ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಒಟ್ಟಾರೆ ಬೆಳವಣಿಗೆಗೆ ಅಪ್ಪ ಕಾರಣ'

Last Updated 15 ಜೂನ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ನನ್ನ ಒಟ್ಟು ಬೆಳವಣಿಗೆಗೆ ನಮ್ಮ ಅಪ್ಪ ಚಿನ್ನಯ್ಯನವರ ಕೊಡುಗೆ ಬಹಳಷ್ಟಿದೆ. ಚಿಕ್ಕ ವಯಸ್ಸಿನಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆದಿದ್ದರಿಂದ ಇಂದು ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ.

ಮೂಲತಃ ನಮ್ಮದು ರೈತಾಪಿ ಕುಟುಂಬ. ತಂದೆ–ತಾಯಿಗೆ ಒಟ್ಟು ಐದು ಜನ ಮಕ್ಕಳು. ಅದರಲ್ಲಿ ಕೊನೆಯವನು ನಾನು. ಸಾಮಾನ್ಯವಾಗಿ ರೈತರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಆದರೆ, ನಮ್ಮಪ್ಪ ಹಾಗಿರಲಿಲ್ಲ. ಅವರಿಗೆ ವಿದ್ಯೆಯ ಮಹತ್ವ ಗೊತ್ತಿತ್ತು. ಹಾಗಾಗಿ ನನ್ನನ್ನು ಶಾಲೆಗೆ ಕಳುಹಿಸಿದರು. ಅಕ್ಷರ ಜ್ಞಾನದ ಮಹತ್ವ ಹೇಳಿಕೊಡುತ್ತಿದ್ದರು. ಅಕ್ಷರ ಕಲಿತು ಸಾಧನೆ ಮಾಡಿದವರ ಚಿತ್ರಗಳನ್ನು ತೋರಿಸಿ, ಹುರಿದುಂಬಿಸುವ ಕೆಲಸ ಮಾಡುತ್ತಿದ್ದರು.

ಎಲ್ಲೇ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದರೆ ಅಲ್ಲಿಗೆ ಕರೆದೊಯ್ದುತ್ತಿದ್ದರು. ಹೋಗುವಂತೆ ಪ್ರೇರೇಪಿಸುತ್ತಿದ್ದರು. ಗುರು–ಹಿರಿಯರನ್ನು ಗೌರವಿಸುವುದು, ನಮ್ಮ ಸಂಪ್ರದಾಯ, ಆಚಾರದ ಬಗ್ಗೆ ತಿಳಿ ಹೇಳುತ್ತಿದ್ದರು. ಪರಿಸರ, ಜೀವಜಾಲ, ಪರಸ್ಪರ ಹೊಂದಿಕೊಂಡು ಹೋಗುವುದು, ಕಷ್ಟದಲ್ಲಿದ್ದವರಿಗೆ ನೆರವಾಗುವುದು, ಜೀವನದಲ್ಲಿ ಶಿಸ್ತಿನ ಮಹತ್ವ ಹೀಗೆ ಒಟ್ಟು ಬೆಳವಣಿಗೆಗೆ ಏನೆಲ್ಲ ಬೇಕೋ ಅದೆಲ್ಲ ಹೇಳಿಕೊಡುತ್ತಿದ್ದರು.

ನಮ್ಮ ಊರಿನ ಸಮೀಪ ಎಲ್ಲೇ ಜಾತ್ರೆ ನಡೆದರೂ ಅಲ್ಲಿಗೆ ಎಲ್ಲರನ್ನೂ ಕರೆದೊಯ್ಯುತ್ತಿದ್ದರು. ಎತ್ತಿನ ಸಂತೆಗೆ ಕರೆದೊಯ್ದು ಅವುಗಳನ್ನು ತೋರಿಸುತ್ತಿದ್ದರು. ಜಾತ್ರೆಗೆ ಮನೆ ಮಂದಿಯೆಲ್ಲ ಹೋಗಿ ಸುತ್ತಾಡುವುದು ಬಹಳ ಖುಷಿ ಕೊಡುತ್ತಿತ್ತು. ಅದು ಎಂದೂ ಮರೆಯಲಾರದ ಸಂಗತಿಗಳು. ಏನೇ ಖರೀದಿಸಿದರೂ ಅದರ ಬಗ್ಗೆ ನಿಖರವಾದ ಲೆಕ್ಕ ಇಡುತ್ತಿದ್ದರು. ಲೆಕ್ಕ ಬರೆಯುತ್ತಿರಲಿಲ್ಲ. ಅದು ಅವರ ಬಾಯಲ್ಲಿಯೇ ಇರುತ್ತಿತ್ತು.

–ಪ್ರೊ.ಸ.ಚಿ. ರಮೇಶ, ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ

**

’ಅಪ್ಪನಿಂದ ಮನೆಯಲ್ಲಿ ನಾನೊಬ್ಬನೇ ವಿದ್ಯಾವಂತನಾದೆ‘

ಹೊಸಪೇಟೆ: ನಮ್ಮಪ್ಪನ ಹೆಸರು ಬಸವಲಿಂಗಪ್ಪ, ಉತ್ಸಾಹದ ಚಿಲುಮೆಯಾಗಿದ್ದ. ಜಗಳ–ಜೂಟಿ ಎಲ್ಲವೂ ಮಾಡುತ್ತಿದ್ದ. ಆದರೆ, ಅವನೊಳಗೆ ಹೆಣ್ಣಿನ ಮನಸ್ಸಿತ್ತು.

ನಮ್ದು ಒಕ್ಕಲುತನ ಮನೆತನ. ನಮ್ಮಪ್ಪನಿಗೆ ಒಟ್ಟು 12 ಜನ ಮಕ್ಕಳು. ಅದರಲ್ಲಿ ನಾನು ಹನ್ನೆರಡನೆಯವನು. ನನ್ನ ಬಿಟ್ಟು ಎಲ್ಲರೂ ಒಕ್ಕಲುತನ ಮಾಡುತ್ತಿದ್ದರು. ಆದರೆ, ಅಪ್ಪ ನನ್ನನ್ನು ಶಾಲೆಗೆ ಸೇರಿಸಿದ. ನಮ್ಮ ಊರಿನಲ್ಲಿ ಶಾಲೆ ಇರಲಿಲ್ಲ. ಬೇರೆ ಊರಿನ ಶಾಲೆಯಲ್ಲಿ ಸೇರಿಸಿದ್ದ. ಸಂಜೆ ಹೊತ್ತು ಮುಳುಗುವಾಗ ನಾಲ್ಕೈದು ಕಿ.ಮೀ ದೂರದಿಂದ ನಾನು ಬರುತ್ತಿದೆ. ನನ್ನನ್ನು ಕರೆಯಲು ಅಪ್ಪ ನಡೆದುಕೊಂಡು ನಿತ್ಯ ಬರುತ್ತಿದ್ದ. ಮನೆಗೆ ಹೋಗುವಾಗ ಹಾಡು ಹೇಳುತ್ತಿದ್ದ. ದಿನವಿಡೀ ಶಾಲೆಯಲ್ಲಿ ಏನೇನು ಮಾಡಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತಿದ್ದ. ಸ್ನೇಹಿತನ ರೀತಿಯಲ್ಲಿ ಅಪ್ಪ ನನ್ನ ಜತೆ ವರ್ತಿಸುತ್ತಿದ್ದ. ಎಂದೂ ಕಠಿಣವಾಗಿ ನಡೆದುಕೊಳ್ಳುತ್ತಿರಲಿಲ್ಲ.

ಬುತ್ತಿ ಕಟ್ಟಿಕೊಂಡು ಅಪ್ಪ ಎಲ್ಲರನ್ನೂ ಜತೆಗೆ ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ. ಎಲ್ಲರೂ ಊಟ ಮಾಡಿ, ಹರಟೆ ಹೊಡೆದು ಕಾಲ ಕಳೆಯುತ್ತಿದ್ದೆವು. ಹೊಲದಲ್ಲಿ ಕೆಲಸ ಮಾಡುವವರನ್ನು ಜತೆಗೆ ಕೂರಿಸಿಕೊಂಡು ಊಟ ಮಾಡುತ್ತಿದ್ದ. ಯಾವುದೇ ಭೇದ–ಭಾವ ತೋರುತ್ತಿರಲಿಲ್ಲ. ಹೊತ್ತು ಮುಳುಗಿದಾಗ ಮನೆಗೆ ಹಿಂತಿರುಗುವಾಗ ಅಪ್ಪ ಹಾಡು ಹೇಳುತ್ತಿದ್ದ. ಎಲ್ಲರೂ ಅದನ್ನು ಕೇಳಿ ಆನಂದಿಸುತ್ತಿದ್ದೆವು.

ನಾನು ಸ್ನಾತಕೋತ್ತರ ಪದವಿ ಮುಗಿಸಿ, ಬೇರೆ ಊರಿಗೆ ಕೆಲಸಕ್ಕೆ ಹೋಗಬೇಕಾಗಿ ಬಂತು. ಅಪ್ಪನಿಗೆ ಅದು ಇಷ್ಟವಿರಲಿಲ್ಲ. ಏಕೆಂದರೆ ನನ್ನ ಜತೆ ಬಹಳ ಒಡನಾಟ ಇತ್ತು. ಎಲ್ಲ ಮಕ್ಕಳು ಕಣ್ಣೆದುರಲ್ಲೇ ಇದ್ದರು. ಇವನೊಬ್ಬನೆ ಬಿಟ್ಟು ಹೋಗುತ್ತಿದ್ದಾನೆ ಎಂಬ ಕೊರಗಿತ್ತು. ಆದರೆ, ಧೈರ್ಯ ಮಾಡಿ ಕಳುಹಿಸಿದರು. ಅವರ ಸದಾಶಯದಂತೆ ಪ್ರಾಧ್ಯಾಪಕನಾದೆ. ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡುತ್ತ ಕಥೆಗಾರನಾಗಿ ಗುರುತಿಸಿಕೊಂಡೆ. ಇದಕ್ಕೆಲ್ಲ ಅಪ್ಪನೇ ಕಾರಣ.

ನಾನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದೆ. ಅಪ್ಪ ನಮ್ಮೂರು ನುಗಡೋಣಿಯಲ್ಲಿದ್ದ. 96 ವರ್ಷ ವಯಸ್ಸಾಗಿತ್ತು. ತೀವ್ರ ಅಸ್ವಸ್ಥಗೊಂಡ ವಿಷಯ ತಿಳಿದು ಅಲ್ಲಿಗೆ ಹೋದೆ. ನಾನು ಹೋಗಿ ಬಾಯಲ್ಲಿ ನೀರು ಹಾಕಿದ ನಂತರ ಅಪ್ಪ ಜೀವ ಬಿಟ್ಟ. ನನ್ನ ಮೇಲೆ ಆತ ಎಷ್ಟು ಪ್ರೀತಿ ಹೊಂದಿದ್ದ ಎಂಬುದಕ್ಕೆ ಆ ಕೊನೆ ಗಳಿಗೆಯೇ ಸಾಕ್ಷಿ.

-ಅಮರೇಶ ನುಗಡೋಣಿ, ಹೆಸರಾಂತ ಕಥೆಗಾರ

**

’ರಂಗಭೂಮಿಯಲ್ಲಿ ಸಾಧನೆಗೆ ಅಪ್ಪ ಕಾರಣ‘

ಹೊಸಪೇಟೆ: ನಮ್ಮ ತಂದೆ ಕೆ. ಮಾರೆಪ್ಪ ಹೆಚ್ಚು ಓದಿರಲಿಲ್ಲ. ದಲಾಲಿ ಅಂಗಡಿಯಲ್ಲಿ ಲೆಕ್ಕಪತ್ರ ಬರೆಯುವ ಕೆಲಸ ಮಾಡುತ್ತಿದ್ದ. ನೂರು ರೂಪಾಯಿ ಅಪ್ಪನ ಸಂಬಳ. ಅ‍ಪ್ಪನಿಗೆ ನಾವು ಏಳು ಜನ ಮಕ್ಕಳು. ಅದರಲ್ಲಿ ನಾನು ಹಿರಿಯವಳು. ಆ ಕಡಿಮೆ ಸಂಬಳದಲ್ಲೇ ಅಪ್ಪ ಮನೆ ನಡೆಸುತ್ತಿದ್ದ.

ಅಪ್ಪ ಬಯಲಾಟ ಆಡುತ್ತಿದ್ದ. ನಾನು ಬಯಲಾಟ ಆಡಬೇಕೆಂದು ಬಯಸುತ್ತಿದ್ದ. ಬಯಲಾಟ ಪದ, ಭಜನೆ, ಭಕ್ತಿಗೀತೆ ಹೇಳಿಕೊಡುತ್ತಿದ್ದರು. ಆದರೆ, ನನಗೆ ಅದು ಇಷ್ಟವಿರಲಿಲ್ಲ. ನಾನು ಶಿಕ್ಷಕಿಯಾಗಬೇಕೆಂದು ಅಂದುಕೊಂಡಿದ್ದೆ. ಆದರೆ, ನಾನು ಬಯಲಾಟದತ್ತ ವಾಲುವಂತೆ ಮಾಡಿದರು. ಅದರಿಂದ ನನಗೆ ಶಾಲಾ ದಿನಗಳಲ್ಲಿ ಬಹಳ ಪ್ರಯೋಜನವಾಯಿತು. ಭಕ್ತಿಗೀತೆ, ಹಾಡು ಹೇಳುವುದು, ನೃತ್ಯ ಸ್ಪರ್ಧೆ ಇದ್ದರೆ ಅದರಲ್ಲಿ ಭಾಗವಹಿಸಿ ಬಹುಮಾನ ಗಳಿಸುತ್ತಿದ್ದೆ. ನಾಟಕಗಳಲ್ಲಿ ಕೂಡ ನಟಿಸುತ್ತಿದ್ದೆ. ತಂದೆಯ ಸ್ನೇಹಿತ ಮೈಲಾರಪ್ಪ ಎಂಬುವರು ನಾಟಕ ಆಡಿಸುತ್ತಿದ್ದರು. ಒಮ್ಮೆ ನನಗೆ ನಟಿಸುವ ಅವಕಾಶ ಒಲಿದು ಬಂತು. ಅಪ್ಪ ಕೂಡ ಬೆನ್ನೆಲುಬಾಗಿ ನಿಂತರು. ಧೈರ್ಯ ಮಾಡಿ ನಟಿಸಿದೆ. ಸಾಕಷ್ಟು ಹೆಸರು ಬಂತು. ನಂತರ ಪೌರಾಣಿಕ, ಐತಿಹಾಸಿಕ, ಧಾರ್ಮಿಕ ಸೇರಿದಂತೆ ಎಲ್ಲ ಬಗೆಯ ನಾಟಕಗಳಲ್ಲಿ ನಟಿಸಿ ಹೆಸರು ಮಾಡಿದೆ.

ಆ ಕಾಲದಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ನಾಟಕ ಆಡುತ್ತಿರಲಿಲ್ಲ. ಆದರೆ, ಅಪ್ಪನ ಪ್ರೋತ್ಸಾಹದಿಂದ ನನಗೆ ಅದು ಸಾಧ್ಯವಾಯಿತು. ಮಗಳನ್ನು ನಾಟಕ ಮಾಡುವಂತೆ ಕಳುಹಿಸುತ್ತಿದ್ದ ಕಾರಣಕ್ಕಾಗಿ ಅನೇಕ ಜನ ಅಪ್ಪನನ್ನು ಟೀಕಿಸುತ್ತಿದ್ದರು. ಆದರೆ, ಅಪ್ಪ ಅದಕ್ಕೆ ಕಿವಿಗೊಡುತ್ತಿರಲಿಲ್ಲ. ಮಗಳು ದೊಡ್ಡ ಕಲಾವಿದೆಯಾಗಬೇಕೆಂಬ ಬಯಕೆ ಹೊಂದಿದ್ದ. ಅಪ್ಪ ಎಲ್ಲ ರೀತಿಯ ಬೆಂಬಲ ಕೊಟ್ಟಿದ್ದರಿಂದ ದೊಡ್ಡ ಕಲಾವಿದೆಯಾಗಿ ಬೆಳೆಯಲು ಸಾಧ್ಯವಾಯಿತು.

ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ ನಂತರ ನಾನು ಗಳಿಸಲು ಶುರು ಮಾಡಿದೆ. ಮನೆ ನಡೆಸಲು ಅನುಕೂಲವಾಯಿತು. ಅಪ್ಪನ ಮೇಲಿದ್ದ ಕುಟುಂಬದ ಹೊಣೆಗಾರಿಕೆ ಸ್ವಲ್ಪ ಕಡಿಮೆಯಾಯಿತು. ಕುಟುಂಬಕ್ಕೂ ಅನುಕೂಲವಾಗಿದ್ದರಿಂದ ರಂಗಭೂಮಿಯಿಂದ ದೂರ ಸರಿಯುವ ಪ್ರಶ್ನೆಯೇ ಬರಲಿಲ್ಲ.

ಹಿಂದೆ ನಮ್ಮ ಭಾವಚಿತ್ರದ ಅಚ್ಚು ಮಾಡಿ ಹ್ಯಾಂಡ್‌ಬಿಲ್‌ನಲ್ಲಿ ನಾಟಕದ ವಿವರದ ಜತೆ ಚಿತ್ರ ಹಾಕುತ್ತಿದ್ದರು. ಒಂದು ಸಲ ನನ್ನ ಚಿತ್ರ ಬಂದಾಗ ಅದನ್ನು ನೋಡಿ ಅಪ್ಪ ಬಹಳ ಖುಷಿಪಟ್ಟಿದ್ದರು. ನನಗೆ ರಾಜ್ಯೋತ್ಸವ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. ಅವುಗಳನ್ನು ನೋಡುವುದಕ್ಕೂ ಮುನ್ನ ಅವರು ನಿಧನರಾದರು. ಅದು ಯಾವಾಗಲೂ ನನ್ನನ್ನು ಕಾಡುತ್ತದೆ. ಅದನ್ನೆಲ್ಲ ನೋಡಿದರೆ ಅವರು ಬಹಳ ಖುಷಿಪಡುತ್ತಿದ್ದರು.

–ಕೆ. ನಾಗರತ್ನಮ್ಮ, ಹಿರಿಯ ವೃತ್ತಿರಂಗಭೂಮಿ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT