ಗುರುವಾರ , ಅಕ್ಟೋಬರ್ 21, 2021
27 °C
* ಚಿಕ್ಕಗೊಲ್ಲರಹಟ್ಟಿ ಬಳಿ ಅವಘಡ; ಇಬ್ಬರಿಗೆ ತೀವ್ರ ಗಾಯ

ಗುಂಡಿ ತಪ್ಪಿಸಲು ಹೋಗಿ ಅಪಘಾತ: ಪ್ರಾಣ ಬಿಟ್ಟ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹೊರವಲಯದ ಚಿಕ್ಕಗೊಲ್ಲರಹಟ್ಟಿ ಬಳಿ ಮುಖ್ಯರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದ್ದು, ನುಬಿಯಾ (17) ಎಂಬಾಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿರುವ ಅವಘಡದಲ್ಲಿ ಹರಾನ್ (30) ಹಾಗೂ ಆಫ್ರಿನ್ (15) ಎಂಬುವರು ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಬೆಂಗಳೂರಿನ ಗೋರಿಪಾಳ್ಯ ನಿವಾಸಿ ಹರಾನ್, ಯಮಹಾ ಮೊಪೈಡ್ ದ್ವಿಚಕ್ರ ವಾಹನದಲ್ಲಿ ನುಬಿಯಾ ಹಾಗೂ ಆಫ್ರಿನ್ ಕರೆದುಕೊಂಡು ತಾವರೆಕೆರೆಯತ್ತ ಸಂಬಂಧಿಕರ ಮನೆಗೆ ಹೊರಟಿದ್ದರು. ಈ ಮಾರ್ಗದಲ್ಲಿ ರಸ್ತೆ ಹಾಳಾಗಿ ಹಲವೆಡೆ ದೊಡ್ಡ ಗುಂಡಿಗಳು ಬಿದ್ದಿದ್ದವು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೆಳಿಗ್ಗೆ 11.15ರ ಸುಮಾರಿಗೆ ಚಿಕ್ಕಗೊಲ್ಲರಹಟ್ಟಿಯ ಸಾಯಿ ಗಾರ್ಮೆಂಟ್ಸ್ ಕಾರ್ಖಾನೆ ಬಳಿ ವಾಹನ ಚಲಾಯಿಸಿಕೊಂಡು ಬಂದಿದ್ದ ಹರಾನ್, ರಸ್ತೆಯಲ್ಲಿದ್ದ ಗುಂಡಿಗಳನ್ನು ತಪ್ಪಿಸಲು ಮುಂದಾಗಿದ್ದರು. ಇದೇ ಸಂದರ್ಭದಲ್ಲೇ ಸ್ಕೀಡ್ ಆಗಿ ವಾಹನ ರಸ್ತೆಯಲ್ಲೇ ಉರುಳಿಬಿದ್ದಿತ್ತು. ಮೂವರು ರಸ್ತೆಗೆ ಬಿದ್ದಿದ್ದರು. ಇದೇ ಸಂದರ್ಭದಲ್ಲೇ ಎದುರಿನಿಂದ ಅತೀ ವೇಗವಾಗಿ ಬಂದಿದ್ದ ಟಿಪ್ಪರ್ ಲಾರಿ, ನುಬಿಯಾಳ ಮೈ ಮೇಲೆಯೇ ಹರಿಯಿತು’ ಎಂದೂ ತಿಳಿಸಿವೆ.

‘ತೀವ್ರ ರಕ್ತಸ್ರಾವವಾಗಿ ನುಬಿಯಾ ಸ್ಥಳದಲ್ಲೇ ಅಸುನೀಗಿದರು. ಗಾಯಗೊಂಡಿದ್ದ ಹರಾನ್ ಹಾಗೂ ಆಫ್ರಿನ್ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿವೆ.

ಲಾರಿ ಚಾಲಕ ವಶಕ್ಕೆ: ‘ಅತೀ ವೇಗವಾಗಿ ನಿರ್ಲಕ್ಷ್ಯದಿಂದ ಟಿಪ್ಪರ್ ಲಾರಿ ಚಲಾಯಿಸಿದ್ದ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮೃತ ನುಬಿಯಾಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು