ಸೋಮವಾರ, ಡಿಸೆಂಬರ್ 6, 2021
27 °C

2ನೇ ಬಾರಿ ಕೊರೊನಾ: ವರದಿ ನೀಡಲು ಅಧಿಕಾರಿಗಳಿಗೆ ಸಚಿವ ಡಾ. ಕೆ. ಸುಧಾಕರ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ಕೊರೊನಾದಿಂದ ಗುಣಮುಖರಾದವರಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದರು.

ಕೋವಿಡ್-19 ತಪಾಸಣೆಯ ಕುರಿತು ಹಿರಿಯ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಅವರು, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೊರೊನಾದಿಂದ ಗುಣಮುಖರಾಗಿದ್ದ 27 ವರ್ಷದ ಮಹಿಳೆಗೆ ಮತ್ತೊಮ್ಮೆ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದರು.

‘ಇತರ ರಾಷ್ಟ್ರಗಳಲ್ಲೂ ಈ ರೀತಿಯ ಪ್ರಕರಣಗಳು ಕಂಡುಬಂದಿವೆ. ಇದಕ್ಕೆ ಒಂದೊಂದು ದೇಶದಲ್ಲೂ ಒಂದೊಂದು ರೀತಿ ಕಾರಣ ಕೇಳಿಬಂದಿವೆ. ನಮ್ಮಲ್ಲೂ ಇಂಥ ಪ್ರಕರಣ ಕಾಣಿಸಿಕೊಂಡಿರುವುದು ಆತಂಕದ ವಿಷಯ. ಇದನ್ನು ಸೂಕ್ಷ್ಮರೀತಿಯಲ್ಲಿ ನಿರ್ವಹಿಸುವ ಮೂಲಕ ಜನರಲ್ಲಿ ಮತ್ತೊಮ್ಮೆ ಕೊರೊನಾ ಬಾಧಿಸುತ್ತದೆ‌ ಎಂಬ ಆತಂಕ ದೂರ ಮಾಡಬೇಕು’ ಎಂದರು.

‘ಕೋವಿಡ್‌‌ನಿಂದ ಗುಣಮುಖರಾದವರ ದೇಹದಲ್ಲಿ ಬಿಳಿರಕ್ತ ಕಣಗಳ ಮರು ಉತ್ಪಾದನೆಗೆ ಕನಿಷ್ಠ 15 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಕೆಲವರಿಗೆ ಸೋಂಕು ಮತ್ತೊಮ್ಮೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ, ಇದೇ ಕಾರಣ ಎಂದು ಸ್ಪಷ್ಟವಾಗಿ ಹೇಳಲಾಗದು‌’ ಎಂದು ಸಭೆಯಲ್ಲಿದ್ದ ತಜ್ಞರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಮತ್ತೊಮ್ಮೆ ಕೊರೊನ ಸೋಂಕು ಕಾಣಿಸಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ನಿಖರತೆ ಬೇಕು. ಜೊತೆಗೆ ಇತರೆ ರಾಜ್ಯಗಳಲ್ಲಿ ಇಂಥ ಪ್ರಕರಣಗಳಲ್ಲಿ ಅಳವಡಿಸಿಕೊಂಡಿರುವ ಚಿಕಿತ್ಸಾ ಕ್ರಮದ ಬಗ್ಗೆ ಶೀಘ್ರವೇ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ಕೋವಿಡ್‌ನಿಂದ ಗುಣಮುಖರಾದವರ ಮೇಲೆ ಯಾವ ರೀತಿ ನಿಗಾ ವಹಿಸಲಾಗುತ್ತಿದೆ. ಅವರು ಅನುಸರಿಸಬೇಕಾದ ಎಚ್ಚರಿಕೆ ಹಾಗೂ ಇತರೆ ಕ್ರಮಗಳ ಬಗ್ಗೆ ಯಾವ ರೀತಿ ಅರಿವು ಮೂಡಿಸಲಾಗಿದೆ ಎಂಬ ವಿಷಯಗಳ ಬಗ್ಗೆಯೂ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.

ಬೂತ್‌ ಮಟ್ಟದ ಸಮಿತಿಗೆ ಜವಾಬ್ದಾರಿ: ‘ಕೋವಿಡ್ ನಿಯಂತ್ರಣ ಬೂತ್‌ಮಟ್ಟದಿಂದ‌ ಮಾತ್ರ ಸಾಧ್ಯ ಎಂಬುದನ್ನು‌ ಮೊದಲಿನಿಂದ ಪ್ರತಿಪಾದಿಸಿದ್ದೇವೆ. ಬೂತ್ ಮಟ್ಟದಲ್ಲಿ‌ ಸಮಿತಿ ರಚಿಸಿ, ಜಾಗೃತಿ ಮೂಡಿಸುವುದು ಹಾಗೂ ಕೊರೊನಾ ಪರೀಕ್ಷೆ ನಡೆಸುವುದರಿಂದ ಸುಲಭವಾಗಿ ಸೋಂಕು ಹರಡುವಿಕೆ ನಿಯಂತ್ರಣ ಸಾಧ್ಯ. ಈ ಜವಾಬ್ದಾರಿಯನ್ನು ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ವಹಿಸಿದರೆ ಇದರ ನಿರ್ವಹಣೆ ಸುಲಭ’ ಎಂದೂ ಸಚಿವರು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು