ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಏರಿಯೇಟರ್‌ ನಾಳೆಯಿಂದ ಕಡ್ಡಾಯ

Published 19 ಮಾರ್ಚ್ 2024, 22:30 IST
Last Updated 19 ಮಾರ್ಚ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌, ಐಷಾರಾಮಿ ಹೋಟೆಲ್ ಮತ್ತು ರೆಸ್ಟೊರೆಂಟ್‌, ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

ಬೆಂಗಳೂರು ನಗರ ಪ್ಲಂಬರ್‌ ಅಸೋಸಿಯೇಷನ್‌ ಪದಾಧಿಕಾರಿಗಳೊಂದಿಗೆ ಮಂಗಳವಾರ ಸಭೆಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.

‘ನಲ್ಲಿಗಳಲ್ಲಿ ಏರಿಯೇಟರ್‌ ಅಳವಡಿಸುವುದರಿಂದ ಶೇ 60ರಿಂದ 85ರಷ್ಟು ನೀರಿನ ಉಳಿತಾಯ ಸಾಧ್ಯ. ಕೋವಿಡ್‌ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಿಸಿದಂತೆ ‘ವಾಟರ್‌ ಟ್ಯಾಪ್ ಮಾಸ್ಕ್‌’ಗಳನ್ನು ಬಳಸುವುದು ಅಗತ್ಯವಾಗಿದೆ. ಮಾರ್ಚ್‌ 21ರಿಂದ ಮಾರ್ಚ್‌ 31ರವರೆಗೆ ಸ್ವಯಂ ಪ್ರೇರಿತರಾಗಿ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸಿಕೊಳ್ಳಬೇಕು. ನಂತರದ ದಿನಗಳಲ್ಲಿ ದಂಡ ವಿಧಿಸಲಾಗುವುದು’ ಎಂದು ಹೇಳಿದರು.

ಮನೆಯಲ್ಲಿ ಕೈತೊಳೆಯುವ, ಪಾತ್ರೆ ತೊಳೆಯುವ, ಶವರ್, ವಾಷ್ ಬೇಸಿನ್ ನಲ್ಲಿಗಳು ಸೇರಿದಂತೆ ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವ ಕಡೆಗಳಲ್ಲಿ ಸಾರ್ವಜನಿಕರು ಏರಿಯೇಟರ್‌ಗಳನ್ನು ಅಳವಡಿಸಿಕೊಳ್ಳಬೇಕು. ಈ ಉಪಕರಣ ಮಾರುಕಟ್ಟೆಯಲ್ಲಿ ₹60ನಿಂದ ಲಭ್ಯವಿದೆ. ಇದರಿಂದ ಜನರ ಮನೆಯಲ್ಲಿ ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಹಾಗೆಯೇ, ನೀರಿನ ಬಿಲ್‌ ಕೂಡ ಕಡಿಮೆ ಆಗುತ್ತದೆ ಎಂದರು.

ಪ್ಲಂಬರ್‌ಗಳಿಗೆ ಪ್ರಶಂಸಾ ಪತ್ರ: ‘ಜಲಮಂಡಳಿಯಿಂದ ಪರವಾನಗಿ ಹೊಂದಿರುವಂತಹ 1,500 ಪ್ಲಂಬರ್‌ಗಳಿದ್ದಾರೆ. ಇವರೆಲ್ಲ, ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸುವುದರ ಬಗ್ಗೆ ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಏರಿಯೇಟರ್‌ಗಳನ್ನು ಅಳವಡಿಸುವ ಪ್ಲಂಬರ್‌ಗಳನ್ನು  ಪ್ರೋತ್ಸಾಹಿಸಿ, ಪ್ರಶಂಸಾಪತ್ರ ನೀಡಲಾಗುತ್ತದೆ’ ಎಂದು ಸಭೆಯಲ್ಲಿ ರಾಮ್‌ಪ್ರಸಾತ್‌ ಮನೋಹರ್ ತಿಳಿಸಿದರು.

‘ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಏರಿಯೇಟರ್‌ ಅಳವಡಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಜಲಮಂಡಳಿಯ ಇತರೆ ಕಚೇರಿಗಳಲ್ಲಿ ಎರಡು ದಿನದಲ್ಲಿ ಏರಿಯೇಟರ್‌ ಅಳವಡಿಸಲು ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT