ಮಂಗಳವಾರ, ಮಾರ್ಚ್ 21, 2023
23 °C

ಅಕ್ರಮ ಆಸ್ತಿ ಆರೋಪ: ಶಾಸಕ ಜಮೀರ್‌ ಅಹಮ್ಮದ್‌ ಬಂಗಲೆ, ಕಚೇರಿ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಜೆಡ್‌.ಜಮೀರ್‌ ಅಹಮ್ಮದ್‌ ಖಾನ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಅವರಿಗೆ ಸಂಬಂಧಿಸಿದ ಐದು ಸ್ಥಳಗಳ ಮೇಲೆ ಮಂಗಳವಾರ ದಾಳಿ ಮಾಡಿ ಶೋಧ ನಡೆಸಿತು.

2021ರ ಆಗಸ್ಟ್‌ನಲ್ಲಿ ಜಮೀರ್‌ ಮೇಲೆ ದಾಳಿಮಾಡಿದ್ದ ಜಾರಿ ನಿರ್ದೇಶನಾಲಯ(ಇ.ಡಿ), ತನಿಖೆ ನಡೆಸಿತ್ತು. ಆ ಸಂದರ್ಭದಲ್ಲಿ ಇ.ಡಿ ಶಾಸಕರ ಮನೆ ಸೇರಿದಂತೆ ಕೆಲವು ಆಸ್ತಿಗಳ ಮೌಲ್ಯಮಾಪನ ಮಾಡಿ ಸಲ್ಲಿಸಿದ್ದ ವರದಿ ಆಧರಿಸಿ ಎಸಿಬಿ ಈಗ ಪ್ರತ್ಯೇಕ ಪ್ರಕರಣ ದಾಖಲಿಸಿದೆ. ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಜಿ.ಎಚ್‌. ಯತೀಶ್‌ ಚಂದ್ರ ನೇತೃತ್ವದಲ್ಲಿ ಅಧಿಕಾರಿಗಳು ಇಡೀ ದಿನ ಶೋಧ ನಡೆಸಿದರು.

ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಜಮೀರ್‌ ಅವರ ಬಂಗಲೆ, ಸಿಲ್ವರ್‌ ಓಕ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌, ಸದಾಶಿವನಗರದಲ್ಲಿರುವ ಅತಿಥಿಗೃಹ, ಬನಶಂಕರಿಯಲ್ಲಿರುವ ಜಿ.ಕೆ. ಅಸೋಸಿಯೇಟ್ಸ್‌ ಕಚೇರಿ ಮತ್ತು ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್‌ ಟ್ರಾವೆಲ್ಸ್‌ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಹಲವು ತಂಡಗಳಲ್ಲಿ ನಸುಕಿನಲ್ಲೇ ದಾಳಿ ಮಾಡಿದರು.

ರಾತ್ರಿಯವರೆಗೂ ಶೋಧ ನಡೆಸಿದ ತನಿಖಾ ತಂಡಗಳು, ಸ್ಥಿರಾಸ್ತಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್‌ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ನ್ಯಾಷನಲ್‌ ಟ್ರಾವೆಲ್ಸ್‌ ವಹಿವಾಟಿನ ದಾಖಲೆಗಳನ್ನು ಬೃಹತ್‌ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದು ಕೊಂಡೊಯ್ದರು.

ಮನೆಯ ಮೌಲ್ಯವೇ ಕಾರಣ: ಜಾರಿ ನಿರ್ದೇಶನಾಲಯವು ಹಿಂದೆ ಜಮೀರ್‌ ವಿರುದ್ಧ ತನಿಖೆ ಕೈಗೊಂಡಿದ್ದಾಗ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಸಮೀಪದ ಅವರ ಭವ್ಯವಾದ ಬಂಗಲೆಯ ಮೌಲ್ಯಮಾಪನ ನಡೆಸಿತ್ತು. ಜಮೀರ್‌ ₹ 40 ಕೋಟಿ ಮೌಲ್ಯ ಘೋಷಿಸಿಕೊಂಡಿದ್ದರು. ಮಾರುಕಟ್ಟೆ ದರದಲ್ಲಿ ಅದು ಸುಮಾರು ₹ 80 ಕೋಟಿಗೂ ಹೆಚ್ಚು ಬೆಲೆಬಾಳುತ್ತದೆ ಎಂದು ಮೌಲ್ಯಮಾಪಕರು ವರದಿ ಸಲ್ಲಿಸಿದ್ದರು.

‘ಬಂಗಲೆಯ ಘೋಷಿತ ಮೌಲ್ಯ ಮತ್ತು ವಾಸ್ತವಿಕ ಮೌಲ್ಯದ ನಡುವಿನ ಅಂತರದ ಕುರಿತು ವರದಿಯೊಂದನ್ನು ಇ.ಡಿ ಅಧಿಕಾರಿಗಳು ಎಸಿಬಿ ಜತೆ ಹಂಚಿಕೊಂಡಿದ್ದರು. ಅದರ ಆಧಾರದಲ್ಲೇ ಜಮೀರ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ವೈಭವೋಪೇತ ಅರಮನೆಯ ಮಾದರಿಯಲ್ಲಿ ಈ ಐಷಾರಾಮಿ ಬಂಗಲೆಯನ್ನು ನಿರ್ಮಿಸಲಾಗಿದೆ. ಬೃಹತ್‌ ಪ್ರಮಾಣದಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ವಸ್ತುಗಳನ್ನು ಮನೆ ನಿರ್ಮಾಣಕ್ಕೆ ಬಳಸಲಾಗಿದೆ. ಶೌಚಾಲಯ, ಸ್ನಾನಗೃಹ, ಹೋಂ ಥಿಯೇಟರ್‌ ಸೇರಿದಂತೆ ಎಲ್ಲ ಕಡೆಗಳಲ್ಲೂ ಶೋಧ ನಡೆಸಿದ ಎಸಿಬಿ ಅಧಿಕಾರಿಗಳು, ಮನೆ ನಿರ್ಮಾಣಕ್ಕೆ ಮಾಡಿರುವ ವೆಚ್ಚದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಟ್ರಾವೆಲ್ಸ್‌ ಮೇಲೆ ಕಣ್ಣು: ನೂರಾರು ಬಸ್‌ಗಳನ್ನು ಹೊಂದಿರುವ ನ್ಯಾಷನಲ್‌ ಟ್ರಾವೆಲ್ಸ್‌ ತಮ್ಮ ಆದಾಯದ ಏಕೈಕ ಮೂಲ ಎಂದು ಜಮೀರ್‌ ಘೋಷಿಸಿಕೊಂಡಿದ್ದರು. ತನಿಖೆಗೆ ಪೂರಕವಾಗಿ ಈ ಸಂಸ್ಥೆಯ ವಹಿವಾಟಿಗೆ ಸಂಬಂಧಿಸಿದ ಅಪಾರ ಪ್ರಮಾಣದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಪ್ರತಿಭಟನೆ: ಜಮೀರ್‌ ಅವರ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿರುವುದು ತಿಳಿಯುತ್ತಿದ್ದಂತೆ ನೂರಾರು ಮಂದಿ ಅವರ ಬೆಂಬಲಿಗರು ಕಂಟೋನ್ಮೆಂಟ್‌ ಬಳಿಯ ಶಾಸಕರ ನಿವಾಸದತ್ತ ದೌಡಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದ್ವೇಷದ ರಾಜಕೀಯದ ಭಾಗವಾಗಿ ದಾಳಿ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

‘ಎಸಿಬಿ ದಾಳಿ ನಿರಂತರ ಪ್ರಕ್ರಿಯೆ’: ‘ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಗಳು ಬಂದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ತನಿಖೆ ಮಾಡುವುದು ನಿರಂತರ ಪ್ರಕ್ರಿಯೆ. ಅದಕ್ಕೆ ಕಾಂಗ್ರೆಸ್‌ ರಾಜಕೀಯ ಬಣ್ಣ ನೀಡುವುದು ಸರ್ವೇಸಾಮಾನ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಬಾಕಿ ಇರುವ ಪ್ರಕರಣಗಳ ತನಿಖೆ ನಡೆಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಸಾಕ್ಷ್ಯದ ಆಧಾರದಲ್ಲಿ ಎಸಿಬಿ ತನಿಖೆ ನಡೆಸುತ್ತಿದೆ. ಪ್ರತಿಭಟನೆ ಮಾಡಿ, ತನಿಖೆಗೆ ಅಡ್ಡಿಪಡಿಸುವುದು ಸರಿಯಲ್ಲ’ ಎಂದರು.

ಚರ್ಚೆಗೆ ಕಾರಣವಾದ ಎಸಿಬಿ ನಡೆ

ಸುಜೀತ್‌ ಮುಳುಗುಂದ ಎಂಬುವವರು ಸಲ್ಲಿಸಿರುವ ದೂರು ಆಧರಿಸಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಎಸಿಬಿ ವಿಧಾನಸಭೆ ಅಧ್ಯಕ್ಷರ ಅನುಮತಿ ಕೋರಿದೆ. 

ಆದರೆ, ಜಮೀರ್‌ ಅಹಮ್ಮದ್ ವಿಚಾರದಲ್ಲಿ ಅಂತಹ ಯಾವುದೇ ಪ್ರಕ್ರಿಯೆ ನಡೆದಿರುವ ಮಾಹಿತಿ ಇಲ್ಲ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಎಸಿಬಿ ದಾಳಿ ನಿರಂತರ ಪ್ರಕ್ರಿಯೆ’

‘ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಗಳು ಬಂದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ತನಿಖೆ ಮಾಡುವುದು ನಿರಂತರ ಪ್ರಕ್ರಿಯೆ. ಅದಕ್ಕೆ ಕಾಂಗ್ರೆಸ್‌ ರಾಜಕೀಯ ಬಣ್ಣ ನೀಡುವುದು ಸರ್ವೇಸಾಮಾನ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಬಾಕಿ ಇರುವ ಪ್ರಕರಣಗಳ ತನಿಖೆ ನಡೆಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಸಾಕ್ಷ್ಯದ ಆಧಾರದಲ್ಲಿ ಎಸಿಬಿ ತನಿಖೆ ನಡೆಸುತ್ತಿದೆ. ಪ್ರತಿಭಟನೆ ಮಾಡಿ, ತನಿಖೆಗೆ ಅಡ್ಡಿಪಡಿಸುವುದು ಸರಿಯಲ್ಲ’ ಎಂದರು.

ಸಜೀವ ಗುಂಡು ಪತ್ತೆ

ಜಮೀರ್‌ ಪರವಾನಗಿ ಹೊಂದಿರುವ ರಿವಾಲ್ವರ್‌ ಹೊಂದಿದ್ದಾರೆ. ಅದಕ್ಕೆ ಬಳಸುವ 24 ಸಜೀವ ಗುಂಡುಗಳು ಅವರ ಬಳಿ ಇದ್ದವು. ಅವುಗಳನ್ನು ತನಿಖಾ ತಂಡ ಪರಿಶೀಲನೆ ನಡೆಸಿದೆ. ಪರವಾನಗಿ ಇರುವ ಕಾರಣ ಅದನ್ನು ಅವರಿಗೆ ಮರಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶೋಧಕ್ಕೆ ಸಹಕರಿಸಿದ ಜಮೀರ್‌: ಎಸಿಬಿ ಅಧಿಕಾರಿಗಳು ಶೋಧಕ್ಕಾಗಿ ಮನೆಯ ಬಾಗಿಲು ಬಡಿದಾಗ ಜಮೀರ್‌ ಅಹಮ್ಮದ್ ಮನೆಯಲ್ಲೇ ಇದ್ದರು. ಶೋಧನಾ ವಾರೆಂಟ್‌ಗೆ ಸಹಿ ಮಾಡಿದ ಅವರು, ಶೋಧಕ್ಕೆ ಸಂಪೂರ್ಣ ಸಹಕಾರ ನೀಡಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು