ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಲಕ್ಷ ಸಸಿ ನೆಡುವ ಭರವಸೆ ಸುಳ್ಳೇ?

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಸಸಿಗಳನ್ನು ನೆಡುವುದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಬಜೆಟ್‌ನಲ್ಲಿ ಮಾಡಿರುವ ಘೋಷಣೆಗೂ ವಾಸ್ತವದಲ್ಲಿ ಸಸಿ ನೆಡಲು ನಡೆಸಿರುವ ಸಿದ್ಧತೆಗೂ ಅಜಗಜಾಂತರ. ಬಜೆಟ್‌ನಲ್ಲಿ ಆರು ಲಕ್ಷ ಸಸಿ ನೆಡುವುದಾಗಿ ಘೋಷಿಸಿದ್ದರೂ ವಾಸ್ತವದಲ್ಲಿ ಸುಮಾರು ಎರಡು ಲಕ್ಷ ಸಸಿ ನೆಡಲು ಹಣ ಕಾಯ್ದಿರಿಸಿದೆ!

ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ಕಡಿಯಲಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ಇದರಿಂದಾಗಿಯೇ ರಸ್ತೆ ವಿಸ್ತರಣೆಗೆ ಮರಗಳನ್ನು ತೆರವುಗೊಳಿಸುವುದಕ್ಕೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಕಾರಣದಿಂದ ಲಕ್ಷಗಟ್ಟಲೆ ಸಸಿ ನೆಡುವುದಾಗಿ ಪಾಲಿಕೆ ಘೋಷಿಸಿದೆ. ಆದರೆ, ಘೋಷಣೆಯನ್ನು ಕಾರ್ಯರೂಪಕ್ಕೆ ತರುವ ಸಿದ್ಧತೆಯೇ ನಡೆದಿಲ್ಲ ಎಂಬುದನ್ನು ಸಂಬಂಧಪಟ್ಟದ ವಿಭಾಗ ಗಳೇ ಹೇಳುತ್ತಿವೆ.

ಆಗಸ್ಟ್‌ನಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಅವರು, 2011-12ನೇ ಸಾಲಿನಲ್ಲಿ ಆರು ಲಕ್ಷ ಸಸಿ ನೆಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ವೃಕ್ಷ ಉದ್ಯಾನ ನಿರ್ಮಾಣ ಜವಾಬ್ದಾರಿಯನ್ನು ಅರಣ್ಯ ವಿಭಾಗಕ್ಕೆ ಬದಲಾಗಿ ತೋಟಗಾರಿಕೆ ವಿಭಾಗಕ್ಕೆ ವಹಿಸಲಾಗಿದೆ. ಈ ವಿಭಾಗಕ್ಕೆ ನೀಡಲಾಗಿರುವ ಅನುದಾನದಲ್ಲಿ ಒಂದು ಲಕ್ಷ ಸಸಿಗಳನ್ನಷ್ಟೇ ನೆಡಬಹುದು ಎಂದು ಮೂಲಗಳು ದೃಢಪಡಿಸಿವೆ.

ನಗರ ಅರಣ್ಯೀಕರಣ ಮತ್ತು ಪರಿಸರ ನಿರ್ವಹಣೆಗೆ ಬಜೆಟ್‌ನಲ್ಲಿ 41 ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಲಾಗಿದೆ. ಇದರಲ್ಲಿ ಬಾಕಿ ಇರುವ ಬಿಲ್ ಪಾವತಿಗೆ 8 ಕೋಟಿ ರೂಪಾಯಿ, ಮುಂದುವರಿದ ಕಾಮಗಾರಿಗಳಿಗೆ ರೂ 3 ಕೋಟಿ, ಚಾಲ್ತಿ ಇರುವ ಕಾಮಗಾರಿಗಳಿಗೆ ರೂ 8 ಕೋಟಿ ಹಾಗೂ ಕಳೆದ ವರ್ಷ ಬೆಳೆಸಿದ ಗಿಡಗಳ ನಿರ್ವಹಣೆಗೆ 2.50 ಕೋಟಿ ರೂಪಾಯಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಹಣ ಒದಗಿಸಲಾಗಿದೆ.


ಒಂದು ಲಕ್ಷ ಗುರಿ: ಅಲ್ಲದೇ ಪ್ರಸಕ್ತ ವರ್ಷದಲ್ಲಿ ಅರಣ್ಯ ವಿಭಾಗದ ವತಿಯಿಂದ ಒಂದು ಲಕ್ಷ ಸಸಿಗಳನ್ನು ನೆಡುವಂತೆ ಅಧಿಕಾರಿಗಳಿಗೆ ಗುರಿ ನೀಡಲಾಗಿದೆ. ಏಕೆಂದರೆ ಈ ಬಾರಿ ಸಸಿಗಳಿಗೆ ಲೋಹದ ರಕ್ಷಕಗಳನ್ನು (ಮೆಟಲ್ ಟ್ರೀ ಗಾರ್ಡ್) ಅಳವಡಿಸಲು ನಿರ್ಧರಿಸಲಾಗಿದೆ. ಒಂದು ಲೋಹ ರಕ್ಷಕದ ಬೆಲೆ 1,500 ರೂಪಾಯಿ. ಹಾಗಾಗಿ ಒಂದು ಲಕ್ಷ ಲೋಹ ರಕ್ಷಕಗಳಿಗೆ ಸುಮಾರು 15 ಕೋಟಿ ರೂಪಾಯಿ ತಗಲುತ್ತದೆ.

ಇನ್ನು ಗುಂಡಿ ತೋಡುವುದು, ಗೊಬ್ಬರ ಪೂರೈಕೆ ಹಾಗೂ ಸಸಿ ನೆಡಲು ಸುಮಾರು 2 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹಾಗಾಗಿ, 2011-12ನೇ ಸಾಲಿನಲ್ಲಿ ಅರಣ್ಯ ವಿಭಾಗದ ಅಧಿಕಾರಿಗಳಿಗೆ ನಗರ ವ್ಯಾಪ್ತಿಯಲ್ಲಿ ಒಂದು ಲಕ್ಷ ಸಸಿಗಳನ್ನು ನೆಡುವ ಗುರಿ ನೀಡಲಾಗಿದೆ. ಅದಕ್ಕೆ ವೆಚ್ಚವಾಗುವಷ್ಟು ಅನುದಾನವನ್ನಷ್ಟೇ ಕಾಯ್ದಿರಿಸಲಾಗಿದೆ.

`ಬಜೆಟ್‌ನಲ್ಲಿ ನೀಡಿರುವ ಅನುದಾನ ದಲ್ಲಿ ಗರಿಷ್ಠ 2 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಬಹುದು. ಉಳಿದಂತೆ ಒಂದಷ್ಟು ಸಸಿಗಳನ್ನು ಸಂಘ- ಸಂಸ್ಥೆಗಳಿಗೆ ವಿತರಿಸಬಹುದು. ತೋಟಗಾರಿಕೆ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆದ ಬಳಿಕವಷ್ಟೇ ತೋಟಗಾರಿಕೆ ಮತ್ತು ಅರಣ್ಯ ವಿಭಾಗದ ವತಿಯಿಂದ ತಲಾ ಒಂದು ಲಕ್ಷ ಸಸಿ ನೆಡುವಂತೆ ಸೂಚನೆ ನೀಡಲಾಗಿದೆ. ಆರು ಲಕ್ಷ ಸಸಿಗಳನ್ನು ನೆಡುವುದು ಕಷ್ಟಸಾಧ್ಯವಾದ ಗುರಿ~ ಎಂದು ಪಾಲಿಕೆಯ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

2010-11ನೇ ಸಾಲಿನ ಬಜೆಟ್‌ನಲ್ಲೂ ನಗರದಲ್ಲಿ 5 ಲಕ್ಷ ಸಸಿ ನೆಡುವುದಾಗಿ ಪ್ರಕಟಿಸಲಾಗಿತ್ತು. ಆದರೆ ನೆಟ್ಟಿದ್ದು ಮಾತ್ರ ಮೂರು ಲಕ್ಷ ಸಸಿ ಎಂಬುದನ್ನು ಸ್ಮರಿಸಬಹುದು.

ಹೇಳಿದ್ದು ಲಕ್ಷ; ನೆಟ್ಟಿದ್ದು 85,000:
ನಗರದಲ್ಲಿ ಹಸಿರು ವಲಯ ವೃದ್ಧಿಸುವ ಉದ್ದೇಶದಿಂದ ಮಳೆಗಾಲ ದಲ್ಲೇ ಸಸಿಗಳನ್ನು ನೆಡುವಂತೆ ಆಯುಕ್ತ ಸಿದ್ದಯ್ಯ ಸೂಚನೆ ನೀಡಿದ್ದರು. ವಿಶ್ವ ಪರಿಸರ ದಿನದಂದು (ಜೂನ್ 5) ಒಂದು ಲಕ್ಷ ಸಸಿಗಳನ್ನು ನೆಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಆಯುಕ್ತರ ಸೂಚನೆಗೆ ಅಧಿಕಾರಿಗಳು ಹೆಚ್ಚು ಬೆಲೆ ನೀಡಿದಂತೆ ಕಾಣುತ್ತಿಲ್ಲ. ಏಕೆಂದರೆ ಈವರೆಗೆ ನೆಟ್ಟಿರುವುದು ಸುಮಾರು 85,000 ಸಸಿಗಳು ಮಾತ್ರ.

ತೋಟಗಾರಿಕೆ ವಿಭಾಗದ ಉತ್ತರ ವಲಯ ವ್ಯಾಪ್ತಿಯ ಪೂರ್ವ, ಯಲಹಂಕ, ದಾಸರಹಳ್ಳಿ, ಮಹದೇವ ಪುರ ವಲಯಗಳಲ್ಲಿ 42,000 ಸಸಿಗಳನ್ನು ನಡೆಸಲಾಗಿದೆ. ದಕ್ಷಿಣ ವಲಯ ವ್ಯಾಪ್ತಿಗೆ ಸೇರಿದ ಪಶ್ಚಿಮ, ದಕ್ಷಿಣ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ಸುಮಾರು 43,000 ಸಸಿಗಳನ್ನು ನೆಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕಾರ್ಯಕ್ಕೆ ಪಾಲಿಕೆ ವತಿಯಿಂದ ಬಿಡಿಗಾಸು ಖರ್ಚು ಮಾಡಬಾರದು. ಪಾಲಿಕೆಯ ನರ್ಸರಿಗಳಿಂದಲೇ ಸಸಿ ಪಡೆದು, ಎಂಜಿನಿಯರಿಂಗ್ ವಿಭಾಗದವರು ಗುತ್ತಿಗೆದಾರರ ಸಹಕಾರದಲ್ಲಿ ಸಸಿ ನೆಡಬೇಕು ಎಂದು ಸೂಚನೆ ನೀಡಲಾಗಿತ್ತು.

ಹಾಗಾಗಿ ರಸ್ತೆಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಒಂದಷ್ಟು ಸಸಿಗಳನ್ನು ನೆಟ್ಟು ಅಧಿಕಾರಿಗಳು ಸುಮ್ಮನಾದರು. ಈ ಸಸಿಗಳಿಗೆ ರಕ್ಷಕಗಳನ್ನು ಅಳವಡಿಸಲಾಗಿದೆಯೇ, ಅವುಗಳ ಪೋಷಣೆ ಜವಾಬ್ದಾರಿ ಯಾರಿಗೆ ಸೇರಿದ್ದು ಎಂಬ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲ. ಹಾಗೆಯೇ ನೆಡಲಾದ ಸಸಿಗಳ ಗತಿ ಏನಾಗಿದೆ ಎಂಬ ಪ್ರಶ್ನೆಗೆ ಪಾಲಿಕೆಯ ಅಧಿಕಾರಿಗಳ ಬಳಿ ಉತ್ತರ ದೊರೆಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT