ಮೆಟ್ರೊ ರೈಲು ನಿಲ್ದಾಣ ನಿರ್ಮಾಣ: ಎಂಬೆಸಿ ಸಮೂಹ ₹300 ಕೋಟಿ ನೆರವು

7

ಮೆಟ್ರೊ ರೈಲು ನಿಲ್ದಾಣ ನಿರ್ಮಾಣ: ಎಂಬೆಸಿ ಸಮೂಹ ₹300 ಕೋಟಿ ನೆರವು

Published:
Updated:
ಮೆಟ್ರೊ ರೈಲು ನಿಲ್ದಾಣ ನಿರ್ಮಾಣ: ಎಂಬೆಸಿ ಸಮೂಹ ₹300 ಕೋಟಿ ನೆರವು

ಬೆಂಗಳೂರು: ನಗರದಲ್ಲಿ ಮೆಟ್ರೊ ರೈಲು ನಿಲ್ದಾಣ, ಮೇಲು ರಸ್ತೆ, ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಎಂಬೆಸಿ ಸಮೂಹ ₹ 300 ಕೋಟಿ ನೀಡಲಿದೆ. ಇದರಲ್ಲಿ ₹100 ಕೋಟಿ ಕಾಡುಬೀಸನ ಹಳ್ಳಿ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ ವಿನಿಯೋಗವಾಗಲಿದೆ.

ಎಂಬೆಸಿ ಟೆಕ್‌ ವಿಲೇಜ್‌ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮದ ಜತೆಗೆ ಕಳೆದ ವರ್ಷವೇ ಮಾತುಕತೆ ನಡೆದಿತ್ತು. ಅದೀಗ ಅಂತಿಮ ಹಂತಕ್ಕೆ ಬಂದಿದ್ದು, ಬುಧವಾರ ಎಂಬೆಸಿ ಸಮೂಹ ಮತ್ತು ಮೆಟ್ರೊ ನಿಗಮ ಒಪ್ಪಂದಕ್ಕೆ ಸಹಿ ಹಾಕಿವೆ. ಟೆಕ್‌ ವಿಲೇಜ್‌ ಮತ್ತು ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸ್ಕೈವಾಕರ್‌ಗೆ ಮತ್ತೆ ₹9 ಕೋಟಿ ನೀಡುವ ಒಪ್ಪಂದ ಮಾಡಿಕೊಂಡಿದೆ. ಕಾರ್ಪೊರೇಟ್‌ – ಸಾಮಾಜಿಕ ಕಳಕಳಿಯ ಭಾಗವಾಗಿ ಈ ಕೊಡುಗೆ ನೀಡಲಾಗಿದೆ. 

ಥಣಿಸಂಧ್ರದಿಂದ ನಾಗವಾರ ಕೆರೆ ಜಂಕ್ಷನ್‍ವರೆಗೆ ಇನ್ನೊಂದು ಮೇಲುರಸ್ತೆ ನಿರ್ಮಾಣವಾಗುತ್ತಿದೆ. ದ್ವಿಮುಖ ಸಂಚಾರ ಸೌಲಭ್ಯ ಒಳಗೊಂಡ ಈ ಮೇಲುರಸ್ತೆ ಎಂಬೆಸಿ ಮಾನ್ಯತಾ ಬ್ಯುಸಿನೆಸ್ ಪಾರ್ಕ್‍ನ ಒಳಗೆ ಹಾದು ಹೋಗಲಿದೆ. ಇದರ ನಿರ್ಮಾಣ ₹ 150 ಕೋಟಿ ವೆಚ್ಚದಲ್ಲಿ ಆಗುತ್ತಿದೆ. ಇದಕ್ಕೂ ಸಂಸ್ಥೆ ಕೊಡುಗೆ ನೀಡಿದೆ. ಕಾಮಗಾರಿಗೆ ₹ 32 ಕೋಟಿ ಮೌಲ್ಯದ ಭೂಮಿ ನೀಡಿದೆ. ಹೊರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ದಿ ಎಂಬೆಸಿ ಮಾನ್ಯತಾ ಸ್ಕೈವಾಕ್ ನಿರ್ಮಾಣಕ್ಕೆ ಸಂಸ್ಥೆ ₹7 ಕೋಟಿ ಅನುದಾನ ಒದಗಿಸುತ್ತಿದೆ ಎಂದು ಕಂಪನಿ ಹೇಳಿದೆ.

ಮೆಟ್ರೊ ನಿಗಮದ ಜತೆ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಎಂಬೆಸಿ ಸಮೂಹದ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಜಿತು ವಿರ್ವಾನಿ,‘ ಎಂಬೆಸಿ ಟೆಕ್ ವಿಲೇಜ್‍ನ ಮೆಟ್ರೊ ನಿಲ್ದಾಣ ನಮಗೆ ಅತ್ಯಂತ ಉಪಯುಕ್ತವಾಗಿ ಲಭಿಸಿದೆ. ಇಲ್ಲಿ ಸರಿಸುಮಾರು 1 ಲಕ್ಷ ಕಾರ್ಪೋರೇಟ್ ಉದ್ಯೋಗಿಗಳಿದ್ದಾರೆ, 43 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರಮುಖ ಮೂಲ ಸೌಕರ್ಯ ಕಾಮಗಾರಿಗಳಲ್ಲಿ ನಾವು, ಮೆಟ್ರೊ ನಿಗಮದ ಜತೆ ಕೈಜೋಡಿಸಿದ್ದಕ್ಕೆ ಹೆಮ್ಮೆ ಇದೆ’ ಎಂದರು.

ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಮಾತನಾಡಿ, ‘ಎಂಬೆಸಿ ಸಮೂಹವು ಈ ಸೇವಾಕಾರ್ಯಕ್ಕೆ ಸಹಕರಿಸಿದ್ದು ಬೆಂಗಳೂರಿಗರ ಪಾಲಿಗೆ ಹೆಮ್ಮೆಯ ಸಂಗತಿ. ಸಮೂಹ ಸಾರಿಗೆ ಒದಗಿಸುವ ನಮ್ಮ ಆಶಯಕ್ಕೆ ಪೂರಕ ನೆರವು ನೀಡಿದೆ. ನಾವು ಈಗ ಎರಡು ಪ್ರಮುಖ ಒಪ್ಪಂದಕ್ಕೆ ಸಹಿ ಮಾಡಿದ್ದೇವೆ. ಹೊರ ವರ್ತುಲ ರಸ್ತೆಯ ನಿರ್ಮಾಣ ಕಾಮಗಾರಿಗೆ ಆರ್ಥಿಕ ಸಹಕಾರ ನೀಡುವ ಹಾಗೂ ಹೊಸ ಮೇಲುರಸ್ತೆ ನಿರ್ಮಿಸುವ ಕಾಮಗಾರಿಗೆ ಸಹಕಾರ ಹಾಗೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಒಪ್ಪಂದ ಆಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry