ಬುಧವಾರ, ಜೂನ್ 29, 2022
25 °C
ರಾಜ್ಯ ಸರ್ಕಾರಕ್ಕೆ ಆಮ್‌ ಆದ್ಮಿ ಪಕ್ಷ ಆಗ್ರಹ

ಭ್ರಷ್ಟ ಸಚಿವರನ್ನು ಸಂಪುಟದಿಂದ ಹೊರಹಾಕಿ: ಆಮ್‌ ಆದ್ಮಿ ಪಕ್ಷ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಂಜಾಬ್‌ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಭ್ರಷ್ಟ ಸಚಿವರನ್ನು ಸಂಪುಟದಿಂದ ಹೊರಹಾಕಬೇಕು’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕದ ಸಂಚಾಲಕ ಪೃಥ್ವಿ ರೆಡ್ಡಿ ಒತ್ತಾಯಿಸಿದರು. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವರೊಬ್ಬರು ಒಂದು ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌, ಕೂಡಲೇ ಅವರನ್ನು ವಜಾ ಮಾಡಿ, ತನಿಖೆಗೆ ಆದೇಶಿಸಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದಲ್ಲಿನ ಬಹುತೇಕ ಸಚಿವರ ಮೇಲೆ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳಿವೆ. ಜನರು ರಾಜೀನಾಮೆಗೆ ಆಗ್ರಹಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕರ್ನಾಟಕದ ಅನೇಕ ಸಚಿವರ ವಿರುದ್ಧ ಆರೋಪಗಳಿವೆ. ಕಾಮಗಾರಿಗಳಲ್ಲಿ ಶೇ 40 ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಮಠಗಳಿಗೆ ಅನುದಾನ ಪಡೆಯಲು ಶೇ 30 ರಷ್ಟು ಕಮಿಷನ್ ನೀಡಬೇಕಾಗಿದೆ ಎಂದು ಸ್ವಾಮೀಜಿಗಳೇ ಆರೋಪ ಮಾಡಿದ್ದಾರೆ. ಎಲ್ಲ ಕಳಂಕಿತ ಸಚಿವರನ್ನೂ ಕೂಡಲೆ ವಜಾ ಮಾಡಿ, ಸಮಗ್ರ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದರು.

ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಎಎಪಿ ಮುಖಂಡ ಭಾಸ್ಕರ ರಾವ್, ‘ಕೋವಿಡ್‌ ಕಾಣಿಸಿಕೊಂಡ ಬಳಿಕ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆಗಿರುವ ದಾಖಲಾತಿ ಸಹಿತ ಆರೋಪ ಮಾಡಲಾಗಿತ್ತು. ಲೋಕಾಯುಕ್ತ ತನಿಖೆಯಿಂದ ಸಾಬೀತಾದ ₹ 118.26 ಕೋಟಿ ಮೊತ್ತದ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಮುನಿರತ್ನ ರಾಜೀನಾಮೆಗೆ ಎಎಪಿ ಅನೇಕ ಸಲ ಆಗ್ರಹಿಸಿತ್ತು. ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿನ ಅಕ್ರಮದದಲ್ಲೂ ಕೆಲವು ಸಚಿವರ ಹೆಸರುಗಳಿವೆ’ ಎಂದರು.

‘ಸಚಿವ ವಿ. ಸೋಮಣ್ಣ ವಿರುದ್ಧ ಆದಾಯ ಮೀರಿ ಆಸ್ತಿಗಳಿಸಿದ ಆರೋಪ ಇದೆ. ಅನೇಕ ಸಚಿವರ ವಿರುದ್ಧ ಗಂಭೀರ ಆರೋಪಗಳಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು