ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೆ ಕಿಮ್ಮತ್ತು ಇಲ್ಲವೇನೂ?: ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ

Last Updated 3 ಮಾರ್ಚ್ 2022, 13:12 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನಮಗೆ ಕಿಮ್ಮತ್ತು ಇಲ್ಲವೇನೂ..?’

ನಗರದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರು ಅಧಿಕಾರಿಗಳಿಗೆ ಮೇಲಿನಂತೆ ಕೇಳಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ನಾಗರಾಜ ಅವರು ಇಲಾಖೆಯ ಪ್ರಗತಿ ವರದಿಯ ಮಾಹಿತಿ ನೀಡುತ್ತಿದ್ದರು. ಈ ವೇಳೆ ಸಂಸದ ವೈ.ದೇವೇಂದ್ರಪ್ಪನವರು, ಜಿಲ್ಲೆಯ ಹಲವು ಕಡೆಗಳಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ವಿಳಂಬ ಮಾಡುತ್ತಿರುವುದೇಕೇ? ಕಟ್ಟಡಗಳು ಇಲ್ಲದ ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆ ಇದೆಯೇ? ಈ ಕುರಿತು ಅನೇಕ ಸಲ ಹೇಳಿದರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಗರಂ ಆದರು.

‘ತಹಶೀಲ್ದಾರ್‌ ಜಾಗ ಹಂಚಿಕೆ ಮಾಡಬೇಕು. ನಂತರ ನಿರ್ಮಿತಿ ಕೇಂದ್ರದವರು ನಿರ್ಮಿಸುತ್ತಾರೆ’ ಎಂದು ನಾಗರಾಜ್‌ ಹೇಳಿದರು. ಆಗ ಮಧ್ಯ ಪ್ರವೇಶಿಸಿದ ಸಚಿವೆ ಶಶಿಕಲಾ, ಸಂಸದರು, ಶಾಸಕರು ನಮಗೆ ಕಿಮ್ಮತ್ತು ಇಲ್ಲವೇನೂ? ಏನಾದರೂ ಹೇಳಿದರೆ ಅದಕ್ಕೆ ಸ್ಪಂದಿಸಿ ಕೆಲಸ ಮಾಡಬೇಕು. ಒಬ್ಬೊಬ್ಬರು ಒಂದೊಂದು ಮಾಹಿತಿ ಕೊಟ್ಟರೆ ಹೇಗೆ? ಸಭೆಗೆ ಬರುವಾಗ ಸಿದ್ಧತೆಯೊಂದಿಗೆ ಬರಬೇಕು ಎಂದು ತಾಕೀತು ಮಾಡಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗುತ್ತದೆ. ಎಲ್ಲಿ ನೀರಿನ ಸಮಸ್ಯೆ ಇದೆಯೋ ಅವುಗಳನ್ನು ಪತ್ತೆ ಹಚ್ಚಿ ಪಟ್ಟಿ ಮಾಡಿ, ಪೂರೈಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚಿಸಿದರು.

ಜಲಜೀವನ್ ಮಿಷನ್‌ ಕೇಂದ್ರ ಸರ್ಕಾರದ ಮಹತ್ವದ ಯೋಜನೆ. ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಕೊಡುವ ಯೋಜನೆ ಇದು. ಅಗತ್ಯ ಇರುವ ಕಡೆ ಟ್ಯಾಂಕ್‌ ನಿರ್ಮಿಸಿ, ಪೈಪ್‌ಲೈನ್‌ ಮೂಲಕ ನೀರು ಕೊಡಬೇಕು. ಇದರಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಕರುಣಾಕರ ರೆಡ್ಡಿ, ‘ಜಲಜೀವನ್‌ ಮಿಷನ್‌ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಮೂರನೇ ಪಕ್ಷದಿಂದ ಪರಿಶೀಲನೆ ನಡೆಸಿ, ವರದಿ ಪಡೆಯಬೇಕು. ಅಧಿಕಾರಿಗಳು ಗ್ರಾಮಗಳಿಗೆ ಹಠಾತ್‌ ಭೇಟಿ ಕೊಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಏಕೆಂದರೆ ಬಹುತೇಕ ಗ್ರಾಮಗಳಲ್ಲಿ ಅಧಿಕಾರಿಗಳು ಸಿಗುವುದಿಲ್ಲ’ ಎಂದರು.

ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಒಂದು ವರ್ಷ ಟ್ಯಾಂಕ್‌ ನಿರ್ಮಿಸಲು, ಮತ್ತೊಂದು ವರ್ಷ ಪೈಪ್‌ಲೈನ್‌ಗೆ, ಇನ್ನೊಂದು ವರ್ಷ ಕರೆಂಟ್‌, ಸಂಪರ್ಕ ಕೊಡಲು ಸಮಯ ತೆಗೆದುಕೊಳ್ಳುತ್ತೀರಿ. ಜನರಿಗೆ ನೀರು ಕೊಡುವುದು ಯಾವಾಗ? ಎಂದು ಪ್ರಶ್ನಿಸಿದರು.

ಪೈಪ್‌ಲೈನ್‌ನಲ್ಲಿ ಸೋರಿಕೆ, ಬ್ಲಾಸ್ಟ್‌ ಆಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಒಂದುವೇಳೆ ಕೆಟ್ಟ ಹೆಸರು ಬಂದರೆ ನಾವು ನಿಮ್ಮನ್ನು ಬಿಡುವುದಿಲ್ಲ. ಅಧಿಕಾರಿಗಳು ಆಲಸ್ಯ, ತಾತ್ಸಾರ ಮಾಡಬಾರದು. ದಿನಗೂಲಿ ನೌಕರರ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೋಯರ್‌ ನಾರಾಯಣರಾವ್‌, ಎಸ್ಪಿ ಡಾ. ಅರುಣ್‌ ಕೆ., ವಿಧಾನ ಪರಿಷತ್‌ ಸದಸ್ಯ ಸತೀಶ ಏಚರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT