ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ | ದೇಶದ ಅತಿ ದೊಡ್ಡ ಸುರಂಗ ಮಾರ್ಗ ಕಾಮಗಾರಿ ಅಂತಿಮ ಹಂತಕ್ಕೆ

ಟಿಬಿಎಂ ಚಮತ್ಕಾರ; ಶೇ 72ರಷ್ಟು ಕಾಮಗಾರಿ ಪೂರ್ಣ l ಎಲಿವೇಟೆಡ್‌ ಮಾರ್ಗ ನಿರ್ಮಾಣಕ್ಕಿಂತ ನಾಲ್ಕು ಪಟ್ಟ
Last Updated 28 ಫೆಬ್ರುವರಿ 2023, 6:28 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಲಿರಲಿ, ಮಣ್ಣಿರಲಿ, ದೊಡ್ಡ ಬಂಡೆಗಳೇ ಎದುರಾಗಲಿ... ಸೀಳಿ ಮುನ್ನುಗ್ಗುವ ಯಂತ್ರಗಳು, ದೇಶದಲ್ಲೇ ಅತಿ ದೊಡ್ಡ ಮೆಟ್ರೊ ರೈಲು ಸುರಂಗ ಮಾರ್ಗವನ್ನು ಕೊರೆಯುತ್ತಿವೆ. ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ 13.90 ಕಿಲೋ ಮೀಟರ್‌ ಸುರಂಗವನ್ನು ಕೊರೆಯುತ್ತಿರುವ ಟಿಬಿಎಂಗಳು (ಟನಲ್ ಬೋರಿಂಗ್ ಮಷಿನ್‌) ತಮ್ಮ ಕೆಲಸವನ್ನು ಬಹುತೇಕ ಅಂತಿಮ ಹಂತಕ್ಕೆ ತಂದಿವೆ.

ನಗರದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಮೇಲ್ಸೇತುವೆಗಳು, ಎತ್ತರಿಸಿದ ಮಾರ್ಗಗಳು ನಗರದ ಸೌಂದರ್ಯವನ್ನು ಹಾನಿ ಮಾಡುತ್ತಿರುವುದರ ನಡುವೆಯೇ, ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ದೇಶದಲ್ಲೇ ಅತಿ ಉದ್ದವಾದ ಸುರಂಗ ಮಾರ್ಗ ನಿರ್ಮಿಸುತ್ತಿದೆ.

ಮೆಟ್ರೊ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ದೇಶದ ಹಲವು ಮಹಾನಗರಗಳು ದುಬಾರಿ ವೆಚ್ಚದ ಕಾರಣಕ್ಕೆ ಸುರಂಗ ಮಾರ್ಗಕ್ಕೆ ಅಷ್ಟೇನೂ ಆಸಕ್ತಿ ವಹಿಸುತ್ತಿಲ್ಲ. ಆದರೆ, ಬಿಎಂಆರ್‌ಸಿಎಲ್‌ ಇಂತಹ ಸಾಹಸಕ್ಕೆ ಕೈ ಹಾಕಿ ಈಗ ಯಶಸ್ಸಿನ ಹಾದಿಯಲ್ಲಿದೆ.

ಬೆಂಗಳೂರು ನಗರ ಎಂದರೆ ಸುರಂಗ ನಿರ್ಮಾಣಕ್ಕೆ ಅತ್ಯಂತ ಕಠಿಣವಾದ ಭೂಪ್ರದೇಶ. ಬೇರೆಲ್ಲಾ ರಾಜ್ಯ ಮತ್ತು ದೇಶಗಳ ಸುರಂಗ ಮಾರ್ಗಗಳಿಗೆ ಹೋಲಿಸಿದರೆ ಜಟಿಲವಾದ ಹಾದಿಯನ್ನು ಸುರಂಗ ಕೊರೆಯುವ ಯಂತ್ರಗಳು(ಟಿಬಿಎಂ) ಎದುರಿಸಿವೆ.

ಎತ್ತರಿಸಿದ (ಎಲಿವೇಟೆಡ್‌) ನಿಲ್ದಾಣ ಅಥವಾ ಮಾರ್ಗಗಳನ್ನು ನಿರ್ಮಿಸುವುದಕ್ಕೆ ತಗಲುವ ವೆಚ್ಚಕ್ಕೆ ಹೋಲಿಸಿದರೆ ಸುರಂಗ ಮಾರ್ಗ ನಿರ್ಮಾಣಕ್ಕೆ ನಾಲ್ಕು ಪಟ್ಟು ಹೆಚ್ಚು ಮೊತ್ತ ಬೇಕಾಗುತ್ತದೆ. ಆದರೆ, ದೀರ್ಘ ಕಾಲದ ಅನುಕೂಲಗಳನ್ನು ಪರಿಗಣಿಸಿದರೆ ಎತ್ತರಿಸಿದ ಮಾರ್ಗಕ್ಕಿಂತ ಸುರಂಗ ಮಾರ್ಗಗಳಿಂದಲೇ ಜನರಿಗೆ ಲಾಭ ಹೆಚ್ಚು.

ವಿಶಾಲ ರಸ್ತೆಯ ಒಂದು ಪಥದಲ್ಲಿ ಎತ್ತರಿಸಿದ ಮಾರ್ಗ ನಿರ್ಮಾಣವಾಗುತ್ತಿದ್ದರೂ, ಅಕ್ಕ–ಪಕ್ಕದ ಪಥಗಳಲ್ಲಿ ಸಂಚಾರ ನಿರ್ಬಂಧಿಸಲಾಗುತ್ತದೆ. ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತದೆ. ಜನನಿಬಿಡ ಸ್ಥಳಗಳಲ್ಲಿ ನಡೆಯುವ ಈ ಕಾಮಗಾರಿ ನಾಲ್ಕೈದು ವರ್ಷಗಳ ಬಳಿಕವೂ ಪೂರ್ಣಗೊಳ್ಳುವುದಿಲ್ಲ. ಇದಕ್ಕೆ ಹೋಲಿಸಿದರೆ ಸುರಂಗ ಮಾರ್ಗದ ನಿರ್ಮಾಣ ಕಾರ್ಯ (ನೆಲದಡಿಯ ನಿಲ್ದಾಣಗಳನ್ನು ಹೊರತಾಗಿ) ಸದ್ದಿಲ್ಲದೇ ನಡೆಯುತ್ತದೆ.

‘ನಗರದ ಸೌಂದರ್ಯವನ್ನು, ಮೂಲಸ್ವರೂಪವನ್ನು ಅಂತೆಯೇ ಉಳಿಸಿಕೊಂಡು ರಾಜಧಾನಿಯ ಕ್ಷಿಪ್ರ ಸಾರಿಗೆ ವ್ಯವಸ್ಥೆಗೆ ಈ ಮೆಟ್ರೊ ಸುರಂಗ ಹೊಸ ದಿಕ್ಕು ತೋರಲಿದೆ’ ಎನ್ನುತ್ತಾರೆ ಬಿಎಂಆರ್‌ಸಿಎಲ್ ಅಧಿಕಾರಿಗಳು.

ಗೊಟ್ಟಿಗೆರೆ–ನಾಗವಾರದಲ್ಲಿ ಡೇರಿ ವೃತ್ತದಿಂದ ನಾಗವಾರ ತನಕ ಮೆಟ್ರೊ ಸುರಂಗ ಮಾರ್ಗ ಬಹುತೇಕ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ(ಸಿಬಿಡಿ) ಸಾಗುತ್ತದೆ. ನೆಲದಡಿಯಲ್ಲೇ ಕಾಮಗಾರಿ ನಡೆಯುತ್ತಿರುವುದರಿಂದ ಜನ ಜೀವನದ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ.

ಸುರಂಗದ ಕಾಮಗಾರಿ ಶೇ 72ರಷ್ಟು ಪೂರ್ಣಗೊಂಡಿದ್ದು, ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ. ಗೊಟ್ಟಿಗೆರೆಯಿಂದ(ಕಾಳೇನ ಅಗ್ರಹಾರ) ನಾಗವಾರ ತನಕದ ಒಟ್ಟಾರೆ 21.30 ಕಿಲೋ ಮೀಟರ್ ಉದ್ದದ ಮೆಟ್ರೊ ಮಾರ್ಗ 2025ರ ಅಂತ್ಯಕ್ಕೆ ಪ್ರಯಾಣಿಕರಿಗೆ ಸಮರ್ಪಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.

ಟಿಬಿಎಂ ಕಾರ್ಯವೈಖರಿ ಹೀಗೆ...
ಟಿಬಿಎಂಗಳು 6.8 ಮೀಟರ್‌ನಷ್ಟು ಬಾಹ್ಯವ್ಯಾಸ ಮತ್ತು 5.8 ಮೀಟರ್‌ನಷ್ಟು ಆಂತರಿಕ ವ್ಯಾಸ ಹೊಂದಿದ್ದು, ದೈತ್ಯ ಚಕ್ರದಂತೆ ಕಾಣಿಸುತ್ತವೆ.

ಅವು ತಿರುಗುತ್ತಿದ್ದರೆ, ಒತ್ತಡ ಸೃಷ್ಟಿಯಾಗಿಸುತ್ತ ಯಂತ್ರ ಮುಂದಕ್ಕೆ ಸಾಗುತ್ತದೆ. ಮಣ್ಣು ಮತ್ತು ಬಂಡೆಗಳನ್ನು ಮುರಿದು ಯಂತ್ರಗಳು ನುಗ್ಗುತ್ತವೆ. ಸ್ಲರಿ ಪೈಪ್‌ಗಳಿಗೆ ಮುರಿದ ತುಂಡನ್ನು ತಳ್ಳುತ್ತವೆ.

ಈ ಟಿಬಿಎಂ ಹಿಂಬಾಲಿಸುವ ರೈಲಿನ ರೀತಿಯ ರಚನೆಯು ಯಂತ್ರದ ನರನಾಡಿ ಇದ್ದಂತೆ. ಇದರಲ್ಲಿ ಕಾರ್ಯಾಚರಣೆ ಕೊಠಡಿ, ನಿಯಂತ್ರಣ ಕೊಠಡಿ, ವಿದ್ಯುತ್ ಪರಿವರ್ತಕ ಮತ್ತು ಹೈ ವೋಲ್ಟೇಜ್ ವಿದ್ಯುತ್ ಹೊಂದಿರುವ ವ್ಯವಸ್ಥೆ ಇರುತ್ತದೆ. ಕಟ್ಟರ್ ವೇಗವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವ ಕಾರ್ಯ ಇಲ್ಲಿಂದಲೇ ನಡೆಯುತ್ತದೆ. ಮಣ್ಣಿನ ಪದರಗಳನ್ನು ಕತ್ತರಿಸಲು ಅನುಕೂಲಕರವಾಗಿದ್ದರೆ ಟಿಬಿಎಂ ಪ್ರತಿ ನಿಮಿಷಕ್ಕೆ 10–12 ಮಿಲಿ ಮೀಟರ್ ಚಲಿಸುತ್ತದೆ. ಬಂಡೆಗಳು ಎದುರಾದರೆ ಅದು ನಿಮಿಷಕ್ಕೆ 1ರಿಂದ 2 ಮಿಲಿ ಮೀಟರ್ ಮಾತ್ರ ಸಾಗಲು ಸಾಧ್ಯವಾಗುತ್ತದೆ. ಈ ಯಂತ್ರಗಳು ಸರಾಸರಿ ದಿನಕ್ಕೆ ನಾಲ್ಕು ಮೀಟರ್ ಕ್ರಮಿಸುತ್ತವೆ.

ದೈತ್ಯವಾದ ಈ ಯಂತ್ರ ಎಲ್ಲವನ್ನೂ ಕತ್ತರಿಸಿ ಮುನ್ನಗುತ್ತದೆ. ಆದರೂ, ಕೆಲವೊಮ್ಮೆ ಸಿಲುಕಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಒಮ್ಮೆ ಸಿಲುಕಿಕೊಂಡರೆ ಬಿಡಿಸಿ ಮತ್ತೆ ಕಾರ್ಯಾಚರಣೆಗೆ ಇಳಿಸಲು ಹಲವು ತಿಂಗಳುಗಳೇ ಬೇಕಾಗುತ್ತದೆ. ನಾಗವಾರ–ಗೊಟ್ಟಿಗೆರೆ ಮಾರ್ಗದಲ್ಲಿ ಲಕ್ಕಸಂದ್ರ ಬಳಿ ತ್ಯಾಜ್ಯದಲ್ಲಿ ಯಂತ್ರ ಸಿಲುಕಿಕೊಂಡಿತ್ತು.

ದಿನದ 24 ಗಂಟೆಯೂ ಟಿಬಿಎಂಗಳು ಕಾರ್ಯನಿರ್ವಹಿಸುತ್ತವೆ. ಇದನ್ನು ನಿರ್ವಹಿಸುವ ಸಿಬ್ಬಂದಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ.

ಹೆಸರೇ ಆಕರ್ಷಕ
ಸುರಂಗ ಕೊರೆಯುತ್ತಿರುವ ಟಿಬಿಎಂಗಳಿಗೆ ಆಕರ್ಷಕ ಹೆಸರುಗಳನ್ನು ಇಡಲಾಗಿದೆ.

ಅವನಿ(ಭೂಮಿ), ಲಾವಿ(ಸಿಂಹ), ಊರ್ಜಾ(ಶಕ್ತಿ), ವಿಂಧ್ಯಾ(ಪರ್ವತ), ರುದ್ರ(ಶಿವನ ಹೆಸರು), ವರದ(ಗಣಪತಿಯ ಹೆಸರು), ತುಂಗಾ(ನದಿ), ವಾಮಿಕಾ(ಪಾರ್ವತಿಯ ಹೆಸರು), ಭದ್ರಾ(ನದಿ).

ಶೇ 72ರಷ್ಟು ಕಾಮಗಾರಿ ಪೂರ್ಣ
ನಾಲ್ಕು ಪ್ಯಾಕೇಜ್‌ಗಳಲ್ಲಿ ಸುರಂಗ ಕಾಮಗಾರಿ ನಡೆಯುತ್ತಿದ್ದು, ಎರಡು ಪ್ಯಾಕೇಜ್‌ಗಳ ಕಾಮಗಾರಿ ಪೂರ್ಣಗೊಂಡಿದೆ. ಸರಾಸರಿ ಶೇ 72ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ಪ್ಯಾಕೇಜ್‌ಗಳಲ್ಲಿ 9 ಟಿಬಿಎಂಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಊರ್ಜಾ, ಅವನಿ, ಲಾವಿ, ವರದ ಮತ್ತು ವಿಂಧ್ಯಾ ಟಿಬಿಎಂಗಳು ಈಗಾಗಲೇ ಕಾಮಗಾರಿ ಪೂರ್ಣಗೊಳಿಸಿವೆ. ಇನ್ನು ನಾಲ್ಕು ಟಿಬಿಎಂಗಳು ಕಾಮಗಾರಿ ಮುಂದುವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT