ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಎಎಪಿಯಿಂದ ಉಪವಾಸ ಸತ್ಯಾಗ್ರಹ

Last Updated 5 ಆಗಸ್ಟ್ 2021, 21:21 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಯೋಜನೆ ಕಾಮಗಾರಿಯನ್ನು ಕೂಡಲೇ ಆರಂಭಿಸಿ, ವರ್ಷದೊಳಗೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ(ಎಎಪಿ) ಕಾರ್ಯಕರ್ತರು ನಗರದಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಉಪವಾಸ ನಡೆಸಿದರು.

‘ಬೆಂಗಳೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 13 ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 100 ವಾರ್ಡ್‌ಗಳಿದ್ದವು. 2007ರಲ್ಲಿ 110 ಹಳ್ಳಿಗಳು ಸೇರಿ ವಾರ್ಡ್‌ಗಳ ಸಂಖ್ಯೆ 198 ತಲುಪಿತು. ಈಗ 45 ವಾರ್ಡ್‌ಗಳನ್ನು ಸೇರಿಸಿ 243 ವಾರ್ಡ್‌ ಮಾಡಲು ಸಿದ್ಧತೆ ನಡೆಯುತ್ತಿದೆ. 2007ರಲ್ಲಿ ಸೇರಿದ 110 ವಾರ್ಡ್‌ಗಳಿಗೇ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಪೈಪುಗಳಲ್ಲಿ ನೀರಿನ ಬದಲು ಕೇವಲ ಗಾಳಿ ಬರುತ್ತಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗದೇ 243 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಅಸಾಧ್ಯ’ ಎಂದು ಪೃಥ್ವಿರೆಡ್ಡಿ ಹೇಳಿದರು.

‘ಕುಡಿಯುವ ನೀರು ಕೂಡ ಇಲ್ಲದ ನಗರ ಸ್ಮಾರ್ಟ್‌ ಸಿಟಿ ಆಗಲು ಸಾಧ್ಯವಿಲ್ಲ. ‌ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು. ಇದಕ್ಕೆ ಕಾನೂನು ಅಡ್ಡಿಯಿಲ್ಲ. ನ್ಯಾಯಮಂಡಳಿಯಿಂದ ತೊಂದರೆಯಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕೆಂಬ ಕಾಲಮಿತಿ ಇಟ್ಟುಕೊಂಡು ಮೇಕೆದಾಟು ಯೋಜನೆಯ ಕಾಮಗಾರಿಗೆ ಕೂಡಲೇ ಗುದ್ದಲಿ ಪೂಜೆ ನೆರವೇರಿಸಬೇಕು’ ಎಂದು ಆಗ್ರಹಿಸಿದರು.

ಎಎಪಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, ‘ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರವು ತಮಿಳುನಾಡಿನ ಪರವಾಗಿದೆ ಎಂದು ಆ ರಾಜ್ಯದ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ʻಡಬಲ್‌ ಎಂಜಿನ್‌ʼ ಆಡಳಿತ ನೀಡುವುದಾಗಿ ಹೇಳಿದ್ದ ಬಿಜೆಪಿಯು ದ್ವಂದ್ವ ನಿಲುವು ಹೊಂದಿದೆ‘ ಎಂದು ಟೀಕಿಸಿದರು.

ಎಎಪಿ ಮಾಧ್ಯಮ ಸಂಚಾಲಕ ಜಗದೀಶ್‌ ಸದಂ ಮಾತನಾಡಿ, ‘ಕಳೆದ ಎಪ್ಪತ್ತು ವರ್ಷಗಳಿಂದಲೂ ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ತಮಿಳುನಾಡಿನ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ವಿನಾಕಾರಣ ಮೇಕೆದಾಟು ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ದ್ರೋಹ ಬಗೆಯುತ್ತಿರುವ ಎರಡೂ ಪಕ್ಷಗಳಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT