ಸೋಮವಾರ, ಮೇ 23, 2022
28 °C

₹ 10 ಲಕ್ಷ ಲಂಚ; ಇಂದಿರಾನಗರ ಇನ್‌ಸ್ಪೆಕ್ಟರ್ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ‘ಬಿ ವರದಿ’ ಸಲ್ಲಿಸಲು ₹ 10 ಲಕ್ಷ ಲಂಚ ಪಡೆದ ಆರೋಪದಡಿ ಇಂದಿರಾನಗರ ಠಾಣೆ ಇನ್‌ಸ್ಪೆಕ್ಟರ್ ಬಿ. ರಾಮಮೂರ್ತಿ ಹಾಗೂ ಇತರರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ಎಫ್‌ಐಆರ್ ದಾಖಲಾಗಿದೆ.

‘ಇಂದಿರಾನಗರ ಕ್ಲಬ್‌ನ ಕಾರ್ಯದರ್ಶಿ ಎಂ. ನಾಗೇಂದ್ರ ನೀಡಿರುವ ದೂರು ಆಧರಿಸಿ, ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಬಿ. ರಾಮಮೂರ್ತಿ ಹಾಗೂ ಅವರಿಗೆ ಲಂಚ ನೀಡಿದ್ದ ಆರೋಪಿ ರಾಮ್ ಮೋಹನ್ ಮೆನನ್ ಎಂಬುವರನ್ನೂ ಪ್ರಕರಣದ ಆರೋಪಿಗಳನ್ನಾಗಿ ಮಾಡಲಾಗಿದೆ’ ಎಂದು ಎಸಿಬಿ ಮೂಲಗಳು ಹೇಳಿವೆ.

‘ಎಂ. ನಾಗೇಂದ್ರ ಅವರಿಗೆ, ದೊಮ್ಮಲೂರು ಲೇಔಟ್ ನಿವಾಸಿ ರಾಮ್‌ ಮೋಹನ್ ಅವರು ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ನಾಗೇಂದ್ರ, ಇಂದಿರಾನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸುತ್ತಿದ್ದ ಇನ್‌ಸ್ಪೆಕ್ಟರ್ ರಾಮಮೂರ್ತಿ, ಕೃತ್ಯವೇ ನಡೆದಿಲ್ಲವೆಂದು ನ್ಯಾಯಾಲಯಕ್ಕೆ ಬಿ–ವರದಿ ಸಲ್ಲಿಸಲು ಒಪ್ಪಿದ್ದರು. ಅದಕ್ಕಾಗಿ ಅವರು ಹಾಗೂ ಇತರೆ ಸಿಬ್ಬಂದಿ ₹10 ಲಕ್ಷ ಲಂಚ ಪಡೆದಿದ್ದರು ಎಂಬ ಆರೋಪವಿದೆ’ ಎಂದೂ ಮೂಲಗಳು ತಿಳಿಸಿವೆ.

’ಲಂಚದ ಹಣದಲ್ಲೇ ₹ 2.95 ಲಕ್ಷ ಬಳಸಿಕೊಂಡು ಇನ್‌ಸ್ಪೆಕ್ಟರ್ ರಾಮಮೂರ್ತಿ, ಇಂದಿರಾನಗರದಲ್ಲಿರುವ ಈಸ್ಟ್ ಕಲ್ಚರಲ್ ಅಸೋಸಿಯೇಷನ್‌ನ ಪ್ರೆಸ್ಟೀಜಿಯಸ್ ಕ್ಲಬ್‌ನಲ್ಲಿ ಸದಸ್ಯತ್ವ ಪಡೆದಿದ್ದಾರೆ. ಉಳಿದ ₹ 7.05 ಲಕ್ಷವನ್ನು ಇತರೆ ಸಿಬ್ಬಂದಿ ಜೊತೆ ಹಂಚಿಕೊಂಡಿದ್ದಾರೆ ಎಂದೂ ದೂರಿನಲ್ಲಿ ಆರೊಪಿಸಲಾಗಿದೆ’ ಎಂದೂ ಎಸಿಬಿ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು