ಭಾನುವಾರ, ಅಕ್ಟೋಬರ್ 17, 2021
23 °C
ಕೆಲಸಕ್ಕಾಗಿ ಅಲೆದ ಬಾಲಕರು

ನಾಪತ್ತೆಯಾಗಿದ್ದ 3 ಮಕ್ಕಳು ಪತ್ತೆ- ಪೊಲೀಸರಿಗೆ ಪತ್ರಿಕಾ ವಿತರಕರಿಂದ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ನಾವು ಕ್ರೀಡೆಯಲ್ಲಿ ಸಾಧನೆ ಮಾಡಿ, ಹೆಸರು ಹಾಗೂ‌ ಹಣ ಸಂಪಾದನೆ‌ ಮಾಡುತ್ತೇವೆ' ಎಂಬುದಾಗಿ ಪತ್ರ ಬರೆದಿಟ್ಟು ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ‌ ಮೂವರು ಮಕ್ಕಳು, ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದಾರೆ.

ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ‌ವಾಸವಿದ್ದ 15 ವರ್ಷದ ಪರೀಕ್ಷಿತ್, ನಂದನ್ ಹಾಗೂ ಕಿರಣ್ ವಾಯುವಿಹಾರಕ್ಕೆ‌ ಹೋಗಿ ಬರುವುದಾಗಿ‌‌ ಹೇಳಿ ನಾಪತ್ತೆಯಾಗಿದ್ದರು. ಪೋಷಕರು ಠಾಣೆಗೆ ದೂರು ನೀಡಿದ್ದರು.

ಸೋಮವಾರ ನಸುಕಿನಲ್ಲಿ ಗಾಂಧಿನಗರ, ಆನಂದರಾವ್ ವೃತ್ತ, ಮೆಜೆಸ್ಟಿಕ್ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಮಕ್ಕಳು ಓಡಾಡುತ್ತಿದ್ದರು. ‘ಕೆಲಸ ಇದೆಯಾ’ ಎಂಬುದಾಗಿ ಹಲವರ ಬಳಿ ಕೇಳುತ್ತಿದ್ದರು. ಮಕ್ಕಳ ಪೂರ್ವಾಪರ ವಿಚಾರಿಸಿದ್ದ ಗಾಂಧಿನಗರದ ಪತ್ರಿಕಾ ವಿತರಕ ಸಂಗಮ್ ಸುರೇಶ್ ಹಾಗೂ ಸ್ನೇಹಿತರು, ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಮಕ್ಕಳನ್ನು ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದ ಪೊಲೀಸರು, ಪೋಷಕರಿಗೆ ವಿಷಯ ತಿಳಿಸಿದ್ದರು. ಠಾಣೆಗೆ ಬಂದ ಪೋಷಕರು ಹಾಗೂ ಬಾಗಲಗುಂಟೆ ಪೊಲೀಸರು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮಕ್ಕಳನ್ನು ಕರೆದೊಯ್ದಿದ್ದಾರೆ.

‘ನಾವು ಕಬಡ್ಡಿ ಚೆನ್ನಾಗಿ ಆಡುತ್ತೇವೆ. ಆದರೆ, ಪೋಷಕರು ಆಟಕ್ಕೆ ಕಳುಹಿಸುವುದಿಲ್ಲ. ಓದು ಓದು ಎಂದಷ್ಟೇ ಹೇಳುತ್ತಾರೆ. ಇದರಿಂದ ನೊಂದು ಮನೆ ಬಿಟ್ಟು ಬಂದಿದ್ದೆವು. ನೀವೇ ಕಬಡ್ಡಿ ಆಡಲು ಸಹಾಯ ಮಾಡಿ’ ಎಂದು ಮಕ್ಕಳು ಪೊಲೀಸರನ್ನೇ ಕೋರಿದ್ದರು.

ಪೊಲೀಸರು, ‘ಕೊರೊನಾ ಇದೆ. ಈಗ ಎಲ್ಲಿಯೂ ತರಬೇತಿ ನೀಡುವುದಿಲ್ಲ. ಸದ್ಯ ಮನೆಗೆ ಹೋಗಿ. ಮುಂದೆ ನಿಮಗೆ ಕಬಡ್ಡಿ ತರಬೇತಿ ಕೊಡಿಸಲು ಪೋಷಕರಿಗೆ ಹೇಳುತ್ತೇವೆ’ ಎಂಬುದಾಗಿ ಹೇಳಿ ಸಮಾಧಾನಪಡಿಸಿದರು.

ಪತ್ರಿಕೆ ಹಾಕುವ ಕೆಲಸ ಕೇಳಿದ್ದರು: ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಂಗಮ್ ಸುರೇಶ್, ‘ಎಂದಿನಂತೆ ಬೆಳಿಗ್ಗೆ ಗಾಂಧಿನಗರಕ್ಕೆ ಬಂದು ಪತ್ರಿಕೆ ಹೊಂದಿಸುತ್ತಿದ್ದೆವು. 6.30 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದಿದ್ದ ಬಾಲಕ, ‘ಪತ್ರಿಕೆ ಹಾಕುವ ಕೆಲಸ ಕೊಡಿ’ ಎಂದಿದ್ದ. ಇನ್ನಿಬ್ಬರು ಬಾಲಕರು ದೂರದಲ್ಲಿ ನಿಂತಿದ್ದರು’ ಎಂದರು.

‘ಮೂವರು ಮಕ್ಕಳನ್ನು ಸಮಾಧಾನದಿಂದ ಮಾತನಾಡಿಸಿದ್ದೆ. ಪತ್ರಿಕೆ ಹಾಕುವ ಕೆಲಸ ಬೇಕಾದರೆ, ಆಧಾರ್ ಕಾರ್ಡ್ ತನ್ನಿ ಎಂದಿದ್ದೆ. ಆಗ ಮಕ್ಕಳು, ‘ಮನೆ ಬಿಟ್ಟು ಬಂದಿದ್ದೇವೆ. ವಾಪಸು ಹೋಗುವುದಿಲ್ಲ’ ಎಂದಿದ್ದರು. ಹೆಸರು ಕೇಳಿದಾಗ, ಪರೀಕ್ಷಿತ್, ನಂದನ್ ಹಾಗೂ ಕಿರಣ್ ಎಂದಿದ್ದರು.’

‘ಮಕ್ಕಳು ನಾಪತ್ತೆಯಾದ ಬಗ್ಗೆ ಪತ್ರಿಕೆಯಲ್ಲಿ ಹೆಸರು ಸಮೇತ ಸುದ್ದಿ ಬಂದಿತ್ತು. ನಾಪತ್ತೆಯಾಗಿದ್ದ ಮಕ್ಕಳು ಇವರೇ ಎಂಬುದು ತಿಳಿಯಿತು. ಹೆಚ್ಚು ಮಾತನಾಡಿಸಿದಾಗ ಮಕ್ಕಳು, ಸ್ಥಳದಿಂದ ಹೊರಟು ಹೋದರು. ಅವರನ್ನು ಹಿಂಬಾ
ಲಿಸಿಕೊಂಡು ಹೋಗಿ, ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಗೆ ಮಾಹಿತಿ ನೀಡಿದೆ’ ಎಂದೂ ಸುರೇಶ್ ಹೇಳಿದರು.

ಮೈಸೂರಿಗೆ ಹೋಗಿ ಬಂದಿದ್ದರು: ‘ಮನೆ ತೊರೆದಿದ್ದ ಮಕ್ಕಳು, ಮೈಸೂರಿಗೆ ಹೋಗಿದ್ದರು. ಇಡೀ ದಿನ ಅಲ್ಲಿಯೇ ಸುತ್ತಾಡಿದ್ದರು. ಭಾನುವಾರ ತಡರಾತ್ರಿ ಮೂವರು ಬೆಂಗಳೂರಿಗೆ ವಾಪಸು ಬಂದಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಯುವತಿ, 3 ಮಕ್ಕಳಿಗಾಗಿ ಶೋಧ

‘ಬಾಗಲಗುಂಟೆ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಸಿಕ್ಕಿದ್ದಾರೆ. ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿರುವ ಬಿಸಿಎ 3ನೇ ವರ್ಷದ ವಿದ್ಯಾರ್ಥಿನಿ ಅಮೃತವರ್ಷಿಣಿ (21), 12 ವರ್ಷ ವಯಸ್ಸಿನ ರಾಯನ್ ಸಿದ್ದಾರ್ಥ್, ಚಿಂತನ ಹಾಗೂ ಭೂಮಿ ಬಗ್ಗೆ ಮಾಹಿತಿ ಸಿಕ್ಕಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಾಲ್ವರೂ ರೈಲಿನಲ್ಲಿ ಮಂಗಳೂರಿಗೆ ಹೋಗಿರುವ ಅನುಮಾನವಿದೆ. ವಿಶೇಷ ತಂಡ ಈಗಾಗಲೇ ಮಂಗಳೂರಿಗೆ ಹೋಗಿದ್ದು, ನಾಲ್ವರಿಗಾಗಿ ಶೋಧ ನಡೆಸುತ್ತಿದೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು