ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಸಿಡ್‌ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣ ರದ್ದು

Last Updated 25 ಜೂನ್ 2022, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪಾರ್ಟ್‌ಮೆಂಟ್‌ನ ನೆಲಮಾಳಿಗೆಯಲ್ಲಿ (ಬೇಸ್‌ಮೆಂಟ್‌) ನಿಲ್ಲಿಸಿದ್ದ ವಾಹನದ ಮೇಲೆ ಆ್ಯಸಿಡ್‌ ಎರಚಿ ಹಾನಿ ಉಂಟು ಮಾಡಿದ್ದಾರೆ’ ಎಂಬ ಆರೋಪ ಹೊತ್ತ ಮಹಿಳೆಯ ವಿರುದ್ಧದ ಕ್ರಿಮಿನಲ್‌ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಈ ಕುರಿತಂತೆ ಶಿವಾನಂದ ನಗರದ ಆದಿತ್ಯ ಸ್ವಾಯೆ ಅಪಾರ್ಟ್‌ಮೆಂಟ್‌ನ ಎಕ್ಸಿಕ್ಯುಟಿವ್‌ ಬ್ಲಾಕ್‌ನಲ್ಲಿ ವಾಸವಿರುವ 37 ವರ್ಷದ ರಿಚಾ ಸಿಂಗ್‌ ಚಿತ್ರಾಂಶಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ನೆಲಮಾಳಿಗೆಯಲ್ಲಿ ನಿಲ್ಲಿಸಲಾದ ವಾಹನದ ಮೇಲೆ ರಿಚಾ ಸಿಂಗ್ ಆ್ಯಸಿಡ್‌ ಎರಚಿದ್ದಾರೆ ಎಂಬುದು ಪ್ರಶ್ನಾರ್ಹವಾಗಿದೆ. ತನಿಖೆಯಲ್ಲಿ ದೂರನ್ನು ಪುಷ್ಟೀಕರಿಸುವ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ. ಕೇವಲ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಮತ್ತು ದೂರುದಾರರ ಫಿರ್ಯಾದು ಅನುಸರಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದ್ದರಿಂದ, ಮೆಯೊಹಾಲ್‌ನ 43ನೇ ಎಸಿಸಿಎಂ ಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ರದ್ದುಗೊಳಿಸಲಾಗಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?: ಜಗದೀಶ್ ನಗರದಲ್ಲಿರುವ ಶಿವಾನಂದ ನಗರದ ಆದಿತ್ಯಸ್ವಾಯೆ ಅಪಾರ್ಟ್‌ಮೆಂಟ್‌ನ ಎಕ್ಸಿಕ್ಯುಟಿವ್‌ ಬ್ಲಾಕ್‌ನ 306ನೇ ಸಂಖ್ಯೆಯ ಫ್ಲ್ಯಾಟ್‌ನಲ್ಲಿ ರಿಚಾ ಸಿಂಗ್‌ ಚಿತ್ರಾಂಶಿ ವಾಸವಿದ್ದಾರೆ. ಇವರ ವಿರುದ್ಧ ಇದೇ ಅಪಾರ್ಟ್‌ಮೆಂಟ್‌ನಿವಾಸಿಗಳ ಸಂಘದ ಅಧ್ಯಕ್ಷರಾದ ಸಂತೋಷಿ ಪ್ರಸಾದ್‌ ಪೊಲೀಸರಿಗೆ ದೂರು ನೀಡಿದ್ದರು. ‘ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ನನ್ನ ವಾಹನದ ಮೇಲೆ ಆ್ಯಸಿಡ್ ಎರಚಿ ಹಾನಿಗೊಳಿಸಿದ್ದಾರೆ’ ಎಂದು ಆರೋಪಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮಾರತ್‌ಹಳ್ಳಿ ಉಪ ವಿಭಾಗದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ರಿಚಾ ಸಿಂಗ್ ಅವರಿಗೆ ಸಮನ್ಸ್‌ ಜಾರಿ
ಗೊಳಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಿಚಾ ಸಿಂಗ್ ಹೈಕೋರ್ಟ್‌ ಮೆಟ್ಟಿಲೇರಿದ್ದರು. ರಿಚಾ ಸಿಂಗ್ ಪರ ವಕೀಲೆ ಸುಮಂಗಲಾ ಐ. ಗಚ್ಚಿನಮಠ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT