ಜಾಹೀರಾತು ಕೊಟ್ಟು ₹ 60 ಸಾವಿರ ಸುಲಿಗೆ

7

ಜಾಹೀರಾತು ಕೊಟ್ಟು ₹ 60 ಸಾವಿರ ಸುಲಿಗೆ

Published:
Updated:

ಬೆಂಗಳೂರು: ಉದ್ಯೋಗದ ಆಮಿಷವೊಡ್ಡಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಮಹಿಳೆಯೊಬ್ಬರಿಂದ ₹ 60 ಸಾವಿರ ಪಡೆದು ವಂಚಿಸಿರುವ ಆರೋಪದಡಿ ಸುನೀಲ್ ಶರ್ಮಾ ಹಾಗೂ ಮನೋಜ್ ಎಂಬುವರ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ.

‘ನಿಶಾ ಎಂಟರ್‌ಪ್ರೈಸಸ್’ ಕಂಪನಿ ಹೆಸರಿನಲ್ಲಿ ಇದೇ ಏ.16ರಂದು ಇಂಗ್ಲಿಷ್ ದಿನಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿದ್ದ ಅರೋಪಿಗಳು, ‘ಕೆಲಸ ಖಾಲಿ ಇದೆ. ಆಸಕ್ತರು ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕು. ತಿಂಗಳಿಗೆ ₹ 15 ಸಾವಿರದಿಂದ ₹ 30 ಸಾವಿರ ವೇತನ ನೀಡಲಾಗುವುದು. ಮನೆಯಲ್ಲೇ ಕೂತು ಲ್ಯಾಪ್‌ಟಾಪ್‌ನಲ್ಲೇ ಕೆಲಸ ನಿರ್ವಹಿಸಬಹುದು’ ಎಂದು ವಿವರಿಸಿದ್ದರು.

ಉದ್ಯೋಗದ ಹುಡುಕಾಟದಲ್ಲಿದ್ದ ಸಾದರಮಂಗಲ ನಿವಾಸಿ ವಿ.ಸರಸ್ವತಿ, ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರು. ಆಗ ಆರೋಪಿಗಳು, ನೋಂದಣಿ ಶುಲ್ಕವೆಂದು ₹ 1,150ನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದರು.

‘ಕೆಲ ದಿನಗಳ ನಂತರ ಪುನಃ ಕರೆ ಮಾಡಿದ ಸುನೀಲ್ ಶರ್ಮಾ ಎಂಬಾತ, ‘ಲ್ಯಾಪ್‌ಟಾಪ್‌ ಹಾಗೂ ವಿಮಾ ಶುಲ್ಕವೆಂದು ₹ 59,200 ‍ಕಟ್ಟಬೇಕು. ಎರಡು ತಿಂಗಳ ಬಳಿಕ ಆ ಹಣ ಮರಳಿಸುತ್ತೇವೆ’ ಎಂದಿದ್ದ. ಹೀಗಾಗಿ, ಪತ್ನಿ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿದ್ದಳು’ ಎಂದು ಸರಸ್ವತಿ ಪತಿ ಸ್ವರೂಪ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

‘ತಿಂಗಳು ಕಳೆದರೂ ಕಂಪನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಪತ್ನಿಯೇ ಆ ಸಂಖ್ಯೆಗೆ ಸಂಪರ್ಕಿಸಿದಳು. ಕರೆ ಸ್ವೀಕರಿಸಿದ ವ್ಯಕ್ತಿ, ‘ನನ್ನ ಹೆಸರು ಮನೋಜ್. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ. ನೀವು ₹ 41,000ವನ್ನು ನಮ್ಮ ಖಾತೆಗೆ ಜಮೆ ಮಾಡಿ. ₹ 1 ಲಕ್ಷವನ್ನು ಒಟ್ಟಿಗೇ ಮರಳಿಸುತ್ತೇವೆ’ ಎಂದು ಹೇಳಿದ್ದಾನೆ. ಹೀಗಾಗಿ, ಆರೋಪಿಗಳನ್ನು ಪತ್ತೆ ಮಾಡಿ ನಮ್ಮ ಹಣ ವಾಪಸ್ ಕೊಡಿಸಿ’ ಎಂದು ಸ್ವರೂಪ್ ಮನವಿ ಮಾಡಿದ್ದಾರೆ.

‘ನಿಶಾ ಎಂಟರ್‌ಪ್ರೈಸಸ್’ ಎಂಬುದು ದೆಹಲಿಯ ಕಂಪನಿ. ಆರೋಪಿಗಳು ಅಲ್ಲಿನ ನೌಕರರೋ, ಅಲ್ಲವೋ ಎಂಬುದು ಗೊತ್ತಾಗಿಲ್ಲ. ಸಾರ್ವಜನಿಕರಿಗೆ ವಂಚಿಸುವ ಉದ್ದೇಶದಿಂದಲೇ ದಿನಪತ್ರಿಕೆಗಳಿಗೆ ಜಾಹೀರಾತು ಕೊಟ್ಟಂತಿದೆ. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಆರೋಪಿಗಳ ಶೋಧ ನಡೆಸುತ್ತಿದ್ದೇವೆ’ ಎಂದು ಕಾಡುಗೋಡಿ ಪೊಲೀಸರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !