ಶುಕ್ರವಾರ, ಜನವರಿ 27, 2023
26 °C
ಕೇಂದ್ರ ಸರ್ಕಾರದ ಫೇಮ್‌–2 ಯೋಜನೆ: ಸಚಿವ ಸಂಪುಟ ಸಭೆ ಒಪ್ಪಿಗೆ

ಬೆಂಗಳೂರು ನಗರಕ್ಕೆ ಇನ್ನೂ 921 ಎಲೆಕ್ಟ್ರಿಕ್‌ ಬಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸರ್ಕಾರದ ಫೇಮ್‌–2 ಯೋಜನೆಯಡಿ ಸಿಇಎಸ್‌ಎಲ್‌ ಮೂಲಕ ಹೊಸದಾಗಿ 921 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿ ಕಾರ್ಯಾಚರಣೆ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬೆಂಗಳೂರಿಗೆ 921 ಬಸ್‌ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದು, ಸಹಾಯಧನವನ್ನೂ ನೀಡಲಿದೆ. ಈ ಬಸ್ಸುಗಳಿಗೆ ರಾಜ್ಯ ಸರ್ಕಾರವೂ ಧನಸಹಾಯ ನೀಡಲಿದೆ. ಇದನ್ನು ಬಳಸಿಕೊಂಡು ಬಿಎಂಟಿಸಿ ಈ ಬಸ್‌ಗಳನ್ನು ಸಿಇಎಸ್‌ಎಲ್ ಮೂಲಕ ಕಾರ್ಯಚರಣೆ ನಡೆಸಲಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದು ಬಸ್ಸಿಗೆ ₹1.50 ಕೋಟಿ ಬೆಲೆ ಇದೆ. ಕೇಂದ್ರ ಸರ್ಕಾರ ಪ್ರತಿಯೊಂದು ಬಸ್ಸಿಗೆ ₹39.08 ಲಕ್ಷ ಸಹಾಯಧನ ನೀಡುತ್ತದೆ. ಈ ಸಹಾಯಧನವನ್ನು ಬಸ್‌ ಒದಗಿಸುವ ಕಂಪನಿಗೆ ನೀಡಲಾಗುವುದು. ಉಳಿದ ಮೊತ್ತವನ್ನು ಕಂಪನಿಯೇ ಭರಿಸಿ ಬಸ್‌ ಖರೀದಿ ಮಾಡುತ್ತದೆ. ಬಿಎಂಟಿಸಿ ಪ್ರತಿ ಕಿ.ಮೀಗೆ ₹40 ನಿಗದಿ ಮಾಡಿದ್ದು, ಆ ಮೊತ್ತವನ್ನು ಸಿಇಎಸ್‌ಎಲ್‌ಗೆ ನೀಡಲಾಗುತ್ತದೆ. ಚಾಲಕನನ್ನು ಕಂಪನಿಯೇ ಒದಗಿಸುತ್ತದೆ. ಕಂಡಕ್ಟರ್‌ ಬಿಎಂಟಿಸಿಯವರೇ ಇರುತ್ತಾರೆ ಎಂದರು.

 

ಪ್ರಮುಖ ನಿರ್ಣಯಗಳು

l ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರು ನಗರದ ಹೊರವಲಯದಲ್ಲಿರುವ ಉಪನಗರಗಳನ್ನು ಸಂಪರ್ಕಿಸುವಂತೆ ಪ್ರಸ್ತಾಪಿಸಿರುವ ಮಧ್ಯಂತರ ವರ್ತುಲ ರಸ್ತೆಯ ಗ್ರೇಡ್ ಸಪರೇಟರ್ ಮರುನಿಗದಿಪಡಿಸಲು ಒಪ್ಪಿಗೆ

l ನಗರದಲ್ಲಿ ಕಳೆದ ಮೇ ಇಂದ ಸೆಪ್ಟೆಂಬರ್‌ವರೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದ ಹಾನಿಯನ್ನು ತಡೆಗಟ್ಟುವ ಕಾಮಗಾರಿಗಳ ಕ್ರಿಯಾಯೋಜನೆಗೆ ಘಟನೋತ್ತರ ಅನುಮೋದನೆ

l ಚಂದ್ರಾ ಲೇಔಟ್‌ನಲ್ಲಿ ಬಿಬಿಎಂಪಿ ನಿರ್ಮಿಸಿರುವ ಕನಕ ಭವನದ ಸುಮಾರು 2924.89 ಚದರ ಮೀಟರ್‌ ವಿಸ್ತೀರ್ಣದ ಕಟ್ಟಡವನ್ನು ಕಾಗಿನೆಲೆ ಮಹಾ ಸಂಸ್ಥಾನದ ಕನಕಪೀಠಕ್ಕೆ ಗುತ್ತಿಗೆ ಆಧಾರದ ಮೇಲೆ 30 ವರ್ಷಗಳಿಗೆ ಹಸ್ತಾಂತರಿಸಲು ಒಪ್ಪಿಗೆ.

l ಯಲಹಂಕ ತಾಲ್ಲೂಕು, ತಿಮ್ಮಸಂದ್ರ ಗ್ರಾಮದ ಸರ್ವೆ ನಂಬರ್‌ 19 ರಲ್ಲಿ 7 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಷನ್‌ ಇವರಿಗೆ ಅಂತರರಾಷ್ಟ್ರೀಯ ದರ್ಜೆ ಟೆನ್ನಿಸ್‌ ಕ್ರೀಡಾಂಗಣ ನಿರ್ಮಾಣಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮಂಜೂರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು