ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪರಿಸರ ಸ್ನೇಹಿ ‘ಹಸಿರು ಸರೋವರ’ ಅಭಿವೃದ್ಧಿ

ಜೈವಿಕ ಬೇಲಿಯೊಂದಿಗೆ 100 ಕೆರೆಗಳಿಗೆ ಹೊಸ ಸ್ವರೂಪ
Published 27 ಜುಲೈ 2023, 21:40 IST
Last Updated 27 ಜುಲೈ 2023, 21:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 100 ಕೆರೆಗಳು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಯಾಗುತ್ತಿದ್ದು, ಕಾಂಕ್ರೀಟ್‌, ಪೇವರ್ಸ್‌ಗಳನ್ನು ಅಳವಡಿಸದೆ ಜೈವಿಕ ತಡೆಗೋಡೆಗಳೊಂದಿಗೆ ‘ಹಸಿರು ಸರೋವರ’ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ಹಿಂದೆ ಅನುಸರಿಸುತ್ತಿದ್ದ ಕೆರೆ ನಿರ್ಮಾಣ ಹಾಗೂ ಅವುಗಳ ನಿರ್ವಹಣೆ ವಿಧಾನವನ್ನೇ ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಳವಡಿಸಿಕೊಳ್ಳುತ್ತಿದೆ. ಕೆರೆಗಳನ್ನು ಕೆರೆಗಳನ್ನಾಗಿಯೇ ಉಳಿಸಿಕೊಂಡು, ಅತ್ಯಾಧುನಿಕ ಸೌಕರ್ಯಗಳಿಂದ ದೂರ ಉಳಿಸಿ, ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ತಾಣವನ್ನಾಗಿಸುವ ಯೋಜನೆ ಆರಂಭವಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 100 ಕೆರೆಗಳು ‘ಹಸಿರು ಸರೋವರ’ವಾಗುವ ಕಾರ್ಯ ಆಗಸ್ಟ್‌ನಿಂದ ಆರಂಭವಾಗಲಿದೆ.

ಕೆರೆಗಳಿಗೆ ಕೋಟ್ಯಂತರ ವೆಚ್ಚ ಮಾಡುವುದರ ಹೊರತಾಗಿ, ಕೆರೆಗಳನ್ನು ನೈಸರ್ಗಿಕವಾಗಿಯೇ ಉಳಿಸಿ, ಕಾಂಕ್ರೀಟ್ ಬಳಸದೆ, ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವುದೇ ‘ಹಸಿರು ಸರೋವರ’ ಅಭಿಯಾನದ ಮೂಲ ಉದ್ದೇಶ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ಎಂನರೇಗಾ) ಈ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ. 

ಕೆರೆಯ ಸುತ್ತ ಜೈವಿಕ ಬೇಲಿಯನ್ನು ನಿರ್ಮಿಸಲಾಗುತ್ತದೆ. ಎತ್ತರ ಹಾಗೂ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸಿಗಳನ್ನು ಎರಡು ಸಾಲಿನಲ್ಲಿ ನೆಡಲಾಗುತ್ತದೆ. ಹಿಂದಿನ ಕಾಲದಲ್ಲಿ ಬೇಲಿಯಾಗಿ ಬೆಳೆಸುತ್ತಿದ್ದ ಕತ್ತಾಳೆಯಂತಹ ಮುಳ್ಳಿನ ಗಿಡಗಳನ್ನು, ಎರಡು ಸಾಲಿನ ಮರಗಳ ನಡುವೆ ಬೆಳೆಸಲಾಗುತ್ತದೆ. ಪ್ರತಿ ತಾಲ್ಲೂಕು ಮಟ್ಟದಲ್ಲಿ ರಾಷ್ಟ್ರೀಯ ಜೀವನೋಪಾಯ ಸಂಸ್ಥೆಯಿಂದ (ಎನ್‌ಅರ್‌ಎಲ್‌ಎಂ) ರಚಿತವಾಗಿರವ ಗ್ರಾಮ ಪಂಚಾಯಿತಿ ಮಟ್ಟದ ಸ್ವ–ಸಹಾಯ ಸಂಘಗಳ ಒಕ್ಕೂಟದ ನರ್ಸರಿಗಳಿಂದ ಸಸಿಗಳನ್ನು ನಾಟಿ ಮಾಡಲು ಸೂಚಿಸಲಾಗಿದೆ.

ಕೆರೆಯ ಏರಿಯನ್ನು ಕಡಿಮೆ ಕಲ್ಲು ಬಳಸಿ ಮಣ್ಣಿನಿಂದ ಸದೃಢಗೊಳಿಸಲಾಗುತ್ತದೆ. ಇಳಿಜಾರಿನಲ್ಲಿ ಮಣ್ಣಿನ ಸವೆತ ತಡೆಯಲು ವಡೆಲಿಯಾದಂತಹ ಸಸಿಗಳನ್ನು ನೆಡಲಾಗುತ್ತದೆ. ಕೆರೆಯ ದಂಡೆಯಲ್ಲಿ ‘ಇಂಟರ್‌ಲಾಕಿಂಗ್‌ ಪೇವರ್ಸ್‌’ ಅಳವಡಿಸುವಂತಿಲ್ಲ. ಜೀವವೈವಿಧ್ಯದ ಸಂರಕ್ಷಣೆಯೊಂದಿಗೆ ಅಂತರ್ಜಲ ಮಟ್ಟ ವೃದ್ಧಿಸಲು ಒತ್ತು ನೀಡಲು ಯೋಜಿಸಲಾಗಿದೆ.

ದಾವಣಗೆರೆ, ಧಾರವಾಡ, ಹಾಸನ, ಹಾವೇರಿ ಜಿಲ್ಲೆಗಳಲ್ಲಿ ತಲಾ ಐದು, ಚಿತ್ರದುರ್ಗ, ಗದಗದಲ್ಲಿ ತಲಾ ನಾಲ್ಕು, ಕಲಬುರಗಿ, ಉಡುಪಿ, ವಿಜಯನಗರ ಜಿಲ್ಲೆಗಳಲ್ಲಿ ತಲಾ ಎರಡು ಕೆರೆಗಳು ಸೇರಿದಂತೆ ಉಳಿದ 22 ಜಿಲ್ಲೆಗಳಲ್ಲಿ ತಲಾ ಮೂರು ಕೆರೆಗಳನ್ನು ‘ಹಸಿರು ಸರೋವರ’ವನ್ನಾಗಿಸಲು ನಿರ್ಧರಿಸಲಾಗಿದೆ.

‘ಅಮೃತ ಸರೋವರ ಕಾರ್ಯಕ್ರಮದಲ್ಲಿ ‘ಹಸಿರು ಸರೋವರ ಅಭಿಯಾನವನ್ನು’ ಆಯೋಜಿಸಲಾಗಿದೆ. ಹತ್ತಾರು ಕೆರೆಗಳನ್ನು ನೈಸರ್ಗಿಕವಾಗಿ ಅಭಿವೃದ್ಧಿಗೊಳಿಸಿರುವ ಆನಂದ ಮಲ್ಲಿಗಡವಾಡ ಅವರು ಯೋಜನೆಗೆ ಸಲಹೆ ನೀಡುತ್ತಿದ್ದಾರೆ. 100 ಕೆರೆಗಳು ‘ಹಸಿರು ಸರೋವರಗಳಾಗಿ’ ಈ ಆರ್ಥಿಕ ವರ್ಷದಲ್ಲಿ ಸಿದ್ಧವಾಗಲಿವೆ’ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳು ತಿಳಿಸಿದರು.

ಅನುಷ್ಠಾನ ವಿಧಾನ

* ಕೆರೆಯ ಒಳಾಂಗಣದ ಇಳಿಜಾರಿನಲ್ಲಿ ವಡೆಲಿಯಾದಂತಹ ಸ್ಥಳೀಯವಾಗಿ ಲಭ್ಯವಿರುವ ಸಸಿಗಳ ನಾಟಿ

* ಒಳಹರಿವು, ಹೊರಹರಿವು ಪ್ರದೇಶದ ಅಭಿವೃದ್ಧಿ

* ಹೂಳು ತಡೆಯಲು ಹೊಂಡಗಳ ನಿರ್ಮಾಣ

* ವೈಜ್ಞಾನಿಕವಾಗಿ ಹೂಳು ತೆರವು, ಕೆರೆಯ ಸುತ್ತ ಜೈವಿಕ ಬೇಲಿ

* ಕೋಟಿ ವೃಕ್ಷ ಅಭಿಯಾನದಡಿ ಆಲ, ಅರಳಿ, ಬೇವು ಮುಂತಾದ ಗಿಡಗಳ ನಾಟಿ

* ಜಾನುವಾರುಗಳಿಗೆ ನೀರು ಕುಡಿಯಲು ಇಳಿಜಾರು ಪ್ರದೇಶ

ಅನುಕೂಲಗಳು

* ಕಡಿಮೆ ವೆಚ್ಚದಲ್ಲಿ ಕೆರೆಗಳ ಪುನಶ್ಚೇತನ

* ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ವೃದ್ಧಿ

* ಅತಿಕ್ರಮಣ ತಡೆಗಟ್ಟುವುದು

* ನೈಸರ್ಗಿಕವಾಗಿ ಸೌಂದರ್ಯ ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT