ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ಪೋಷಿಸುವ ವಿದ್ಯಾರ್ಥಿ ಹಸಿರು ರಕ್ಷಕ– ರಸ್ತೆಯಲ್ಲಿ ಮರ ಬೆಳೆಸುವ ಯೋಜನೆ

‌‘ಹಸಿರು ಬೆಂಗಳೂರು’: ರಸ್ತೆಯಲ್ಲಿ ಮರ ಬೆಳೆಸುವ ಯೋಜನೆ; ಮುಂದಿನ ವಾರ ಚಾಲನೆ
Published 13 ಜುಲೈ 2023, 23:51 IST
Last Updated 13 ಜುಲೈ 2023, 23:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಸ್ತೆಗಳಲ್ಲಿನ ಸಸಿಗಳನ್ನು ತಮ್ಮ ಹೆಸರಿನಲ್ಲಿ ಪೋಷಿಸುವ ಅವಕಾಶ ವಿದ್ಯಾರ್ಥಿಗಳು ಬಂದೊದಗಿದೆ. ಮೂರು ವರ್ಷ ಗಿಡವನ್ನು ಕಾಪಾಡಿಕೊಂಡು ಮರವಾಗಿಸಿದರೆ ‘ಹಸಿರು ರಕ್ಷಕ’ ಬಿರುದೂ ಅವರದಾಗಲಿದೆ.

ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳನ್ನು ಹಸಿರುಮಯವಾಗಿಸುವ ಉದ್ದೇಶದಿಂದ ಅರಣ್ಯ ವಿಭಾಗದ ವತಿಯಿಂದ ‘ಹಸಿರು ಬೆಂಗಳೂರು’ ಅಭಿಯಾನ ಮುಂದಿನ ವಾರದಿಂದ ಜಾರಿಯಾಗುತ್ತಿದೆ. ಗುಂಡಿ ಮಾಡಿ, ಮಣ್ಣು–ಗೊಬ್ಬರಸಹಿತ ಸಸಿ ನೆಡುವುದು, ರಕ್ಷಾಕವಚ ಹಾಕುವ ಕೆಲಸವನ್ನೆಲ್ಲ ಬಿಬಿಎಂಪಿಯೇ ಮಾಡುತ್ತದೆ. ಅದರ ಪೋಷಣೆ, ನಿರ್ವಹಣೆ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು.

‘ಹಸಿರು ಬೆಂಗಳೂರು’ ಯೋಜನೆಯಡಿ ಬಿಬಿಎಂ‍ಪಿಯ ಎಲ್ಲ ಶಾಲೆಗಳ ಮಕ್ಕಳಿಗೆ ಅವಕಾಶ ನೀಡಲಾಗುತ್ತಿದೆ. ಆಯಾ ಶಾಲೆಗಳ ಸಮೀಪದ ರಸ್ತೆಗಳಲ್ಲಿ ಸಸಿಗಳನ್ನು ಪೋಷಿಸುವ ಕಾರ್ಯ ಅವರಿಗೆ ನೀಡಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಸಸಿಯ ಜವಾಬ್ದಾರಿ ನೀಡಿ, ಅದಕ್ಕೆ ಅವರ ಹೆಸರಿನ ನಾಮಫಲಕವನ್ನು ಹಾಕಲಾಗುತ್ತದೆ. ಬಿಬಿಎಂಪಿಯ ಅರಣ್ಯ ವಿಭಾಗ ಎಲ್ಲ ರೀತಿಯ ಕಾರ್ಯವನ್ನೂ ಮಾಡಲಿದ್ದು, ಅದರ ಮೇಲುಸ್ತುವಾರಿಯನ್ನು ವಿದ್ಯಾರ್ಥಿ ವಹಿಸಿಕೊಳ್ಳಬೇಕು.

ಗಿಡ ನೆಟ್ಟ ಮೇಲೆ ಅದಕ್ಕೆ ಬೇಕಿರುವ ನೀರು ಸಿಗುತ್ತಿದೆಯೇ, ಗೊಬ್ಬರ ಹಾಕಬೇಕೇ? ಏನಾದರೂ ಸಮಸ್ಯೆ ಆಗುತ್ತಿದೆಯೇ ಎಂದು ನೋಡಿಕೊಳ್ಳಬೇಕು. ಅದರ ಮಾಹಿತಿಯನ್ನು ಶಾಲೆಯ ಮುಖ್ಯಸ್ಥರಿಗೆ ನೀಡಿದರೆ ಅರಣ್ಯ ವಿಭಾಗದವರು ಬಂದು ಗಮನಹರಿಸುತ್ತಾರೆ. ಹೀಗೆ ಮೂರು ವರ್ಷ ತಮ್ಮ ಹೆಸರಿನ ಸಸಿಯನ್ನು ಪೋಷಿಸಿ ಮರವಾಗಿಸಿದರೆ ಅವರಿಗೆ ‘ಹಸಿರು ರಕ್ಷಕ’ ಎಂಬ ಬಿರುದು ನೀಡಿ, ಪ್ರಮಾಣಪತ್ರ ವಿತರಿಸಲಾಗುತ್ತದೆ. ಅತ್ಯುತ್ತಮವಾಗಿ ನಿರ್ವಹಿಸಿದವರಿಗೆ ಬಹುಮಾನ ನೀಡುವ ಯೋಜನೆಯೂ ಇದೆ ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್ ಹೇಳಿದರು.

1 ಲಕ್ಷ ಸಸಿ ನೆಡುವ ಗುರಿ

‘ಹಸಿರು ಬೆಂಗಳೂರು’ ಯೋಜನೆಯಡಿ ಈ ವರ್ಷ ನಗರದ ರಸ್ತೆಗಳಲ್ಲಿ ಒಂದು ಲಕ್ಷ ಸಸಿ ನೆಡುವ ಗುರಿಯನ್ನು ಬಿಬಿಎಂಪಿ ಅರಣ್ಯ ಇಲಾಖೆ ಹೊಂದಿದೆ. ಹುಣಸೆ ನೇರಳೆ ಹೊಂಗೆ ತಬೂಬಿಯಾ ಮಹಾಗನಿ ಆಲ ಹತ್ತಿ ಸಸಿಗಳನ್ನು ನೆಡಲಾಗುತ್ತದೆ. ಮಕ್ಕಳು ಅವರಿಗೆ ಇಷ್ಟವಾಗುವ ಸಸಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಶಾಲೆಗಳದ್ದೇ ಜವಾಬ್ದಾರಿ:

ಡಿಸಿಎಫ್‌ ‘ಪ್ರಾರಂಭದಲ್ಲಿ ನಾವು ಬಿಬಿಎಂಪಿಯ 16 ಶಾಲೆಗಳ 5ರಿಂದ 7ನೇ ತರಗತಿಯ ಮಕ್ಕಳಿಗೆ ಅವಕಾಶ ನೀಡುತ್ತಿದ್ದೇವೆ. ನೋಂದಣಿ ಮಾಡಿಕೊಳ್ಳುವುದು ಯಾವ ಗಿಡವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದನ್ನು ಶಾಲೆಯ ಮುಖ್ಯಸ್ಥರೇ ನಿರ್ಧರಿಸಬೇಕು. ಮೂರು ವರ್ಷ ಸಸಿಯನ್ನು ವಿದ್ಯಾರ್ಥಿಗಳು ಪೋಷಿಸಿದ ಮೇಲೆ ಮರ ರಕ್ಷಿಸಿಕೊಳ್ಳುವ ಜವಾಬ್ಧಾರಿ ಶಾಲೆಯದ್ದು’ ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್ ಹೇಳಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪರಿಸರ ದಿನದಂದು ಮಕ್ಕಳಿಂದ ಗಿಡ ನಡೆಸಿ ಅದನ್ನು ಪೋಷಿಸುವ ಜವಾಬ್ದಾರಿ ನೀಡಿ ಎಂದು ಹೇಳಿದ್ದರು. ಅದರಂತೆಯೇ ‘ಹಸಿರು ಬೆಂಗಳೂರು’ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಖಾಸಗಿ ಶಾಲೆಯ ಮಕ್ಕಳು ಇದರಲ್ಲಿ ಭಾಗವಹಿಸುವ ಆಸ‌ಕ್ತಿ ಹೊಂದಿದ್ದರೆ ಅವರ ಶಾಲೆಯ ಮುಖ್ಯಸ್ಥರ ಮೂಲಕ ಬಿಬಿಎಂಪಿ ಅರಣ್ಯ ವಿಭಾಗವನ್ನು ಸಂಪರ್ಕಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT