ಕೆಲಸ ಅರಸಿಕೊಂಡು ಬಂದವ ಮಾಲೀಕನಾದ

7

ಕೆಲಸ ಅರಸಿಕೊಂಡು ಬಂದವ ಮಾಲೀಕನಾದ

Published:
Updated:
Prajavani

ಹಗರಿಬೊಮ್ಮನಹಳ್ಳಿ: ಹೊಟ್ಟೆಪಾಡಿಗೆ ಕೆಲಸ ಅರಸಿಕೊಂಡು ಬಂದಿದ್ದ ಅನಕ್ಷರಸ್ಥ ಯುವಕನೊಬ್ಬ ಮಾಲೀಕನಾದ ಕಥೆಯಿದು.

ಕಟ್ಟಡ ನಿರ್ಮಾಣದಲ್ಲಿ ಕೂಲಿ ಮಾಡುತ್ತಿದ್ದ ಪಟ್ಟಣದ ಅಲ್ಲಾಭಕ್ಷಿ, ನಂತರ ತಾನೇ ಕಿರು ಉದ್ಯಮ ಸ್ಥಾಪಿಸಿ ತನ್ನ ಬದುಕು ಕಟ್ಟಿಕೊಳ್ಳುವುದರ ಜತೆಗೆ ಅನೇಕರಿಗೆ ಉದ್ಯೋಗ ಕಲ್ಪಿಸಿದ್ದಾರೆ.

ಹಗರಿಬೊಮ್ಮನಹಳ್ಳಿಯಲ್ಲಿ ಬ್ರಿಕ್ಸ್ ಅಲ್ಲಾಭಕ್ಷಿ ಎಂದೇ ಹೆಸರಾಗಿರುವ ಇವರು ಬಂಡಿಹಳ್ಳಿ ರಸ್ತೆಯ ಕೆ.ಜಿ.ಎನ್‌. ಸಿಮೆಂಟ್‌ ಇಟ್ಟಿಗೆ ತಯಾರಿಕೆ ಘಟಕವನ್ನು ₹3 ಲಕ್ಷ ಬಂಡವಾಳದೊಂದಿಗೆ ಆರಂಭಿಸಿದ್ದರು. ಇಂದು ಅದು ದೊಡ್ಡ ಸ್ವರೂಪ ಪಡೆದಿದೆ. ಇಲ್ಲಿ ತಯಾರಾದ ಇಟ್ಟಿಗೆಗಳಿಗೆ ಬಹಳ ಬೇಡಿಕೆ ಇದೆ.

ಮುಂಡರಗಿ, ಕೊಪ್ಪಳ, ಹೂವಿನಹಡಗಲಿ, ಸಂಡೂರು, ಕೂಡ್ಲಿಗಿ, ಕೊಟ್ಟೂರು, ಉಜ್ಜಯಿನಿ, ಮರಿಯಮ್ಮನಹಳ್ಳಿ ಸೇರಿದಂತೆ ವಿವಿಧ ಕಡೆಗಳಿಂದ ಜನ ಬಂದು ಇಟ್ಟಿಗೆ ಖರೀದಿಸುತ್ತಾರೆ.
ಇಲ್ಲಿ ತಯಾರಾಗುವ ಆರು ಇಂಚಿನ 100 ಇಟ್ಟಿಗೆಗಳು ₹2,500 ಮತ್ತು ನಾಲ್ಕು ಇಂಚಿನ 100 ಇಟ್ಟಿಗೆಗಳನ್ನು ₹2,100ಕ್ಕೆ ಮಾರಾಟ ಮಾಡಲಾಗುತ್ತಿದೆ.

‘ಇದುವರೆಗೂ ಮಾರುಕಟ್ಟೆ ತೊಂದರೆಯಾಗಿಲ್ಲ. ಮುಂಗಡ ಹಣ ಕೊಟ್ಟು ಇಟ್ಟಿಗೆ ಖರೀದಿಸುತ್ತಾರೆ. ಒಂದು ಸಾವಿರ ಇಟ್ಟಿಗೆ ಮಾರಾಟ ಮಾಡಿದರೆ ಒಟ್ಟು ₹2,500 ನಿವ್ವಳ ಲಾಭ ಸಿಗುತ್ತದೆ’ ಎನ್ನುತ್ತಾರೆ ಮಾಲೀಕ ಅಲ್ಲಾಭಕ್ಷಿ.

ನಿತ್ಯ ಸಾವಿರ ಇಟ್ಟಿಗೆ ತಯಾರಿಸಲಾಗುತ್ತದೆ. ಅವುಗಳನ್ನು 15ರಿಂದ 20 ದಿನಗಳ ವರೆಗೆ ಕ್ಯೂರಿಂಗ್‌ ಮಾಡಲಾಗುತ್ತದೆ. ಸ್ಥಳೀಯವಾಗಿ ದೊರೆಯುವ ಆರು ಎಂ.ಎಂ, 12 ಎಂ.ಎಂ. ಎಂ. ಸ್ಯಾಂಡ್‌ ಮತ್ತು ಮರಿಯಮ್ಮನಹಳ್ಳಿ ಬಳಿ ಇರುವ ಬಿ.ಎಂ.ಎಂ., ಸ್ಮಯೋರ್‌ ಕಾರ್ಖಾನೆಗಳಲ್ಲಿ ದೊರೆಯುವ ಫ್ಲೈ ಆ್ಯಶ್‌ನಿಂದ ಇಟ್ಟಿಗೆ ತಯಾರಿಸಲಾಗುತ್ತದೆ. ಮಣ್ಣಿನ ಇಟ್ಟಿಗೆಗಳಿಗಿಂತ ಹೆಚ್ಚು ಗಟ್ಟಿಯಾಗಿರುತ್ತದೆ. ಮನೆ ಕಟ್ಟುವಾಗ ಸಿಮೆಂಟ್‌ ಮತ್ತು ಮರಳಿನ ಬಳಕೆ ಕಡಿಮೆಯಾಗುತ್ತದೆ.

2006ರಲ್ಲಿ ಗುಡಿ ಕೈಗಾರಿಕೆ ಮೂಲಕ ಆರಂಭಿಸಿದ ಘಟಕದಲ್ಲಿ ಇಂದು ಹೈಡ್ರಾಲಿಕ್‌ ಯಂತ್ರದಿಂದ ತಯಾರಿಸಲಾಗುತ್ತಿದೆ. ಹತ್ತು 10 ಜನ ಕೆಲಸ ಮಾಡುತ್ತಿದ್ದಾರೆ. ಮಿಕ್ಸಿಂಗ್‌, ಪ್ರೆಸ್ಸಿಂಗ್‌ ಕೆಲಸಗಳಿಗೆ ನುರಿತ ಕಾರ್ಮಿಕರನ್ನು ನೇಮಿಸಿದ್ದಾರೆ. ಪ್ರತಿ ಉದ್ಯೋಗಿಗೆ ದಿನಕ್ಕೆ ₹300ಕೂಲಿ ನೀಡುತ್ತಿದ್ದಾರೆ.

ಈ ಘಟಕಕ್ಕೂ ಮುನ್ನ ಅಲ್ಲಾಭಕ್ಷಿ ಕುಟುಂಬದವರು ತರಕಾರಿ ವ್ಯಾಪಾರ ಮಾಡುತ್ತಿದ್ದರು. ಆದರೆ, ಅದು ನಷ್ಟದಲ್ಲಿ ನಡೆಯುತ್ತಿತ್ತು. ನಂತರ ಕೆಲವು ದಿನ ಕೂಲಿ ಕೆಲಸ ಮಾಡಿದರು. ಈಗ ಅವರೇ ಕಿರು ಉದ್ಯಮದ ಮಾಲೀಕರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !