ಕೆರೆಗಳಿಗೆ ಎಸ್‌ಟಿಪಿ ಅಳವಡಿಕೆ: ಪರಮೇಶ್ವರ

7

ಕೆರೆಗಳಿಗೆ ಎಸ್‌ಟಿಪಿ ಅಳವಡಿಕೆ: ಪರಮೇಶ್ವರ

Published:
Updated:
ಕೆರೆಗಳಿಗೆ ಎಸ್‌ಟಿಪಿ ಅಳವಡಿಕೆ: ಪರಮೇಶ್ವರ

ಬೆಂಗಳೂರು: ಕೆರೆಗಳ ಒಳಹರಿವು ಪ್ರದೇಶದಲ್ಲಿ ‘ತ್ಯಾಜ್ಯ ನೀರು ಸಂಸ್ಕರಣಾ ಘಟಕ’ (ಎಸ್‌ಟಿಪಿ) ಅಳವಡಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಕಗ್ಗದಾಸಪುರ ಹಾಗೂ ಬೆಳ್ಳಂದೂರು ಕೆರೆ ಪ್ರದೇಶ ಪರಿಶೀಲಿಸಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ. ಘಟಕದ ಮೂಲಕ ಕೊಳಚೆ ನೀರನ್ನು ಶುದ್ಧೀಕರಿಸಿ ಬಳಸುವ ಕೆಲಸ ಆಗಬೇಕಿದೆ’ ಎಂದರು.

‘ಬೆಂಗಳೂರು ಬೆಳೆದಂತೆ ಕೆರೆಗಳ ಅಭಿವೃದ್ಧಿ ಕಡೆಗಣಿಸಿದ್ದು ದೌರ್ಭಾಗ್ಯ. ಕಲುಷಿತ ನೀರು ಬಿಡುವ ಮೂಲಕ ಹಾಳು ಮಾಡಿದ್ದೇವೆ.‌ ಮುಂದೆ ಈ ರೀತಿ ಆಗದಂತೆ ತಡೆಯುವ ಜವಾಬ್ದಾರಿ ಇದೆ. ಮುಂದಿನ ಮೂರು ತಿಂಗಳೊಳಗೆ ಒಂದು ಪರಿವರ್ತನೆ ಹಾದಿಗೆ ರೂಪ ಕೊಡುವ ವಿಶ್ವಾಸವಿದೆ’ ಎಂದರು.

‘ಬೆಂಗಳೂರಲ್ಲಿ ನಮ್ಮ ಪೂರ್ವಜರು ಸಾಕಷ್ಟು ಕೆರೆ ನಿರ್ಮಿಸಿದ್ದರು. 300-350 ಕೆರೆಗಳಿದ್ದವು. ಕ್ರಮೇಣ ವಿವಿಧ ಕಾರಣಕ್ಕೆ ಕೆರೆಗಳನ್ನು ಕಳೆದುಕೊಂಡಿದ್ದೇವೆ. ಈಗ ಉಳಿದಿರುವ ಕೆರೆಗಳ ರಕ್ಷಣೆಗೆ ಆದ್ಯತೆ ನೀಡಬೇಕಿದೆ’ ಎಂದರು. ‘ಬೆಳ್ಳಂದೂರು ಕೆರೆಗೆ ಕಲುಷಿತ ನೀರು ಬಿಡುತ್ತಿರುವ ಅನೇಕ ಕಂಪೆನಿಗಳಿಗೆ ನೋಟಿಸ್ ನೀಡಿದ್ದು ಗಮನಕ್ಕೆ ಬಂದಿತ್ತು. ಈಗ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡುವುದಕ್ಕಾಗಿಯೇ ಖುದ್ದು ಸ್ಥಳ ಪರಿಶೀಲಿಸಲಾಗಿದೆ. ಮುಂದೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ವಾರದೊಳಗೆ ರಸ್ತೆ ಗುಂಡಿಗೆ ಮುಕ್ತಿ’

ಬೆಂಗಳೂರು: ನಗರದ ರಸ್ತೆಗುಂಡಿಗಳನ್ನು ವಾರದೊಳಗೆ ಮುಚ್ಚಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.

ಬಿಬಿಎಂಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ 6 ಸಾವಿರ ರಸ್ತೆ ಗುಂಡಿಗಳಿವೆ. ಅವುಗಳ ಪೈಕಿ 1 ಚದರ ಮೀಟರ್‌ ಅಳತೆಯ 1,200 ಗುಂಡಿಗಳಿವೆ. ಪಾಲಿಕೆಯಲ್ಲಿ ಗುಂಡಿ ಮುಚ್ಚಿಸಲು ಪೈಥಾನ್‌ ಎಂಬ ಎರಡು ಯಂತ್ರಗಳಿವೆ. ಅವುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ’ ಎಂದರು.

‘ಮಳೆಗಾಲದಲ್ಲಿ ಅಲ್ಲಲ್ಲಿ ನಿಲ್ಲುವ ನೀರು ತೆಗೆಯಲು ಬಿಬಿಎಂಪಿಯನ್ನು 8 ವಲಯಗಳಾಗಿ ವಿಂಗಡಿಸಿ, ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೂಡಲೇ ಕೆಲಸ ಆರಂಭಿಸಬೇಕು ಏನಾದರೂ ತೊಂದರೆಯಾದರೆ ಆಯಾ ವಲಯದ ಉಸ್ತುವಾರಿ ವಹಿಸಿಕೊಂಡವರೇ ಹೊಣೆ’ ಎಂದು ಎಚ್ಚರಿಸಿದರು.

‘ರಸ್ತೆ ಕಾಮಗಾರಿಯನ್ನು ಕಳಪೆಯಾಗಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಡೀ ಬೆಂಗಳೂರಿನ ನಕ್ಷೆ ಸಿದ್ಧಪಡಿಸಲಾಗುವುದು. ರಾಜಕಾಲುವೆ ಒತ್ತುವರಿ ಪರಿಶೀಲಿಸುತ್ತೇವೆ. ಯಾರೇ ಒತ್ತುವರಿ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ತೆರವು ಮಾಡುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry