾಮಚಂದ್ರಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಾಗಿ ಗಾದಿಲಿಂಗಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾಗಿ ಸತೀಶ್‌ ನೇಮಕಗೊಂಡಿದ್ದಾರೆ. ಎರಡು ತಿಂಗಳಾದರೂ ಮೂರು ಇಲಾಖೆಗಳಿಗೆ ಸ್ವಂತ ಕಚೇರಿ, ಸಿಬ್ಬಂದಿ, ಕನಿಷ್ಠ ಅವರ ಓಡಾಟಕ್ಕೆ ವಾಹನವೂ ಇಲ್ಲ. ಸಂಬಳವೂ ನಿಂತಿದೆ. ಇಲಾಖೆಯನ್ನು ಮುನ್ನಡೆಸಿಕೊಂಡು ಹೋಗಲು ಹಣಕಾಸಿನ ಸಮಸ್ಯೆಯೂ ಎದುರಾಗಿದೆ ಎಂದು ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. ಮೂರೂ ಇಲಾಖೆಗಳ ಕಚೇರಿಗಳು ಅನ್ಯ ಇಲಾಖೆಯ ಕಚೇರಿಯಲ್ಲಿ ನಡೆಯುತ್ತಿದ್ದು, ಅಧಿಕಾರಿಗಳು ಒಂದು ಮೂಲೆಯಲ್ಲಿ ಕುಳಿತು ಕೆಲಸ ನಿರ್ವಹಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಮೂರೂ ಇಲಾಖೆಗಳು ಅದಕ್ಕೆ ಸಂಬಂಧಿಸಿದ್ದು, ಹೆಚ್ಚಿನವರಿಗೆ ಈ ಕಚೇರಿಗಳು ಎಲ್ಲಿವೆ ಎನ್ನುವುದೇ ತಿಳಿದಿಲ್ಲ. ಇನ್ನು, ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಬೇಕಾದ ಕನಿಷ್ಠ ಮೂಲಸೌಕರ್ಯಗಳು ಇಲ್ಲ. ಇಂಥದ್ದರಲ್ಲಿ ಆ ಇಲಾಖೆ ಪ್ರತಿನಿಧಿಸುವ ವರ್ಗಕ್ಕೆ ನ್ಯಾಯ ಕೊಡಬಲ್ಲರೇ? ಎಂಬ ಪ್ರಶ್ನೆ ಮೂಡಿದೆ.

‘ಯಾವುದೇ ಜಿಲ್ಲೆಯಿರಲಿ ಈ ಮೂರು ಇಲಾಖೆಗಳು ಬಹಳ ಪ್ರಾಮುಖ್ಯತೆ ಪಡೆದಿವೆ. ಸರ್ಕಾರವೇನೋ ತರಾತುರಿಯಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ, ಅವುಗಳಿಗೆ ಪ್ರತ್ಯೇಕ ಕಚೇರಿಯಿಲ್ಲ. ಹೊಸ ಕಟ್ಟಡ ನಿರ್ಮಾಣವಾಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಅದುವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆಸಬೇಕು. ಕಚೇರಿಗಳು ಎಲ್ಲಿವೆ ಎನ್ನುವುದು ಜನರಿಗೆ ಗೊತ್ತಾಗಬೇಕು’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಮರಡಿ ಜಂಬಯ್ಯ ನಾಯಕ.

‘ಸಿ.ಎಂ. ಗಮನಕ್ಕೆ ತರಲಾಗಿದೆ’

‘ಹೊಸ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ, ಕಚೇರಿ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದೆ. ನೂತನ ಜಿಲ್ಲೆಗೆ ಅಗತ್ಯವಿರುವ ಅನುದಾನ ಹಾಗೂ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಆರ್ಥಿಕ ಇಲಾಖೆಗೂ ಸೂಚನೆ ನೀಡಲಾಗಿದೆ. ಈ ಕೊರತೆಯ ಬಗ್ಗೆ ಮತ್ತೊಮ್ಮೆ ಸಿ.ಎಂ ಜತೆ ಚರ್ಚಿಸಿ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್‌ ಜೊಲ್ಲೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಶೇ 90ರಷ್ಟು ಹೆಚ್ಚಿನವರು ಹಿಂದುಳಿದ ವರ್ಗದ ಜನರಿದ್ದಾರೆ. ಆದರೆ, ಮೂರೂ ಪ್ರಮುಖ ಇಲಾಖೆಗಳಿಗೆ ಕನಿಷ್ಠ ಸೌಕರ್ಯಗಳನ್ನು ಕಲ್ಪಿಸಿಲ್ಲ.

–ಮರಡಿ ಜಂಬಯ್ಯ ನಾಯಕ, ಸಾಮಾಜಿಕ ಹೋರಾಟಗಾರ

ಸದ್ಯ ಹೊಸಪೇಟೆ ತಾಲ್ಲೂಕು ಹಿಂದುಳಿದ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದ್ದು, ಶೀಘ್ರ ಸಮಸ್ಯೆಗಳು ಬಗೆಹರಿಯಬಹುದು.

–ರಾಮಚಂದ್ರಪ್ಪ, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಹೊಸಪೇಟೆಯ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲೇ ಕುಳಿತು ಕೆಲಸ ನಿರ್ವಹಿಸಲಾಗುತ್ತಿದೆ. ಇನ್ನಷ್ಟೇ ಪ್ರತ್ಯೇಕವಾಗಿ ಕಚೇರಿ ಆಗಬೇಕು.

–ಗಾದಿಲಿಂಗಪ್ಪ, ಜಿಲ್ಲಾ ಕಲ್ಯಾಣಾಧಿಕಾರಿ, ಪರಿಶಿಷ್ಟ ವರ್ಗಗಳ ಇಲಾಖೆ

ಹೊಸಪೇಟೆ ಜಂಬುನಾಥಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಚೇರಿ ಆರಂಭಿಸಲಾಗಿದ್ದು, ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದೆ.

–ಸತೀಶ್‌, ಉಪನಿರ್ದೇಶಕ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ

ಮೂರೂ ಇಲಾಖೆಗಳಲ್ಲಿ ಹುದ್ದೆ ಸೃಜನೆ ಮಾಡಬೇಕೆಂದು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಕೋರಲಾಗಿದ್ದು, ಈಗಾಗಲೇ ಆರ್ಥಿಕ ಇಲಾಖೆಗೆ ಕಡತ ಹೋಗಿದೆ.

–ಅನಿರುದ್ಧ್‌ ಶ್ರವಣ್‌ ಪಿ., ಜಿಲ್ಲಾಧಿಕಾರಿ, ವಿಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT