ಶನಿವಾರ, ನವೆಂಬರ್ 28, 2020
17 °C
ಕನ್ನಡ ತಾಯಿ ಭುವನೇಶ್ವರಿಗೆ ನಮನ * ಕೊರೊನಾ ಜಾಗೃತಿಗೂ ಆದ್ಯತೆ

ರಾಜ್ಯೋತ್ಸವ: ರಾರಾಜಿಸಿದ 360 ಅಡಿಯ ಬಾವುಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ‘ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಪ್ರತಿವರ್ಷವೂ ಪ್ರೋತ್ಸಾಹಿಸುವ ಕೆಲಸವನ್ನು ಡಿಎಸ್ ಮ್ಯಾಕ್ಸ್ ಸಂಸ್ಥೆ ಮಾಡುತ್ತಿದೆ’ ಎಂದು ಸಂಸ್ಥೆಯ ನಿರ್ದೇಶಕ ಎಸ್.ಪಿ.ದಯಾನಂದ ತಿಳಿಸಿದರು.

ಸರ್ವಜ್ಞನಗರದ ಎಚ್‌ಬಿಆರ್‌ ಬಡಾವಣೆಯ ಡಿಎಸ್ ಮ್ಯಾಕ್ಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ, ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಪ್ರತಿವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಏಳು ಸಾಧಕರಿಗೆ ‘ಸಾಹಿತ್ಯ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಕೊರೊನಾದಿಂದಾಗಿ ಈ ವರ್ಷ ಕಾರ್ಯಕ್ರಮ ರದ್ದು ಮಾಡಲಾಗಿದೆ’ ಎಂದರು. 

‘ಕನ್ನಡ ಬರದೇ ಇರುವವರಿಗೂ ಕನ್ನಡ ಕಲಿಸುವ ಮೂಲಕ ಕನ್ನಡದ ಅಭಿಮಾನ ಮೂಡುವಂತೆ ಮಾಡಬೇಕು’ ಎಂದು ಹೇಳಿದರು.

ಕನ್ನಡ ಭುವನೇಶ್ವರಿಯ ಬೆಳ್ಳಿಯ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆ ಮೂಲಕ ತರಲಾಯಿತು. ಡಿಎಸ್ ಮ್ಯಾಕ್ಸ್ ಸಂಸ್ಥೆಯ ಸಿಬ್ಬಂದಿ 360 ಅಡಿ ಉದ್ದದ ಕನ್ನಡ ಬಾವುಟವನ್ನು ಪ್ರದರ್ಶಿಸಿದರು. ಕನ್ನಡ ಹಾಗೂ ಕೊರೊನಾ ಜಾಗೃತಿಯ ಫಲಕಗಳನ್ನೂ ಪ್ರದರ್ಶಿಸಲಾಯಿತು.

‘ಕಲೆ, ಜಾನಪದ ಉಳಿವು ಅಗತ್ಯ’

ರಾಜರಾಜೇಶ್ವರಿನಗರ: ‘ಕನ್ನಡಭಾಷೆಯ ನಮ್ಮ ಮೂಲ ಸಂಸ್ಕೃತಿ, ಪರಂಪರೆ, ಕಲೆ, ಜಾನಪದ ಸೊಗಡನ್ನು ಉಳಿಸುವ ಕಾರ್ಯದಲ್ಲಿ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ತೊಡಗಿಸಿಕೊಂಡಿದೆ’ ಎಂದು ಗಾಯಕ ಡಾ.ಗುರುರಾಜ ಹೊಸಕೋಟೆ ತಿಳಿಸಿದರು.

ಪಟ್ಟಣಗೆರೆಯ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ನುಡಿಹಬ್ಬ ಕಾರ್ಯಕ್ರಮವನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಮಟ್ಟದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧೆಡೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಸ್ಥೆಯ ಅಧ್ಯಕ್ಷ ಬಸವಾನಂದಪ್ರಕಾಶ್, ಶ್ರೀಕುಮಾರನ್ಸ್ ಪದವಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಎಸ್.ಇಂದ್ರಾಣಿ, ಕರ್ನಾಟಕ ಸಂಸ್ಕೃತಿ ವಿದ್ಯಾಪೀಠದ ಪ್ರಾಂಶುಪಾಲ ಡಿ.ಬಿ.ವಿವೇಕಾನಂದ, ನಿರ್ದೇಶಕ ಡಿ.ಬಿ.ವಿಜಯಾನಂದ ಮಾತನಾಡಿದರು.

‘ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ: ದುರಂತ’

ಯಲಹಂಕ: ‘ಕನ್ನಡ ಹಲವು ವೈವಿಧ್ಯಗಳಿಂದ ಕೂಡಿದ ಶ್ರೇಷ್ಠ ಭಾಷೆಯಾಗಿದ್ದರೂ, ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮೊರೆಹೋಗುತ್ತಿರುವುದು ದುರಂತದ ಸಂಗತಿ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ಮಿನಿವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆತ ದೇಶ ಎಂದಿಗೂ ಉಳಿಯುವುದಿಲ್ಲ. ಹೆತ್ತ ತಾಯಿಯನ್ನು ಗೌರವಿಸುವ ರೀತಿಯಲ್ಲಿ ತಾಯಿ ಕನ್ನಡಾಂಬೆಯನ್ನು ಪ್ರತಿನಿತ್ಯ ಆರಾಧಿಸಬೇಕು. ಇತರೆ ಭಾಷೆಗಳನ್ನು ವ್ಯವಹಾರಿಕವಾಗಿ ಬಳಸಿದರೂ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ಯಲಹಂಕ ರತ್ನ ಪ್ರಶಸ್ತಿ:

ಕೊರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸಿದ ಶಾಸಕ ವಿಶ್ವನಾಥ್‌ ಅವರ ಆಪ್ತಸಹಾಯಕರಾಗಿದ್ದ ದಿವಂಗತ ಎಚ್.ಡಿ.ಮುನಿಆಂಜಿನಪ್ಪ ಅವರಿಗೆ ನೀಡಲಾದ ಮರಣೋತ್ತರ ಪ್ರಶಸ್ತಿಯನ್ನು ಸಹೋದರ ಎಚ್.ಡಿ.ಕೃಷ್ಣಪ್ಪ ಸ್ವೀಕರಿಸಿದರು.

ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್, ವೈದ್ಯರಾದ ಡಾ.ರೂಪರ್ಶಿ, ಡಾ.ಉಷಾ ಹಾಗೂ ಡಾ.ಅರ್ಚನಾ ಅವರಿಗೆ ‘ಯಲಹಂಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ವಿಶೇಷ ತಹಶೀಲ್ದಾರ್ ಕೆ.ಮಂಜುನಾಥ್, ಬಿಬಿಎಂಪಿ ಮಾಜಿ ಸದಸ್ಯ ಎಂ.ಸತೀಶ್, ಮುಖಂಡರಾದ ರಾಜಣ್ಣ, ಕಡತನಮಲೆ ಸತೀಶ್, ಮುನಿಕೃಷ್ಣಪ್ಪ, ಹನುಮಯ್ಯ, ಯಲಹಂಕ ಕ.ಸಾ.ಪ ಅಧ್ಯಕ್ಷ ಎಸ್ಎಲ್ಎನ್ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಅ.ಬ.ಶಿವಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು