ನಮ್ಮ ಕುಟುಂಬದಲ್ಲಿ ಒಡಕಿಲ್ಲ

7
ಸೋತ ಅಭ್ಯರ್ಥಿಗಳು, ಶಾಸಕರೊಂದಿಗೆ ಸಭೆ

ನಮ್ಮ ಕುಟುಂಬದಲ್ಲಿ ಒಡಕಿಲ್ಲ

Published:
Updated:
ನಮ್ಮ ಕುಟುಂಬದಲ್ಲಿ ಒಡಕಿಲ್ಲ

ಬೆಂಗಳೂರು: ‘ನಮ್ಮ ಕುಟುಂಬದಲ್ಲಿ ಕಲಹ ಇಲ್ಲ. ಎಲ್ಲರೂ ಅನ್ಯೋನ್ಯವಾಗಿದ್ದಾರೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಮತ್ತು ಶಾಸಕರೊಂದಿಗೆ ಗುರುವಾರ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕುಟುಂಬದಲ್ಲಿ ಒಡಕಿದೆ ಎಂಬ ಧಾಟಿಯಲ್ಲಿ ದಯವಿಟ್ಟು ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿದರು.

‘ನಾನು ಬದುಕಿರುವವರೆಗೆ ಮತ್ತು ಆ ಬಳಿಕವೂ ಕುಟುಂಬ ಒಗ್ಗಟ್ಟಿನಲ್ಲಿಯೇ ಇರುತ್ತದೆ. ಯಾವುದೇ ಸಂಶಯ ಬೇಡ. ರೇವಣ್ಣ, ಭವಾನಿ ಬೇರೆಯೇ ಹೋಗಿ ಬಿಟ್ಟರು ಎಂಬ ರೀತಿಯಲ್ಲಿ ವರದಿಗಳು ಬರುತ್ತಿವೆ. ಇಂತಹದ್ದು ನೋಡಿ ನೋಡಿ ಸಾಕಾಗಿದೆ. ಮನಸ್ಸಿಗೆ ನೋವೂ ಆಗಿದೆ’ ಎಂದು ದೇವೇಗೌಡರು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಇದರಿಂದ ನಿರಾಸೆಯಾಗಿದೆ. ಬಿಎಸ್‌ಪಿ ಜತೆ ಸೇರಿದರೂ 38 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಚುನಾವಣಾ ಪ್ರಚಾರಕ್ಕೆ ಹೋದಾಗ ಹೆಚ್ಚು ಜನ ಸೇರುತ್ತಿದ್ದರು. ಆದರೆ, ಅದು ಮತವಾಗಿ ಪರಿವರ್ತನೆ ಆಗಲಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಈಗಿನಿಂದಲೇ ಪ್ರಯತ್ನ ನಡೆಸಬೇಕಾಗಿದೆ ಎಂದು ಅವರು ತಿಳಿಸಿದರು.

ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಕಂಗೆಡಬೇಕಾಗಿಲ್ಲ. ಪಕ್ಷವನ್ನು ಬಲವರ್ಧನೆ ಮಾಡುವ ಕೆಲಸದಲ್ಲಿ ತೊಡಗಬೇಕು. ಈಗ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ತಮ್ಮ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಹೊಸ ಯೋಜನೆಗಳ ಜತೆಗೆ ಹಿಂದಿನ ಸರ್ಕಾರದ ಯೋಜನೆಗಳನ್ನೂ ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಸಚಿವರಾದ ಡಿ.ಸಿ.ತಮ್ಮಣ್ಣ, ಶ್ರೀನಿವಾಸ್‌, ಸಿ.ಎಸ್‌.ಪುಟ್ಟರಾಜು, ಸಾ.ರಾ.ಮಹೇಶ್‌ ಮುಂತಾದವರು ಭಾಗವಹಿಸಿದ್ದರು.

ಈ ಹಿಂದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ನಡೆದಿರುವ ಘರ್ಷಣೆಗಳನ್ನು ಮರೆತು ಸರಿದೂಗಿಸಿಕೊಂಡು ಹೋಗಬೇಕು ಎಂದು ದೇವೇಗೌಡ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry