ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

350 ಹಾಸಿಗೆಯ ಹೃದ್ರೋಗ ಆಸ್ಪತ್ರೆ ಲೋಕಾರ್ಪ‍ಣೆ

ಜಯದೇವ ಹೃದ್ರೋಗ ಸಂಸ್ಥೆ ಆವರಣದಲ್ಲಿ ನಿರ್ಮಾಣ
Last Updated 15 ನವೆಂಬರ್ 2021, 21:31 IST
ಅಕ್ಷರ ಗಾತ್ರ

ಬೆಂಗಳೂರು: ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಇನ್ಫೊಸಿಸ್‌ ಫೌಂಡೇಷನ್‌ ವತಿಯಿಂದ ನಿರ್ಮಿಸಿರುವ 350 ಹಾಸಿಗೆಗಳ ಸಾಮರ್ಥ್ಯದ ಹೊಸ ಆಸ್ಪತ್ರೆಯ ಉದ್ಘಾಟನೆ ಇದೇ 17ರಂದು ನಡೆಯಲಿದೆ.

‘₹103 ಕೋಟಿ ವೆಚ್ಚದಲ್ಲಿ ಈ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗಿದೆ. ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಆಸ್ಪತ್ರೆ ನಿರ್ಮಾಣಕ್ಕೆ ಈ ದೇಣಿಗೆ ನೀಡಿದ್ದಾರೆ. ಈ ಹೊಸ ಆಸ್ಪತ್ರೆ ಸೇರಿದರೆ ದೇಶದ ಅತ್ಯಂತ ದೊಡ್ಡ ಹೃದ್ರೋಗ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಜಯದೇವ ಹೃದ್ರೋಗ ಸಂಸ್ಥೆ ಪಾತ್ರವಾಗಲಿದೆ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾಲ್ಕು ಅಂತಸ್ತಿನ ಹೊಸ ಕಟ್ಟಡದಲ್ಲಿ ಎರಡು ಕಾರ್ಡಿಯಾಕ್‌ ಕ್ಯಾಥ್‌ ಲ್ಯಾಬ್‌, ಎರಡು ಶಸ್ತ್ರಚಿಕಿತ್ಸೆಯ ಕೊಠಡಿಗಳು, ಒಂದು ಹೈಬ್ರಿಡ್‌ ಶಸ್ತ್ರಚಿಕಿತ್ಸೆ ಕೊಠಡಿ, 100 ಐಸಿಸಿಯು ಬೆಡ್‌ಗಳು, 250 ಸಾಮಾನ್ಯ ಹಾಸಿಗೆ ವ್ಯವಸ್ಥೆ ಇದೆ. ಹೊಸ ಎರಡು ಕಾರ್ಡಿಯಾಕ್‌ ಕ್ಯಾಥ್‌ಲ್ಯಾಬ್‌ಗಳೂ ಸೇರಿ ಸಂಸ್ಥೆಯ ಕ್ಯಾಥ್‌ಲ್ಯಾಬ್‌ಗಳ ಸಂಖ್ಯೆ 15ಕ್ಕೆ ಹೆಚ್ಚಲಿದೆ’ ಎಂದು ವಿವರಿಸಿದರು.

‘ಜಯದೇವ ಆಸ್ಪತ್ರೆಯಲ್ಲಿ 650 ಹಾಸಿಗೆ ಸಾಮರ್ಥ್ಯ ಇದ್ದರೂ ಪ್ರತಿ ದಿನ 1500ಕ್ಕೂ ಹೆಚ್ಚು ಹೊರರೋಗಿಗಳು ತಪಾಸಣೆಗೆ ಬರುತ್ತಿದ್ದಾರೆ. ರಾತ್ರಿ 8ಗಂಟೆಯಿಂದ ಬೆಳಿಗ್ಗೆ 6ರವರೆಗೆ ಪ್ರತಿ ಐದು ನಿಮಿಷಕ್ಕೆ ಒಬ್ಬ ರೋಗಿ ತುರ್ತು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಿದೆ. ಈಗಿರುವ ಎಲ್ಲ ಐಸಿಯುಗಳು ಹಾಗೂ ವಾರ್ಡ್‌ಗಳು ಭರ್ತಿಯಾಗಿವೆ. ಹೀಗಾಗಿ, ಇನ್ಫೊಸಿಸ್‌ ಫೌಂಡೇಷನ್‌ ಕೊಡುಗೆಯಾಗಿ ನೀಡುತ್ತಿರುವ ಈ ಆಸ್ಪತ್ರೆಯಿಂದ ಒತ್ತಡ ನಿವಾರಣೆಯಾಗಲಿದೆ’ ಎಂದರು.

‘ಕೇವಲ 36 ಗುಂಟೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿರುವುದು ಎಂಜಿನಿಯರಿಂಗ್‌ ಕೌಶಲಕ್ಕೆ ಸಾಕ್ಷಿಯಾಗಿದ್ದು, 20 ತಿಂಗಳಲ್ಲಿ ಕಾಮಗಾರಿ ಮುಗಿಸಲಾಗಿದೆ. ಈಗಿರುವ ಆಸ್ಪತ್ರೆಗೂ ಹೊಸದಾಗಿ ನಿರ್ಮಿಸಿರುವ ಆಸ್ಪತ್ರೆಗೂ ಸಂಪರ್ಕ ಸೇತುವೆ ನಿರ್ಮಿಸಲಾಗಿದ್ದು, ಭೌತಿಕವಾಗಿ ಒಂದೇ ಘಟಕವಾಗಿರುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT