ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿಗಳಿಗೆ, ಮೋಟಾರುರಹಿತ ಸಾರಿಗೆಗೆ ಮಣೆ

ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕರಡು ಮಸೂದೆ ಸಿದ್ಧಪಡಿಸಿದ ಡಲ್ಟ್‌ l ಸಲಹೆ ನೀಡಲು ಜ.31ರವರೆಗೆ ಕಾಲಾವಕಾಶ
Last Updated 29 ಡಿಸೆಂಬರ್ 2021, 19:56 IST
ಅಕ್ಷರ ಗಾತ್ರ

ಬೆಂಗಳೂರು: ಮಹಾನಗರಗಳ ಸಾರಿಗೆ ವ್ಯವಸ್ಥೆಯಲ್ಲಿ ಪಾದಚಾರಿಗಳಿಗೆ ಹಾಗೂ ಸೈಕಲ್‌ನಂತಹ ಮೋಟಾರುರಹಿತ ಸಾರಿಗೆ ಬಳಸುವವರಿಗೆ ಪ್ರಾಧಾನ್ಯತೆ ಕಲ್ಪಿಸುವ ಉದ್ದೇಶದಿಂದ ನಗರ ಭೂಸಾರಿಗೆ ನಿರ್ದೇಶನಾಲಯವು (ಡಲ್ಟ್‌) ಕರಡು ಮಸೂದೆಯೊಂದನ್ನು (ಆ್ಯಕ್ಟಿವ್‌ ಮೊಬಿಲಿಟಿ ಬಿಲ್‌) ಸಿದ್ಧಪಡಿಸಿದೆ.

ಈ ಕರಡು ಮಸೂದೆಯ ಪ್ರಕಾರ, ಇದು ಕಾಯ್ದೆಯಾಗಿ ಜಾರಿಯಾಗುವ ಎರಡು ವರ್ಷಗಳ ಒಳಗೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ‘ಸಮಗ್ರ ಸಂಚಾರ ಯೋಜನೆ’ಯನ್ನು ಸಿದ್ಧಪಡಿಸುವುದು ಹಾಗೂ ಅದನ್ನು ನಗರ ಮಹಾಯೋಜನೆಯಲ್ಲೇ ಅಳವಡಿಸಿಕೊಳ್ಳುವುದು ಕಡ್ಡಾಯವಾಗಲಿದೆ. ನಗರಗಳಲ್ಲಿ ಜನರು ಅಲ್ಪ ದೂರದ ಪ್ರಯಾಣಕ್ಕೆ ನಡೆದೇ ಸಾಗುವುದನ್ನು ಹಾಗೂ ಸೈಕಲ್‌ ಬಳಕೆಯನ್ನು ಉತ್ತೇಜಿಸಲು ಅಗತ್ಯ ಇರುವ ಮೂಲಸೌಕರ್ಯ ಕಲ್ಪಿಸುವುದಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪೂರಕವಾಗಿ ಜನರು ಕೊನೆಯ ತಾಣವನ್ನು ತಲುಪುವುದಕ್ಕೂ (ಲಾಸ್ಟ್‌ಮೈಲ್‌ ಕನೆಕ್ಟಿವಿಟಿ) ಅಗತ್ಯ ಸೌಕರ್ಯ ಒದಗಿಸಬೇಕಾಗುತ್ತದೆ.

ಮಸೂದೆಯಲ್ಲೇನಿದೆ?: ಇನ್ನು ಮುಂದೆ ಪರಿಪೂರ್ಣವಾದ ಹಾಗೂ ಪರಸ್ಪರ ಸಂಪರ್ಕ ಇರುವ ರೀತಿಯಲ್ಲಿ ಬೀದಿಗಳನ್ನು ವಿನ್ಯಾಸಗೊಳಿಸುವುದು, ನಿರ್ಮಿಸುವುದು ಹಾಗೂ ನಿರ್ವಹಣೆ ಮಾಡುವುದು ಆಯಾ ನಗರ ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಸಾಕಷ್ಟು ಅಗಲವಾಗಿರುವ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು, ಸೈಕಲ್‌ ಸವಾರರಿಗಾಗಿ ಪ್ರತ್ಯೇಕ ಪಥ ನಿರ್ಮಿಸುವುದು, ನಡಿಗೆ ಹಾಗೂ ಸೈಕಲ್‌ ಬಳಕೆ ಎರಡಕ್ಕೂ ಅವಕಾಶ ಇರುವಂತೆ ನಗರ ಸ್ಥಳೀಯ ಸಂಸ್ಥೆಗಳು ಮೂಲಸೌಕರ್ಯ ಕಲ್ಪಿಸಬೇಕಾಗುತ್ತದೆ.

ನಗರದ ಬೀದಿಗಳನ್ನು ವಿನ್ಯಾಸಗೊಳಿಸುವಾಗ ವಾಹನಗಳಿಗೆ ಅನುಕೂಲ ಕಲ್ಪಿಸುವುದಕ್ಕಿಂತಲೂ ಹೆಚ್ಚಾಗಿ ಅದು ಎಲ್ಲ ವಯೋಮಾನದ, ಭಿನ್ನ ಸಾಮರ್ಥ್ಯಗಳ ಜನರ ಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕು. ಪಾದಚಾರಿ ಮಾರ್ಗಕ್ಕೆ, ಸೈಕಲ್‌ ಪಥಗಳಿಗೆ ಹಾಗೂ ಅವಕಾಶ ಇರುವಲ್ಲೆಲ್ಲ ಸಾರ್ವಜನಿಕ ಸಾರಿಗೆಗೆ ಸಾಕಷ್ಟು ಸ್ಥಳಾವಕಾಶ ಕಲ್ಪಿಸಿ ನಂತರವಷ್ಟೇ ಖಾಸಗಿ ವಾಹನಗಳಿಗೆ ಎಷ್ಟು ಅಗಲದ ಮಾರ್ಗವನ್ನು ಉಳಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕು. ನಡೆದು ಹೋಗುವವರಿಗೆ ಹಾಗೂ ಸೈಕಲ್‌ ಬಳಸುವವರಿಗೆ ಆದ್ಯತೆ ಸಿಗಬೇಕು.

ಸಾರಿಗೆ ವ್ಯವಸ್ಥೆಯಲ್ಲಿ ತಪ್ಪಿಹೋದ ಕೊಂಡಿಗಳನ್ನು ಮತ್ತೆ ಸಂಪರ್ಕಿಸುವುದಕ್ಕೆ ಆದ್ಯತೆ ಸಿಗಬೇಕು. ಪಾದಚಾರಿ ಮಾರ್ಗ, ಸೈಕಲ್‌ ಪಥಗಳ ಕೊರತೆ ಇರುವುದನ್ನು ನಗರ ಸ್ಥಳೀಯ ಸಂಸ್ಥೆಗಳೇ ಗುರುತಿಸಿ ಸ್ಥಳೀಯ ಯೋಜನಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಅವುಗಳು ಈ ಸೌಕರ್ಯಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು. ಉದ್ಯಾನಗಳಲ್ಲಿ, ಕೆರೆ ದಂಡೆಗಳಲ್ಲಿ, ನಡಿಗೆ ಪಥ ಹಾಗೂ ಸೈಕ್ಲಿಂಗ್‌ ಪಥಗಳನ್ನು ನಿರ್ಮಿಸಬೇಕು.

ಈಗಿರುವ ಹಾಗೂ ಹೊಸ ಬಡಾವಣೆಗಳಲ್ಲಿ ಹೊಸ ಬೀದಿಗಳ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಪಾದಚಾರಿ ಮಾರ್ಗಗಳಿಗೆ, ಸೈಕಲ್‌ ಪಥಗಳಿಗೆ ಪ್ರಾಧಾನ್ಯತೆ ಸಿಗುವಂತೆ ಹಾಗೂ ಅವುಗಳು ಪಾದಚಾರಿ ಮಾರ್ಗಗಳ, ಸೈಕಲ್‌ ಪಥಗಳ ವಿಸ್ತೃತ ಜಾಲಕ್ಕೆ ಜೋಡಣೆ ಆಗಿರುವಂತೆ ನೋಡಿಕೊಳ್ಳಬೇಕು.

ಸಂಚಾರ ಆಧಾರಿತ ಅಭಿವೃದ್ಧಿ ವಲಯಗಳನ್ನು ಗುರುತಿಸಿ ಅವುಗಳಿಗೆ ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಮಂಜೂರಾತಿ ಪಡೆಯಲಾಗಿದ್ದರೆ, ಅದಕ್ಕೆ ಪೂರಕವಾಗಿ ಸಂಚಾರ ಕೇಂದ್ರಗಳ ಸುತ್ತಮುತ್ತ ಪಾದಚಾರಿ ಮಾರ್ಗ ಹಾಗೂ ಸೈಕಲ್‌ ಪಥಗಳನ್ನು ಅಭಿವೃದ್ಧಿಪಡಿಸಬೇಕು.

ಒಟ್ಟು 26 ಪುಟಗಳ ಈ ಮಸೂದೆಯು ಒಟ್ಟು 55 ಸೆಕ್ಷನ್‌ಗಳನ್ನು ಒಳಗೊಂಡಿದೆ.

‘ಜನಸ್ನೇಹಿ ಮಸೂದೆ ಶೀಘ್ರ ಜಾರಿಯಾಗಲಿ’

‘ಸಂಚಾರ ಮೂಲಸೌಕರ್ಯ ಸುಧಾರಣೆಗಾಗಿ ಡಲ್ಟ್‌ ಸಿದ್ಧಪಡಿಸಿರುವ ಮಸೂದೆಯೂ ನಿಜಕ್ಕೂ ಜನಸ್ನೇಹಿಯಾಗಿದೆ. ಪ್ರಸ್ತುತ ವಾಹನಗಳನ್ನೇ ಕೇಂದ್ರವಾಗಿಟ್ಟುಕೊಂಡು ರಸ್ತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ತಪ್ಪು. ಸಾರಿಗೆ ವ್ಯವಸ್ಥೆಯಲ್ಲಿ ಪಾದಚಾರಿಗಳಿಗೆ ಹಾಗೂ ಸೈಕಲ್‌ ಬಳಸುವವರಿಗೆ ಹೆಚ್ಚು ಪ್ರಾಧಾನ್ಯ ಸಿಗಲೇಬೇಕು. ಪರಿಸರ ಸಂರಕ್ಷಣೆಯ ಮತ್ತು ಹವಾಮಾನ ವೈಪರೀತ್ಯದ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿ ನಿಲ್ಲಬೇಕಾದರೆ ಮೋಟಾರುರಹಿತ ಸಾರಿಗೆಯ ಮೊರೆ ಹೋಗುವುದು ಅನಿವಾರ್ಯ. ಹಾಗಾಗಿ ಸರ್ಕಾರ ಈ ಮಸೂದೆಯನ್ನು ಶೀಘ್ರವೇ ಜಾರಿಗೆ ತರಬೇಕು’ ಎಂದು ಜನಾಗ್ರಹ ಸಂಸ್ಥೆಯ ಸಾರ್ವಜನಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಅಲವಿಲ್ಲಿ ಅಭಿಪ್ರಾಯಪಟ್ಟರು.

‘ಸುಸ್ಥಿರ ಅಭಿವೃದ್ಧಿಗೆ ಪೂರಕ’

‘ರಾಜ್ಯದ ನಗರ ಸಾರಿಗೆ ವ್ಯವಸ್ಥೆಯಲ್ಲಿ ಪಾದಚಾರಿಗಳು ಹಾಗೂ ಸೈಕಲ್‌ ಬಳಸುವವರು ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ. ಅಪಘಾತಕ್ಕೆ ಒಳಗಾಗುವವರಲ್ಲೂ ಅವರೇ ಹೆಚ್ಚು. ನಡೆದು ಸಾಗುವುದು ಹಾಗೂ ಸೈಕಲ್‌ ಬಳಕೆಯಿಂದ ಜನರ ಆರೋಗ್ಯ ಸುಧಾರಣೆ ಆಗುವುದಷ್ಟೇ ಅಲ್ಲ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದಕ್ಕೂ ನೆರವಾಗಲಿದೆ. ಈ ಮಸೂದೆಯು ಕಡಿಮೆ ವರಮಾನ ಹೊಂದಿರುವ ವರ್ಗದ ಜನರಿಗೂ ಸಾರಿಗೆ ವ್ಯವಸ್ಥೆಯಲ್ಲಿ ಸಮಪಾಲು ಕಲ್ಪಿಸಲಿದೆ. ಇಂತಹ ರಸ್ತೆ ಬಳಕೆದಾರರ ಹಕ್ಕನ್ನು ಕಾಪಾಡುವ ಮೂಲಕ ಸುಸ್ಥಿರ ಅಭಿವೃದ್ಧಿಗೂ ಈ ಮಸೂದೆ ಪೂರಕವಾಗಲಿದೆ’ ಎಂದು ಮಸೂದೆಯ ಕರಡಿನ ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

****

ಸಂಚಾರ ವ್ಯವಸ್ಥೆಯ ಸುಧಾರಣೆಗಾಗಿ ಈ ಮಸೂದೆ ಸಿದ್ಧಪಡಿಸಿದ್ದೇವೆ. ಈ ಕರಡು ಮಸೂದೆಗೆ ಸಲಹೆ ಸೂಚನೆ ನೀಡಲು 2022 ಜ.31ರವರೆಗೆ ಕಾಲಾವಕಾಶ ಕಲ್ಪಿಸಿದ್ದೇವೆ.
ವಿ.ಮಂಜುಳಾ, ಆಯುಕ್ತರು, ಡಲ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT