ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಟ್ಟಡ ತ್ಯಾಜ್ಯ ವಿಲೇವಾರಿಗೆ ₹18 ಕೋಟಿ ವೆಚ್ಚ

ಬಿಬಿಎಂಪಿ ವ್ಯಾಪ್ತಿಯ 150 ರಸ್ತೆಗಳಲ್ಲಿರುವ ತ್ಯಾಜ್ಯ ವಿಲೇವಾರಿ ಕಾರ್ಯ ತಿಂಗಳಾಂತ್ಯಕ್ಕೆ ಆರಂಭ
Last Updated 8 ಜನವರಿ 2023, 20:53 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿರುವ ಕಟ್ಟಡ ನಿರ್ಮಾಣ ಮತ್ತು ಅವಶೇಷಗಳ (ಸಿಆ್ಯಂಡ್‌ಡಿ) ತ್ಯಾಜ್ಯ ತೆರವಿಗೆ ಘನತ್ಯಾಜ್ಯ ನಿರ್ವಹಣೆ ವಿಭಾಗ ₹18.49 ಕೋಟಿ ವೆಚ್ಚ ಮಾಡಲಿದೆ.

ಮುಖ್ಯ ರಸ್ತೆಗಳು, ಮೇಲ್ಸೇತುವೆಗಳ ಕೆಳಗೆ ಹಾಗೂ ಹೊರ ವರ್ತುಲ ರಸ್ತೆಗಳ ಬದಿ ಇರುವ ಕಟ್ಟಡ ನಿರ್ಮಾಣ ಮತ್ತು ಅವಶೇಷಗಳ (ಸಿಆ್ಯಂಡ್‌ಡಿ) ತ್ಯಾಜ್ಯವನ್ನು ತೆರವು ಮಾಡಲಾಗುತ್ತದೆ. ಎರಡು ಪ್ಯಾಕೇಜ್‌ಗಳ ಟೆಂಡರ್‌ ಕರೆಯಲಾಗಿದ್ದು, ಅದನ್ನು ಅಂತಿಮಗೊಳಿಸಲಾಗಿದೆ. ಈ ಕಾರ್ಯದ ಯೋಜನಾ ಸಮಾಲೋಚಕರ (ಪಿಎಂಸಿ) ಆಯ್ಕೆಗೆ ಇತ್ತೀಚೆಗೆ ಟೆಂಡರ್‌ ಕರೆಯಲಾಗಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌ಡಬ್ಲ್ಯೂಎಂಎಲ್‌) ವತಿಯಿಂದ ಕಟ್ಟಡ ಅವಶೇಷ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ₹8.27 ಕೋಟಿ ಹಾಗೂ ₹10.22 ಕೋಟಿ ವೆಚ್ಚದ ಎರಡು ಪ್ಯಾಕೇಜ್‌ ಟೆಂಡರ್‌ ಅಂತಿಮವಾಗಿದ್ದು, ಪಿಎಂಸಿಗಾಗಿ ಟೆಂಡರ್‌ ಕರೆಯಲಾಗಿದೆ. ಇದು ಅಂತಿಮವಾದ ಕೂಡಲೇ ವಿಲೇವಾರಿ ಕಾರ್ಯ ಆರಂಭವಾಗುತ್ತದೆ. 2021ರಲ್ಲಿ ನಡೆಸಿದ ಸರ್ವೆ ಪ್ರಕಾರ ನಗರದ ಮುಖ್ಯ ರಸ್ತೆಗಳು, ಮೇಲ್ಸೇತುವೆಗಳ ಕೆಳಗೆ ಹಾಗೂ ಹೊರ ವರ್ತುಲ ರಸ್ತೆಗಳ ಬದಿಯಲ್ಲಿ ಸುಮಾರು 2.47 ಲಕ್ಷ ಕ್ಯೂಬಿಕ್‌ ಮೀಟರ್‌ ಕಟ್ಟಡ ನಿರ್ಮಾಣ ಮತ್ತು ಅವಶೇಷಗಳ (ಸಿಆ್ಯಂಡ್‌ಡಿ) ತ್ಯಾಜ್ಯ ಇದೆ. ಇದನ್ನು ‘ಲೆಗೆಸಿ ವೇಸ್ಟ್‌’ ಎಂದು ಪರಿಗಣಿಸಲಾಗಿದ್ದು, ಒಂದು ಬಾರಿ ಇದನ್ನು ವಿಲೇವಾರಿ ಮಾಡುವ ಯೋಜನೆ ಇದಾಗಿದೆ.

‘ನಗರದ 150 ರಸ್ತೆಗಳ ಬದಿಯಲ್ಲಿರುವ ಸಿ ಆ್ಯಂಡ್‌ ಡಿ ತ್ಯಾಜ್ಯದ ಅಂದಾಜು ಮಾಡಲಾಗಿದೆ. ಈ ತ್ಯಾಜ್ಯವನ್ನು ಒಂದು ಬಾರಿ ಅಲ್ಲಿಂದ ತೆಗೆದು ವಿಲೇವಾರಿ ಮಾಡಲು ಗುತ್ತಿಗೆ ನೀಡಲಾಗಿದೆ. ಜಿಪಿಎಸ್‌ ಅಳವಡಿಸಲಾಗಿರುವ ವಾಹನಗಳ ಮೂಲಕ ಈ ಸಿ ಆ್ಯಂಡ್‌ ಡಿ ತ್ಯಾಜ್ಯವನ್ನು ಸುರಕ್ಷತಾ ಕ್ರಮಗಳೊಂದಿಗೆ ವಿಲೇವಾರಿಮಾಡಬೇಕು. ಗುತ್ತಿಗೆದಾರರು ಈ ತ್ಯಾಜ್ಯ ವಿಲೇವಾರಿ ಮಾಡುವ ಕ್ವಾರಿಗಳನ್ನು ಗುರುತಿಸಿಕೊಳ್ಳಬೇಕು. ಅವರೇ ಎಲ್ಲ ರೀತಿಯ ನಿರ್ವಹಣೆ ಮಾಡಬೇಕು ಎಂಬುದು ಟೆಂಡರ್‌ ನಿಯಮವಾಗಿದೆ’ ಎಂದು ಬಿಎಸ್‌ಡಬ್ಲ್ಯೂಎಂಎಲ್‌ನ ಕಾರ್ಯಪಾಲಕ ಎಂಜಿನಿಯರ್‌ ಮಧು ತಿಳಿಸಿದರು.

ಮಾಲೀಕರಿಂದಲೇ ಕಟ್ಟಡ ತ್ಯಾಜ್ಯ ಸಂಗ್ರಹ
ಬಿಬಿಎಂಪಿ ವ್ಯಾ‍ಪ್ತಿಯಲ್ಲಿ ಕಟ್ಟಡ ನಿರ್ಮಿಸುವವರಿಗೆ ತ್ಯಾಜ್ಯ ಹೊರಹಾಕುವುದು ದೊಡ್ಡ ಸಮಸ್ಯೆಯಾಗಿದ್ದು, ಅದಕ್ಕೆ ಪರಿಹಾರವಾಗಿ ಬಿಎಸ್‌ಡಬ್ಲ್ಯೂಎಂಎಲ್‌ ‘ಮಾಲೀಕರಿಂದಲೇ ಕಟ್ಟಡ ತ್ಯಾಜ್ಯ ಸಂಗ್ರಹ’ ಮಾಡುವ ಯೋಜನೆಯನ್ನು ಆರಂಭಿಸಲು ಯೋಜಿಸಿದೆ.

ಹೊಸದಾಗಿ ಕಟ್ಟಡ ನಿರ್ಮಾಣ ಅಥವಾ ನವೀಕರಣ ಸಂದರ್ಭದಲ್ಲಿ ನಿರ್ಮಾಣ ಸಾಮಗ್ರಿಗಳ ತ್ಯಾಜ್ಯ ಬೀಳುತ್ತದೆ. ಇದನ್ನು ಟ್ರ್ಯಾಕ್ಟರ್‌ ಅಥವಾ ಯಾರಿಗೋ ಹೇಳಿ ಹೊರ ಹಾಕಲಾಗುತ್ತಿದೆ. ಆದರೆ ಬಿಎಸ್‌ಡಬ್ಲ್ಯೂಎಂಎಲ್‌ ಹೊಸ ಯೋಜನೆ ಅನುಷ್ಠಾನವಾದರೆ, ನಿವೇಶನ ಅಥವಾ ಕಟ್ಟಡದ ಸ್ಥಳದಿಂದಲೇ ಬಿಬಿಎಂಪಿ ನಿಗದಿಪಡಿಸಿದ ಗುತ್ತಿಗೆದಾರರು ತ್ಯಾಜ್ಯವನ್ನು ಕೊಂಡೊಯ್ಯುತ್ತಾರೆ. ನಿಗದಿಪಡಿಸಿದ ಸ್ಥಳದಲ್ಲಿ ವಿಲೇವಾರಿ ಮಾಡುತ್ತಾರೆ.

‘ಗುತ್ತಿಗೆದಾರರನ್ನು ಅಂತಿಮಗೊಳಿಸಿ, ಒಂದು ಲಾರಿ ಅಥವಾ ಟ್ರ್ಯಾಕ್ಟರ್‌ ಲೋಡಿನ ಸಿ ಆ್ಯಂಡ್‌ ಡಿ ತ್ಯಾಜ್ಯ ಕೊಂಡೊಯ್ಯಲು ಶುಲ್ಕ ನಿಗದಿ ಮಾಡುತ್ತದೆ. ಮಾಲೀಕರು ಬಿಬಿಎಂಪಿಯನ್ನು ಸಂಪರ್ಕಿಸಿ, ಶುಲ್ಕ ಪಾವತಿಸಿದರೆ ತ್ಯಾಜ್ಯ ಕೊಂಡೊಯ್ಯುತ್ತಾರೆ. ಈ ಯೋಜನೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಹಂತದಲ್ಲಿದೆ’ ಎಂದು ಬಿಎಸ್‌ಡಬ್ಲ್ಯೂ ಎಂಎಲ್‌ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT