ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಡುವು ಮುಗಿದರೂ ಕಾಣದ ಪ್ರಗತಿ

ಕೆಂಗೇರಿ ಹೊರವರ್ತುಲ ರಸ್ತೆಯಲ್ಲಿ ‘ಉಲ್ಲಾಳು ಗ್ರೇಡ್‌ ಸೆಪರೇಟರ್‌’ ಕೆಲಸಕ್ಕೆ ಸಿಗದ ವೇಗ; ವಾಹನ ಸವಾರರ ಪರದಾಟ
Published 10 ಜುಲೈ 2024, 0:10 IST
Last Updated 10 ಜುಲೈ 2024, 0:10 IST
ಅಕ್ಷರ ಗಾತ್ರ

ಬೆಂಗಳೂರು: ಟೆಂಡರ್‌ ಮೊತ್ತದ ನಂತರವೂ ಶೇ 10ರಷ್ಟು ಹೆಚ್ಚು ‘ಪ್ರೀಮಿಯಂ ದರ’ ನೀಡಲಾಗುತ್ತಿರುವ ‘ಉಲ್ಲಾಳು ಮುಖ್ಯರಸ್ತೆ ಗ್ರೇಡ್‌ ಸೆಪರೇಟರ್‌’ ಕಾಮಗಾರಿ ಮೂರು ವರ್ಷದ ಹಿಂದೆ ಆರಂಭವಾದ ಸ್ಥಿತಿಯಲ್ಲೇ ಇದೆ.

ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಯನ್ನು ಸಂಪರ್ಕಿಸುವ ಕೆಂಗೇರಿ ಹೊರವರ್ತುಲ ರಸ್ತೆಯಲ್ಲಿ ಸುಗಮ ಹಾಗೂ ಸಿಗ್ನಲ್‌ ಮುಕ್ತ ಸಂಚಾರಕ್ಕಾಗಿ ಉಲ್ಲಾಳು ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ‘ಟರ್ನ್‌ ಕೀ’ ಆಧಾರದಲ್ಲಿ ಗುತ್ತಿಗೆ ನೀಡಿರುವುದರಿಂದ ಎಷ್ಟು ವರ್ಷ ವಿಳಂಬವಾದರೂ ಬಿಬಿಎಂಪಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ಆದರೆ ನಾಗರಿಕರಿಗೆ ಮಾತ್ರ ಮೂರು ವರ್ಷಗಳಿಂತ ನಿತ್ಯವೂ ಸಂಕಷ್ಟ, ಕಿರಿಕಿರಿ ತಪ್ಪಿಲ್ಲ.

ಜ್ಞಾನಭಾರತಿಯಿಂದ ಉಲ್ಲಾಳು ಮುಖ್ಯರಸ್ತೆ ಹಾಗೂ ಕೆಂಗೇರಿ, ನಾಗರಬಾವಿ ಕಡೆಗಳಿಗೆ ತಿರುವು ಪಡೆದುಕೊಳ್ಳುವ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ನಿರ್ಮಿಸಲು ₹28.22 ಕೋಟಿಗೆ ಗುತ್ತಿಗೆ ನೀಡಿ, 2020ರಲ್ಲಿ ಕಾರ್ಯಾದೇಶ ನೀಡಲಾಗಿದೆ. ‘ಟೆಂಡರ್‌ ಪ್ರೀಮಿಯಂ’ ವರ್ಗದಲ್ಲಿ ₹2.58 ಕೋಟಿಯನ್ನು ಮೂಲ ಟೆಂಡರ್‌ ಮೊತ್ತಕ್ಕಿಂತ ಹೆಚ್ಚಾಗಿ ನೀಡಲಾಗುತ್ತಿದೆ. ಸರಕು ಮತ್ತು ಸೇವಾ ತೆರಿಗೆಯೂ ಸೇರಿ ಒಟ್ಟಾರೆ ವೆಚ್ಚ ₹32.84 ಕೋಟಿಯನ್ನು ನಮೂದಿಸಲಾಗಿದೆ. ಗಡುವಿನ ಪ್ರಕಾರ, ಈ ವೇಳೆಗಾಗಲೇ ಕಾಮಗಾರಿ ಮುಗಿದು ಎರಡು ವರ್ಷವಾಗಬೇಕಿತ್ತು. ಆದರೆ, ಕಾಮಗಾರಿ ಆರಂಭವಾದ ದಿನಗಳಲ್ಲಿನ ಸ್ಥಿತಿಯೇ ಮುಂದುವರಿದ್ದು, ಒಂದು ಭಾಗದಲ್ಲಿ ಮಾತ್ರ ತಡೆಗೋಡೆಯನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.

ಉಲ್ಲಾಳು ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಯಾವುದೇ ರೀತಿಯ ಭೂಸ್ವಾಧೀನದ ಪ್ರಕ್ರಿಯೆ ನಡೆಸಬೇಕಾಗಿಲ್ಲ. ಆದರೂ ಕಾಮಗಾರಿ ನಾಲ್ಕು ವರ್ಷದಿಂದ ಪ್ರಗತಿ ಕಾಣುತ್ತಿಲ್ಲ. ದಿನವೂ ಈ ಜಂಕ್ಷನ್‌ನಲ್ಲಿನ ವಾಹನ ದಟ್ಟಣೆಯಿಂದ ಜ್ಞಾನಭಾರತಿ ಕ್ಯಾಂಪಸ್‌, ಉಲ್ಲಾಳು ಮುಖ್ಯರಸ್ತೆ ಹಾಗೂ ಕೆಂಗೇರಿ ಹೊರವರ್ತುಲ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ರಸ್ತೆಗಳು ಕಿರಿದಾಗಿರುವುದರಿಂದ ಪಾದಚಾರಿ ಮಾರ್ಗದಲ್ಲೂ ವಾಹನಗಳೇ ಸಂಚರಿಸುತ್ತಿರುತ್ತವೆ. ಇದರಿಂದ ನಾಗರಿಕರ ಓಡಾಟಕ್ಕೂ ಸಂಕಷ್ಟ ಎದುರಾಗಿದೆ.

‘ನಾವೇನು ಮಾಡೋದು, ನಮಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಹಣವೇ ಇಲ್ಲದಿದ್ದರೆ ಕೆಲಸ ಹೇಗೆ ಮುಗಿಸೋದು’ ಎಂದು ಎರಡೂ ಗ್ರೇಡ್‌ ಸೆಪರೇಟರ್‌ಗಳ ಕಾಮಗಾರಿಯ ನೇತೃತ್ವ ವಹಿಸಿಕೊಂಡವರು ಸಬೂಬು ಹೇಳುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ.

ವಿವಿ ಆವರಣದಲ್ಲೂ ದಟ್ಟಣೆ

‘ಉಲ್ಲಾಳು ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿದ್ದು ನಿತ್ಯವೂ ಇಲ್ಲಿ ಓಡಾಡಲು ಸಮಸ್ಯೆಯಾಗುತ್ತಿದೆ. ಉಲ್ಲಾಳು ವಿಶ್ವೇಶ್ವರಯ್ಯ ಬಡಾವಣೆ ಜ್ಞಾನಭಾರತಿ ಬಡಾವಣೆ ಮಲ್ಲತ್ತಹಳ್ಳಿ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಆಗುತ್ತಿಲ್ಲ. ವಿಶ್ವವಿದ್ಯಾಲಯದ ಆವರಣದಲ್ಲೂ ವಾಹನ ದಟ್ಟಣೆ  ಉಂಟಾಗುತ್ತಿದೆ’ ಎಂದು ಮಲ್ಲತ್ತಹಳ್ಳಿ ವಿದ್ಯಾರ್ಥಿ ಜಗದೀಶ್‌ ಹೇಳಿದರು. ದಟ್ಟಣೆಯಿಂದ ಸಮಯ ವ್ಯಯ ‘ಗ್ರೇಡ್‌ ಸೆಪರೇಟರ್‌ ಕಾಮಗಾರಿಯಿಂದ ವಿ.ವಿ ಒಳಗಿನ ರಸ್ತೆ ಮೂಲಕ ಕೆಂಗೇರಿ ವರ್ತುಲ ರಸ್ತೆಗೆ ಸಂಚರಿಸುತ್ತಿದ್ದೇವೆ. ನೂರಾರು ವಾಹನಗಳೂ ಇದೇ ಮಾರ್ಗದಲ್ಲಿ ಬರುತ್ತಿರುವುದರಿಂದ ಇಲ್ಲೂ ದಟ್ಟಣೆ ಉಂಟಾಗುತ್ತಿದೆ. ನಾಗದೇವನಹಳ್ಳಿ ದೊಡ್ಡಬಸ್ತಿ ಕಡೆಗೆ ಹೋಗುವವರಿಗೆ ನಿತ್ಯವೂ ಗಂಟೆಗಟ್ಟಲೆ ಈ ಮಾರ್ಗದಲ್ಲೇ ಸಮಯ ವ್ಯಯವಾಗುತ್ತಿದೆ’ ಎಂದು ದೊಡ್ಡಬಸ್ತಿ ನಿವಾಸಿ ಕುಮಾರ ಆತಂಕ ದೂರಿದರು.

‘ಕಾಮಗಾರಿ ಏಕೆ ಆರಂಭಿಸಬೇಕಿತ್ತು?’

‘ಗ್ರೇಡ್‌ ಸೆಪರೇಟರ್‌ ಎಂದು ಹೇಳುತ್ತಿದ್ದಾರೆ. ಮೂರು ವರ್ಷದಿಂದ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಗ್ರೇಡ್‌ ಸೆಪರೇಟರ್‌ ಆಗಿದ್ದರೆ ಜಂಕ್ಷನ್‌ ಅಗೆಯಬೇಕಿತ್ತು. ಮೇಲ್ಸೇತುವೆಯಾಗಿದ್ದರೆ ಪಿಲ್ಲರ್‌ಗಳನ್ನಾದರೂ ನಿರ್ಮಿಸಬೇಕಿತ್ತು. ಆದರೆ ಉಲ್ಲಾಳು ಮುಖ್ಯರಸ್ತೆ ಅಥವಾ ಹೊರ ವರ್ತುಲ ರಸ್ತೆಯಲ್ಲಿ ಇದರ ಯಾವುದೇ ಕುರುಹು ಇಲ್ಲ. ರಸ್ತೆಯ ಒಂದು ಭಾಗದಲ್ಲಿ ವಿಶ್ವವಿದ್ಯಾಲಯದ ಗೋಡೆ ತೆಗೆದು ತಡೆಗೋಡೆ ನಿರ್ಮಿಸಿರುವುದು ಬಿಟ್ಟರೆ ಯಾವ ಕೆಲಸವೂ ಆಗಿಲ್ಲ. ಅಲ್ಲೂ ಗಿಡಗಳು ಬೆಳೆದು ಮರಗಳಾಗಿವೆ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೆಲಸ ಮಾಡುವವರಿಗೆ ಹಣ ನೀಡಲು ಆಗದಿದ್ದರೆ ಕಾಮಗಾರಿ ಏಕೆ ಆರಂಭಿಸಬೇಕು? ಬಿಬಿಎಂಪಿ ಯಾರದೋ ಒತ್ತಾಸೆಗೆ ಬಿದ್ದು ಕಾಮಗಾರಿ ಆರಂಭಿಸಿದಂತಿದೆ. ಜನರಿಗೆ ತೊಂದರೆ ಕೊಡಲೆಂದೇ ಇದೆಲ್ಲ ಮಾಡುತ್ತಿದ್ದಾರೆ’ ಎಂದು ಉಲ್ಲಾಳು ಮುಖ್ಯರಸ್ತೆ ಜಂಕ್ಷನ್‌ ವ್ಯಾಪಾರಿಗಳಾದ ನಾಗೇಂದ್ರಪ್ಪ ರಮೇಶ್‌ ನಟರಾಜ್‌ ಗೌರಮ್ಮ ರಾಜೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಶೀಘ್ರ ಕೆಲಸ ಆರಂಭ: ಪ್ರಹ್ಲಾದ್‌

‘ಉಲ್ಲಾಳು ಮುಖ್ಯರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌ ನಿರ್ಮಾಣ ಕಾಮಗಾರಿ ಹಲವಾರು ಕಾರಣದಿಂದ ಮುಂದಕ್ಕೆ ಹೋಗುತ್ತಿದೆ. ದೇವಸ್ಥಾನವನ್ನು ಬೇರಡೆಗೆ ಸ್ಥಳಾಂತರಿಸಿದೆವು. ಇನ್ನು ಕೆಲವು ದಿನಗಳಲ್ಲಿ ಕೆಲಸ ಆರಂಭಿಸುತ್ತೇವೆ’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಕೂಡ ಆಗಿರುವ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT