ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಗಡು ಪಟ್ಟುಗಳಿಗೆ ಬಗ್ಗದ ವರಿಷ್ಠರು

ಬಿಜೆಪಿ 2ನೇ ಪಟ್ಟಿಯಲ್ಲಿ 8 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ; ಯಡಿಯೂರಪ್ಪ– ಬಸವರಾಜು ಬೆಂಬಲಿಗರಿಗೆ ಮಣೆ
Last Updated 17 ಏಪ್ರಿಲ್ 2018, 10:58 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಗ್ರಾಮಾಂತರ ಕ್ಷೇತ್ರಕ್ಕೆ ಸುರೇಶ್‌ಗೌಡ ಅವರ ಹೆಸರನ್ನು ಮಾತ್ರ ಪ್ರಕಟಿಸಲಾಗಿತ್ತು.

ತುಮಕೂರು ನಗರದಿಂದ ಜಿ.ಬಿ.ಜ್ಯೋತಿಗಣೇಶ್, ಗುಬ್ಬಿಯಿಂದ ಜಿ.ಎನ್.ಬೆಟ್ಟಸ್ವಾಮಿ, ಚಿಕ್ಕನಾಯಕನಹಳ್ಳಿಯಿಂದ ಜೆ.ಸಿ.ಮಾಧುಸ್ವಾಮಿ, ತಿಪಟೂರಿನಿಂದ ಬಿ.ಸಿ.ನಾಗೇಶ್, ತುರುವೇಕೆರೆಯಿಂದ ಮಸಾಲ ಜಯರಾಂ, ಶಿರಾದಿಂದ ಬಿ.ಕೆ.ಮಂಜುನಾಥ್, ಮಧುಗಿರಿಯಿಂದ ಎಂ.ಆರ್.ಹುಲಿನಾಯ್ಕರ್ ಅವರಿಗೆ ಟಿಕೆಟ್ ನೀಡಲಾಗಿದೆ.

ಲಿಂಗಾಯತರಿಗೆ 2, ಒಕ್ಕಲಿಗರು, ಬ್ರಾಹ್ಮಣರು, ಗೊಲ್ಲರು, ದಲಿತರಿಗೆ ತಲಾ ಒಂದು ಹಾಗೂ ಕುರುಬರಿಗೆ 2 ಕ್ಷೇತ್ರಗಳಲ್ಲಿ ಟಿಕೆಟ್ ಕೊಟ್ಟಿದ್ದಾರೆ.

ಪಟ್ಟಿಯಲ್ಲಿ ಹೆಚ್ಚಿನ ಅಚ್ಚರಿ ಇಲ್ಲ. ಬಹುಪಾಲು ನಿರೀಕ್ಷಿತರೇ ಟಿಕೆಟ್ ಗಿಟ್ಟಿಸಿದ್ದಾರೆ. ‌ಆದರೆ 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ನಾಲ್ಕು ಮಂದಿಗೆ ಈ ಭಾರಿ ಟಿಕೆಟ್ ದೊರೆತಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರನ್ನು ಜಿಲ್ಲೆಯಲ್ಲಿ ಮೆರೆಸಿದ್ದಾರೆ.

ತುಮಕೂರಿನಲ್ಲಿ ಜ್ಯೋತಿಗಣೇಶ್, ತುರುವೇಕೆರೆಯಲ್ಲಿ ಜಯರಾಂ, ಕೊರಟಗೆರೆಯಲ್ಲಿ ಹುಚ್ಚಯ್ಯ, ತಿಪಟೂರಿನಲ್ಲಿ ನಾಗೇಶ್ ಪಕ್ಷದ ಅಭ್ಯರ್ಥಿಗಳು ಎಂದು ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿಯೇ ಯಡಿಯೂರಪ್ಪ ಘಂಟಾಘೋಷವಾಗಿ ಹೇಳಿದ್ದರು.

ತುರುವೇಕೆರೆ ಮತ್ತು ತಿಪಟೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿಯೇ ನಡೆದಿತ್ತು. ಉಳಿದ ಕ್ಷೇತ್ರಗಳನ್ನು ವರಿಷ್ಠರು ಅಳೆದು ತೂಗಿದ್ದರು.

ಸೊಗಡು ಬಂಡಾಯಕ್ಕಿಲ್ಲ ಮನ್ನಣೆ: ಹಿರಿಯ ಮುಖಂಡ ಸೊಗಡು ಶಿವಣ್ಣ ಮತ್ತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಜ್ಯೋತಿ ಗಣೇಶ್ ನಡುವಿನ ಮುಸುಕಿನ ಗುದ್ದಾಟದಿಂದಲೇ ಗಮನ ಸೆಳೆದ ಕ್ಷೇತ್ರ ತುಮಕೂರು ನಗರ. ಮಾಜಿ ಕಬಡ್ಡಿ ಪಟು ಶಿವಣ್ಣ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವಿನ ಪತಾಕೆ ಹಾರಿಸಿದ್ದರು. ಆದರೆ ವರಿಷ್ಠರ ಎದುರು ಅವರ ಪಟ್ಟುಗಳು ನಡೆದಿಲ್ಲ.

ಈ ಇಬ್ಬರು ಮುಖಂಡರ ನಡುವಿನ ಶೀತಲ ಸಮರ ರಾಜ್ಯದ ಮಟ್ಟದಲ್ಲಿ ಸುದ್ದಿಯಾಗಿತ್ತು. ಶಿವಣ್ಣ ಅವರ ಮನೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಭೇಟಿ ನೀಡಿದ್ದು ಪಕ್ಷದ ಆಂತರಿಕ ವಲಯದಲ್ಲಿ ಮತ್ತಷ್ಟು ಚರ್ಚೆ ಹುಟ್ಟುಹಾಕಿತ್ತು.

ಶಿವಣ್ಣ ರಾಜ್ಯ ಮಟ್ಟದಲ್ಲಿ ಬಿಜೆಪಿ ಬಂಡಾಯ ನಾಯಕರಾಗಿ ಗುರುತಾಗಿದ್ದರು. ಆದರೆ ಯಡಿಯೂರಪ್ಪ ಅವರ ಜತೆ ಕಾಯ್ದುಕೊಂಡ ಅಂತರವೇ ಅವರಿಗೆ ಟಿಕೆಟ್ ತಪ್ಪಲು ಕಾರಣವಾಗಿದೆ. ಜ್ಯೋತಿ ಗಣೇಶ್ 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ ಅವರನ್ನು ಹುರಿಯಾಳನ್ನಾಗಿಸಲಾಗಿದೆ. ಗಂಗಹನುಮಯ್ಯ, ಡಾ.ಲಕ್ಷ್ಮಿಕಾಂತ್, ಆರತಿ ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಹುಚ್ಚಯ್ಯ ಟಿಕೆಟ್ ಪಡದೇ ತೀರುವ ಛಲದಲ್ಲಿ ಎರಡು ಮೂರು ವರ್ಷದಿಂದ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದರು. ಅವರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದಲಿತ ಎಡಗೈ ಸಮುದಾಯದವರು.

ಗುಬ್ಬಿಯಲ್ಲಿ ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿಯೇ ಇದ್ದರು. ಚಂದ್ರಶೇಖರ್ ಬಾಬು, ಎನ್‌.ಸಿ.ಪ್ರಕಾಶ್, ಹಾಗಲವಾಡಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ರಾಮಾಂಜಿನಪ್ಪ ಟಿಕೆಟ್ ಕೇಳಿದ್ದರು. ಪಕ್ಷದಿಂದ ಉಚ್ಚಾಟನೆಗೊಂಡಿರುವ ಡಿ.ಎಸ್.ದಿಲೀಪ್ ತಮ್ಮದೇ ಆದ ‘ಪ್ರಭಾವ’ ಬಳಸಿ ಟಿಕೆಟ್ ತರುವೆ ಎಂದು ಸಭೆಗಳಲ್ಲಿಯೂ ನುಡಿಯುತ್ತಿದ್ದರು. ಊರು ಗೊಲ್ಲರಿಗಿಂತ ಕಾಡುಗೊಲ್ಲರಿಗೆ ಟಿಕೆಟ್ ನೀಡಿ ಎನ್ನುವ ಆಗ್ರಹವೂ ಆ ಸಮುದಾಯದಿಂದ ಕೇಳಿಬಂದಿತ್ತು. ಈ ಸ್ಪರ್ಧೆಯ ನಡುವೆಯೇ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ಟಿಕೆಟ್ ಪಡೆದಿದ್ದಾರೆ. ಬೆಟ್ಟಸ್ವಾಮಿ ಕಳೆದ ಚುನಾವಣೆ‌ಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದರು.

ಚಿಕ್ಕನಾಯಕನಹಳ್ಳಿಯಲ್ಲಿ ಕೆ.ಎಸ್.ಕಿರಣ್ ಕುಮಾರ್ ಮತ್ತು ಜೆ.ಸಿ.ಮಾಧುಸ್ವಾಮಿ ಅವರ ನಡುವೆ ಪೈಪೋಟಿ ಇತ್ತು. ತಮ್ಮ ಮಗಳ ಮದುವೆ ಮುಗಿಯುವವರೆಗೂ ಕಣದಲ್ಲಿ ಸದ್ದು ಮಾಡದ ಕಿರಣ್ ಕುಮಾರ್, ಶುಭಕಾರ್ಯ ಮುಗಿದ ವಾರಕ್ಕೆ, ‘ವರಿಷ್ಠರು ಯಾರಿಗೂ ಟಿಕೆಟ್ ಭರವಸೆ ನೀಡಿಲ್ಲ. ನಾನೂ ಆಕಾಂಕ್ಷಿ’ ಎನ್ನುವ ಮೂಲಕ ಕಣವನ್ನು ಮತ್ತಷ್ಟು ರಂಗುಗೊಳಿಸಿದ್ದರು. ಈಗ ವರಿಷ್ಠರು ಮಾಧುಸ್ವಾಮಿ ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ. ಮಾಧುಸ್ವಾಮಿ ಸಹ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದರು.

ತುರುವೇಕೆರೆಯಲ್ಲಿ 2013ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸೋತಿದ್ದ ಮಸಾಲ ಜಯರಾಂ ಅವರಿಗೆ ನಿರೀಕ್ಷೆಯಂತೆಯೇ ಬಿಜೆಪಿ ಟಿಕೆಟ್ ಸಿಕ್ಕಿದೆ. ಮಸಾಲ ಘಮಲು ತಾಲ್ಲೂಕಿನಲ್ಲಿ ಹೆಚ್ಚಿದಂತೆ ಮೂಲ ಬಿಜೆಪಿ ಮುಖಂಡರಾದ ಚೌದ್ರಿ ನಾಗೇಶ್ ಮತ್ತಿತರರು ಅಸಮಾಧಾನಗೊಂಡಿದ್ದರು. ಯಡಿಯೂರಪ್ಪ ಅವರ ಕರ್ನಾಟಕ ಪರಿವರ್ತನಾ ಯಾತ್ರೆ ತುರುವೇಕೆರೆಯಿಂದ ಚಿಕ್ಕನಾಯಕನ ಹಳ್ಳಿಗೆ ತೆರಳುವಾಗ ಬಾಣಸಂದ್ರ ಬಳಿ ಚೌದ್ರಿ ನಾಗೇಶ್ ಬೆಂಬಲಿಗರು ಯಾತ್ರೆಯ ರಥಕ್ಕೆ ಕಾಯಿ ತೂರಿದ್ದರು. ಆ ನಂತರ ಪಕ್ಷದಲ್ಲಿ ಮಸಾಲ ಪ್ರಬಲರಾದರು.

ಶಿರಾ ವಿಧಾನಸಭಾ ಕ್ಷೇತ್ರದಿಂದ 2008, 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಬಿ.ಕೆ.ಮಂಜುನಾಥ್ ಅವರಿಗೆ ಈ ಬಾರಿಯೂ ಟಿಕೆಟ್ ಸಿಕ್ಕಿದೆ. ಚಿಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ಅಂಬುಜಾ ಅವರ ಪತಿ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್.ಗೌಡ ಹಾಗೂ ಸಿ.ಎಂ.ನಾಗರಾಜು ಟಿಕೆಟ್‌ಗೆ ಪ್ರಯತ್ನಿಸಿದ್ದರು. ನಾಗರಾಜು ಕಾಡುಗೊಲ್ಲರ ಕೋಟಾದಡಿ ಟಿಕೆಟ್ ಕೇಳಿದ್ದರು.

ಅಚ್ಚರಿ ಎನ್ನುವಂತೆ ಪಕ್ಷದ ಹಿರಿಯ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಅವರು ಮಧುಗಿರಿ ಕ್ಷೇತ್ರ ಅಭ್ಯರ್ಥಿಯಾಗಿದ್ದಾರೆ. ಮಧುಗಿರಿಯಲ್ಲಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ತಿಪಟೂರಿನಲ್ಲಿ ನಿರೀಕ್ಷೆಯಂತೆಯೇ ಬಿ.ಸಿ.ನಾಗೇಶ್ ಅವರನ್ನು ಕಣಕ್ಕಿಳಿಸಲಾಗಿದೆ.

ಯಡಿಯೂರಪ್ಪ– ಬಸವರಾಜು ಪ್ರಾಬಲ್ಯ

ಕೆ.ಎಸ್.ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವೆ ರಾಯಣ್ಣ ಬ್ರಿಗೇಡ್ ಕಾರ್ಯಚಟುವಟಿಕೆಗಳ ಕುರಿತು ಸಮರ ತಾರಕಕ್ಕೇರಿದ್ದಾಗಲೇ ಈಶ್ವರಪ್ಪ, ಸೊಗಡು ಶಿವಣ್ಣ ಅವರ ಮನೆಗೆ ಭೇಟಿ ನೀಡಿದ್ದರು. ಇದು ಯಡಿಯೂರಪ್ಪ ಅವರ ಕಣ್ಣು ಕೆಂಪಗಾಗಿಸಿತ್ತು. ಶಿವಣ್ಣ ಪರಿವರ್ತನಾ ಯಾತ್ರೆಯಿಂದಲೂ ದೂರ ಉಳಿದಿದ್ದರು.

ಗುಬ್ಬಿಯಲ್ಲಿ ಡಿ.ಎಸ್.ದಿಲೀಪ್ ಕುಮಾರ್ ಸಹ ಈ ಬಳಗದಲ್ಲಿ ಕಾಣಿಸಿಕೊಂಡಿದ್ದರು. ದಿಲೀಪ್ ಅವರನ್ನು ಪಕ್ಷದಿಂದ ಅಮಾನತೊಳಿಸಲಾಗಿತ್ತು. ತುರುವೇಕೆರೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರು ಎಂದು ಬಂಡಾಯ ಪತಾಕೆ ಹಾರಿಸಿದ್ದವರ ಮೇಲೂ ಜಿಲ್ಲಾ ಘಟಕ ಶಿಸ್ತು ಕ್ರಮ ಎಚ್ಚರಿಕೆ ನೀಡಿತ್ತು. ಈ ಬಂಡಾಯ ಒಳಜಗಳ ಜಿಲ್ಲೆಯಲ್ಲಿ ಪಕ್ಷವನ್ನು ಎರಡು ಬಣಗಳನ್ನಾಗಿಸಿತ್ತು. ಆದರೆ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಹಾಗೂ ಪಕ್ಷದ ಅಭಿವೃದ್ಧಿ ‍ಪ್ರಕೋಷ್ಠದ ಸಂಚಾಲಕ ಜಿ.ಎಸ್.ಬಸವರಾಜು ಪಾರಮ್ಯ ಮೆರೆದಿದ್ದಾರೆ. ತಮ್ಮ ಮಾತುಗಳಿಗೆ ವಿರುದ್ಧವಾಗಿದ್ದವರಿಗೆ ಬಸವರಾಜು, ಯಡಿಯೂರಪ್ಪ ಅವರ ಮೂಲಕವೇ ಟಾಂಗ್ ನೀಡಿದ್ದಾರೆ.

ಉಳಿದದ್ದು ಕುಣಿಗಲ್, ಪಾವಗಡ

ಜಿಲ್ಲೆಯ 11 ಕ್ಷೇತ್ರಗಳಲ್ಲಿ ಈಗ ಕುಣಿಗಲ್ ಮತ್ತು ಪಾವಗಡಕ್ಕೆ ಅಭ್ಯರ್ಥಿಗಳು ಘೋಷಣೆ ಆಗಿಲ್ಲ. ಕುಣಿಗಲ್‌ನಲ್ಲಿ ಡಿ.ಕೃಷ್ಣಕುಮಾರ್ ಮತ್ತು ರಾಜೇಶ್ ಗೌಡ ನಡುವೆ ಟಿಕೆಟ್‌ಗೆ ಸ್ಪರ್ಧೆ ಇದೆ. ಬಿಬಿಎಂ‍ಪಿ ಎಂಜಿನಿಯರ್ ರಾಮಕೃಷ್ಣಪ್ಪ, ಕೃಷ್ಣಾನಾಯಕ್, ಕೊತ್ತೂರು ಹನುಮಂತರಾಯ, ಕಾಂಗ್ರೆಸ್ ಅಭ್ಯರ್ಥಿ ವೆಂಕರವಣಪ್ಪ ಅವರ ಹಿರಿಯ ಪುತ್ರ ಕುಮಾರಸ್ವಾಮಿ, ನಿವೃತ್ತ ಆದಾಯ ತೆರಿಗೆ ಇಲಾಖೆ ಆಯುಕ್ತ ಲಕ್ಷ್ಮಿನಾರಾಯಣಪ್ಪ ಪಾವಗಡದ ಟಿಕೆಟ್‌ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಪಕ್ಷದ ತೀರ್ಮಾನಕ್ಕೆ ಗೌರವ ನೀಡಿ

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆಯೇ ಸೊಗಡು ಶಿವಣ್ಣ ಬೆಂಬಲಿಗರು ಶಿವಣ್ಣ ಅವರ ಮನೆಯ ಎದುರು ಜಮಾಯಿಸಿದರು. ವರಿಷ್ಠರ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ‘ನೀವು ಈಗಲಾದರೂ ಸೂಕ್ತ ತೀರ್ಮಾನ ತೆಗೆದುಕೊಳ್ಳಿ. ಇಲ್ಲದಿದ್ದರೆ ನಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ’ ಎಂದು ಆಗ್ರಹಿಸಿದರು.

‘ಪಕ್ಷದ ನಿರ್ಧಾರವನ್ನು ಎಲ್ಲರೂ ಗೌರವಿಸಿ. ತಾಳ್ಮೆ ಮತ್ತು ಸಹನೆಯೇ ನಮಗೆ ಮುಖ್ಯ. ಎಲ್ಲರೂ ತಾಳ್ಮೆಯಿಂದ ಇರಿ’ ಎಂದು ಶಿವಣ್ಣ ಮನವಿ ಮಾಡಿದರು ಎಂದು ಅವರ ಆಪ್ತ ಬಳಗದವರು ತಿಳಿಸಿದರು.

ಈ ಬಗ್ಗೆ ಶಿವಣ್ಣ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ‘20 ವರ್ಷ ಶಾಸಕನಾಗಿದ್ದೆ. ನಿಮ್ಮ ಜತೆ ಎಲ್ಲವನ್ನೂ ಮಾತನಾಡುವೆ’ ಎಂದು ಹೇಳಿದರು. ಮಂಗಳವಾರ (ಏ.17) ಮಧ್ಯಾಹ್ನ 3ಕ್ಕೆ ರಂಗಾಪುರದ ತಮ್ಮ ನಿವಾಸದಲ್ಲಿ ಸೊಗಡು ಶಿವಣ್ಣ ಅವರು ಬೆಂಬಲಿಗರ ಸಭೆ ಕರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT