ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರ ಜಾಹೀರಾತು ನಿಯಮ: ಹಳೇ ಬೈಲಾ ತಿರಸ್ಕರಿಸಿದ ಸರ್ಕಾರ

ಕ್ರಮ ಸಮರ್ಥಿಸಿಕೊಂಡ ನಗರಾಭಿವೃದ್ಧಿ ಇಲಾಖೆ
Last Updated 31 ಜುಲೈ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ 2018ರಲ್ಲಿ ರೂಪಿಸಿದ್ದ ಜಾಹೀರಾತು ಬೈಲಾವನ್ನೇ ಜಾರಿಗೊಳಿಸಬೇಕು. ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ‘ಜಾಹೀರಾತು ನಿಯಮಗಳು 2019’ ಅನ್ನು ಕೈಬಿಡಬೇಕು’ ಎಂದು ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಬಿಜೆಪಿ ಸದಸ್ಯರು ಒತ್ತಾಯಿಸುತ್ತಿದ್ದರೆ, ಇತ್ತ ಹೊಸ ಸರ್ಕಾರ ಅವರ ಬೇಡಿಕೆಗೆ ವ್ಯತಿರಿಕ್ತವಾದ ತೀರ್ಮಾನ ಕೈಗೊಂಡಿದೆ.

2018ರಲ್ಲಿ ಬಿಬಿಎಂಪಿ ರೂಪಿಸಿದ್ದ ‘ಹೊರಾಂಗಣ ಜಾಹೀರಾತು ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ಬೈಲಾ’ವನ್ನು ತಿರಸ್ಕರಿಸಿ ನಗರಾಭಿವೃದ್ಧಿ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಇದರೊಂದಿಗೆ ಜಾಹೀರಾತು ಬೈಲಾ ಸಂಬಂಧ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ.

‘ಜಾಹೀರಾತು ನಿಯಮಗಳು 2019’ರ ಕರಡನ್ನು ರೂಪಿಸಿ ಜು. 15ರಂದು ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಜು. 24ರಂದು ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕಳುಹಿಸಿದ್ದ 2018ರ ಜಾಹೀರಾತು ಬೈಲಾ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ. ಹಾಗೂ ಜು.15ರ ಅಧಿಸೂಚನೆ ಪ್ರಕಾರ ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್‌. ಅನಿಲ್‌ ಕುಮಾರ್‌ ಅವರು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.

ಅಡ್ವೊಕೇಟ್‌ ಜನರಲ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು, ಬಿಡಿಎ ಆಯುಕ್ತರು, ಬಿಬಿಎಂಪಿ ಆಯುಕ್ತರು, ಬಿಬಿಎಂಪಿ ಕಾನೂನು ಕೋಶದ ಮುಖ್ಯಸ್ಥರು ಉಪಸ್ಥಿತರಿದ್ದ ಸಭೆಗಳಲ್ಲಿ ಈ ಬಗ್ಗೆ ಚರ್ಚಿಸಿಯೇ 2019ರ ಜಾಹೀರಾತು ನಿಯಮಗಳನ್ನು ರೂಪಿಸಲಾಗಿದೆ ಎಂದು ನಗರಭಿವೃದ್ಧಿ ಇಲಾಖೆ ಸಮರ್ಥಿಸಿಕೊಂಡಿದೆ.

ಸೋಮವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ, ‘2018ರ ಜಾಹೀರಾತು ಬೈಲಾವನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು. ತಿರಸ್ಕರಿಸಿದ್ದೇ ಆದರೆ ಇದು ಪಾಲಿಕೆ ಕೌನ್ಸಿಲ್‌ಗೆ ಮಾಡುವ ಅವಮಾನ’ ಎಂದು ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದ್ದರು. 2019ರ ಜಾಹೀರಾತು ನಿಯಮಗಳನ್ನು ತಿರಸ್ಕರಿಸಿ ನಿರ್ಣಯ ಕೈಗೊಳ್ಳಬೇಕು ಎಂಬ ಒಕ್ಕೊರಲ ಒತ್ತಾಯವೂ ವ್ಯಕ್ತವಾಗಿತ್ತು. ಈ ಕುರಿತು ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲೂ ಚರ್ಚೆ ನಡೆದಿತ್ತು. ನಿರ್ಣಯದ ಪ್ರತಿಯೂ ಸಿದ್ಧವಾಗಿತ್ತು. ಆದರೆ, ನಿರ್ಣಯ ಕೈಗೊಳ್ಳುವ ಮುನ್ನ ಇನ್ನಷ್ಟು ಚರ್ಚೆ ನಡೆಯುವ ಅಗತ್ಯವಿದೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಒತ್ತಾಯಿಸಿದ್ದರು. ಹಾಗಾಗಿ ಈ ಬಗ್ಗೆ ಪಾಲಿಕೆ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ.

2018ರ ಬೈಲಾ ತಿರಸ್ಕರಿಸಿರುವ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ 2018ರ ಬೈಲಾವನ್ನು ಈಗಿನ ಸರ್ಕಾರ ತಿರಸ್ಕರಿಸಿದ್ದರೆ ಅದು ಸರಿಯಲ್ಲ’ ಎಂದರು.

ಹೊಸ ಜಾಹೀರಾತು ನಿಯಮಗಳ ಕರಡಿಗೆ ಕೌನ್ಸಿಲ್‌ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಸದಸ್ಯ ಮಂಜುನಾಥ ರಾಜು, ‘ಮುಖ್ಯಮಂತ್ರಿಯವರ ಗಮನಕ್ಕೆ ತಾರದೆಯೇ ನಗರಾಭಿವೃದ್ಧಿ ಇಲಾಖೆ ಈ ನಿರ್ಣಯ ಕೈಗೊಂಡಿರುವ ಸಾಧ್ಯತೆ ಇದೆ. ಅವರಿಗೆ ಪರಿಸ್ಥಿತಿ ಮನವರಿಕೆ ಮಾಡಿ 2018ರ ಬೈಲಾವನ್ನೇ ಜಾರಿಗೊಳಿಸುವಂತೆ ಒತ್ತಾಯಿಸುತ್ತೇವೆ’ ಎಂದರು.

ವಕೀಲ ಶ್ರೀನಿಧಿ ಕೈಬಿಡಲು ನಿರ್ದೇಶನ
‘ಬಿಬಿಎಂಪಿ ಪರ ವಕೀಲರಾದ ಶ್ರೀನಿಧಿಯವರು ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳಿಗೆ ವಿರುದ್ಧವಾಗಿಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಈ ಮೂಲಕ ಅವರು ಸರ್ಕಾರ ಹಲವಾರು ಬಾರಿ ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದಾರೆ. ಹಾಗಾಗಿ ಅವರನ್ನು ಬಿಬಿಎಂಪಿ ವಕೀಲರ ತಂಡದಿಂದ ಕೈಬಿಡಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT