ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬೆರಕೆ ಬೀಜ: ರೈತನಿಗೆ ₹ 93,219

ರಾಜ್ಯ ಬೀಜ ನಿಗಮಕ್ಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಿಂದ ಆದೇಶ
Last Updated 21 ಜನವರಿ 2020, 22:01 IST
ಅಕ್ಷರ ಗಾತ್ರ

ಬೆಂಗಳೂರು: ಕಲಬೆರಕೆ ಬೀಜ ವಿತರಿಸಿದ ಕಾರಣಕ್ಕೆ ನಷ್ಟ ಅನುಭವಿಸಿದ ರೈತನಿಗೆ ₹ 93,219 ನಷ್ಟ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ದೂರುದಾರ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಬೆಳಗುಂಬ ಕಸಬಾ ಹೋಬಳಿಯ ನರಸೇಗೌಡ (57) ಅವರಿಗೆ ಬೆಳೆ ನಷ್ಟ ₹ 78,219, ಮಾನಸಿಕ ಹಾಗೂ ದೈಹಿಕ ತೊಂದರೆಗೆ ₹ 10 ಸಾವಿರ, ವ್ಯಾಜ್ಯದ ಖರ್ಚು ₹ 5 ಸಾವಿರ ಸೇರಿ ಒಟ್ಟು ₹ 93,219 ಹಣವನ್ನು ಆರು ವಾರದ ಒಳಗೆ ನೀಡುವಂತೆ ಆದೇಶದಲ್ಲಿ ತಿಳಿಸಿದೆ.

ಏನಿದು ದೂರು: ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ₹ 500 ಪಾವತಿಸಿ ತಂದಿದ್ದ 25 ಕೆ.ಜಿ ‘ಎಂ.ಆರ್‌. 6’ ತಳಿಯ ರಾಗಿ ಬೀಜವನ್ನು ನರಸೇಗೌಡ ಅವರು ತಮ್ಮ 2.36 ಎಕರೆ ಖುಷ್ಕಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಕಟಾವು ಸಂದರ್ಭದಲ್ಲಿ ಶೇ 40ರಿಂದ 50ರಷ್ಟು ಕಲಬೆರಕೆ ತಾಕುಗಳು ಪತ್ತೆಯಾಗಿದ್ದವು. ಬೀಜ ಕಲಬೆರಕೆಯಿಂದ ಕೂಡಿದ ಕಾರಣಕ್ಕೆ ರಾಗಿ ವಿವಿಧ ಹಂತಗಳಲ್ಲಿ ಹೂ ಬಿಟ್ಟಿದೆ. ಹೀಗಾಗಿ, ಏಕಕಾಲಕ್ಕೆ ಕಟಾವು ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿಜ್ಞಾನಿಗಳು ಪರಿಶೀಲನಾ ವರದಿ ನೀಡಿದ್ದರು.

‘ನನ್ನ ಜಮೀನಿನಲ್ಲಿ ವಾರ್ಷಿಕ 45 ಕ್ವಿಂಟಲ್‌ ರಾಗಿ ಬೆಳೆಯುತ್ತಿದ್ದು, ಕಲಬೆರಕೆ ಬೀಜದಿಂದ ಕೇವಲ 18 ಕ್ವಿಂಟಲ್‌ ಇಳುವರಿ ಬಂದಿದೆ. 27 ಕ್ವಿಂಟಲ್‌ ನಷ್ಟವಾಗಿದೆ. ‌ಕನಿಷ್ಠ ಬೆಂಬಲ ಬೆಲೆ ಯೋಜನೆ (2018-19) ಪ್ರಕಾರ 27 ಕ್ವಿಂಟಲ್‌ಗೆ ₹ 78,219 ನಷ್ಟವಾಗಿದೆ. ಜೊತೆಗೆ ಮಾನಸಿಕ, ದೈಹಿಕ ತೊಂದರೆ, ಪ್ರಕರಣ ದಾಖಲಿಸಲು ತಗಲಿದ ವೆಚ್ಚ‌ವನ್ನು ಭರಿಸಿಕೊಡಬೇಕು’ ಎಂದು ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ನರಸೇಗೌಡ ದೂರು ನೀಡಿದ್ದರು.

ದಾಖಲೆಗಳು ಮತ್ತು ಸಾಕ್ಷ್ಯ ಪರಿಶೀಲಿಸಿದ ವೇದಿಕೆ, ನಿಗಮದಿಂದ ಖರೀದಿ ಮಾಡಿದ ರಾಗಿ ತಳಿಯಲ್ಲಿ ಶೇ 20ರಿಂದ 30ರಷ್ಟು ಕಲಬೆರಕೆ ಬೀಜಗಳು ಇತ್ತು ಎನ್ನುವುದನ್ನು ದೃಢಪಡಿಸಿತ್ತು. ಆದ್ದರಿಂದ, ‘ಈ ದೂರುದಾರರಷ್ಟೇ ಅಲ್ಲದೆ, ಕಲಬೆರಕೆ ಬೀಜ ಪಡೆದವರೂ ಪರಿಹಾರಕ್ಕೆ ಅರ್ಹರಾಗುತ್ತಾರೆ. ಅಂಥವರಿಗೂ ನ್ಯಾಯ ಹಾಗೂ ಮಾನವೀಯ ದೃಷ್ಟಿಯಿಂದ ಈ ತೀರ್ಪಿನಲ್ಲಿ ಉಲ್ಲೇಖಿಸಿದ ಮಾನದಂಡ ಆಧಾರವಾಗಿಟ್ಟು ಪರಿಹಾರ ನೀಡಬೇಕು’ ಎಂದು ವೇದಿಕೆ ಆದೇಶ ನೀಡಿದೆ.

ಈ ದೂರನ್ನು ವೇದಿಕೆಯ ಅಧ್ಯಕ್ಷ ಎಸ್‌.ಎಲ್‌. ಪಾಟೀಲ, ಸದಸ್ಯರಾದ ಪಿ.ಕೆ. ಶಾಂತ ಇತ್ಯರ್ಥಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT