ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ‘ಹೈಬ್ರೀಡ್‌’ ಏರೋ ಇಂಡಿಯಾ!

ಪ್ರಗತಿ ಪರಿಶೀಲನೆ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌
Last Updated 15 ಜನವರಿ 2021, 20:29 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವದ ಮೊದಲ ‘ಹೈಬ್ರೀಡ್‌’ ವೈಮಾನಿಕ ಮತ್ತು ರಕ್ಷಣಾ ಉಪಕರಣಗಳ ಪ್ರದರ್ಶನವನ್ನು ಒಳಗೊಂಡ 13ನೇ ‘ಏರೋ ಇಂಡಿಯಾ–21’ ಯಶಸ್ಸಿಗಾಗಿ ಸಿದ್ಧತೆ ನಡೆದಿದೆ. ಕೋವಿಡ್‌ ನಿಯಂತ್ರಣಕ್ಕಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ಫೆಬ್ರುವರಿ 3 ರಿಂದ 5 ವರೆಗೆ ಏರೋ ಇಂಡಿಯಾ ನಡೆಯಲಿದ್ದು,ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಇದರ ಪೂರ್ವಭಾವಿ ಸಿದ್ಧತೆಯ ಅಪೆಕ್ಸ್‌ ಸಮಿತಿ ಸಭೆ ನಡೆಯಿತು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ’ಏರೋ ಇಂಡಿಯಾದ ಸಿದ್ಧತೆ ಪ್ರಗತಿ ಪರಿಶೀಲನೆ ತೃಪ್ತಿಕರವಾಗಿದೆ. ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ, ವಿದೇಶಗಳ ಭಾಗವಹಿಸುವಿಕೆ ಸೇರಿದಂತೆ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿವೆ. ಏರೋ ಶೋ ನಡೆಸಲು ಬೆಂಗಳೂರಿನಷ್ಟು ಉತ್ತಮ ವ್ಯವಸ್ಥೆಯನ್ನು ಬೇರೆ ನಗರಗಳು ಹೊಂದಿಲ್ಲ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೈಮಾನಿಕ, ರಕ್ಷಣಾ ಕ್ಷೇತ್ರ ಮತ್ತು ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದ ಪ್ರಮುಖ ಕೈಗಾರಿಕೆಗಳು ಬೆಂಗಳೂರು ಮತ್ತು ಕರ್ನಾಟಕದ ಇತರ ನಗರಗಳಲ್ಲಿ ಕೇಂದ್ರೀಕೃತವಾಗಿವೆ. ಇದರಿಂದ ವೈಮಾನಿಕ ಮತ್ತು ಬಾಹ್ಯಾಕಾಶ ಕ್ಷೇತ್ರಗಳು ಇನ್ನಷ್ಟು ಎತ್ತರಕ್ಕೆ ಏರಲು ಸಾಧ್ಯ ಎಂದು ರಾಜನಾಥಸಿಂಗ್ ಅಭಿಪ್ರಾಯಪಟ್ಟರು.

ಕಳೆದ ಬಾರಿ ಬೆಂಕಿ ಅವಘಡ ಆಗಿತ್ತು, ಈ ಬಾರಿ ಮರುಕಳಿಸದಂತೆ ಎಲ್ಲ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗಿದೆ ಎಂದೂ ಹೇಳಿದರು.

ಕೋವಿಡ್‌ನಿಂದಾಗಿ ಈ ಬಾರಿಯ ಏರೋ ಇಂಡಿಯಾ ಹೈಬ್ರೀಡ್‌ ಮಾದರಿಯದ್ದಾಗಿದೆ. ಭೌತಿಕವಾಗಿ ಮತ್ತು ವರ್ಚುವಲ್‌ ಆಗಿಯೂ ನಡೆಯುತ್ತದೆ. ವ್ಯವಹಾರ ಚಟುವಟಿಕೆಗಳೂ ಇದೇ ರೀತಿಯಲ್ಲಿ ನಡೆಯುತ್ತದೆ. ಅಂತರರಾಷ್ಟ್ರೀಯ ಮಟ್ಟದ ಪ್ರದರ್ಶನವೊಂದು ಈ ಮಾದರಿಯಲ್ಲಿ ನಡೆಯುತ್ತಿರುವುದು ವಿಶ್ವದಲ್ಲಿ ಇದೇ ಮೊದಲು. ಈ ಪರಂಪರೆಯನ್ನು ಇತರ ದೇಶಗಳೂ ಅನುಸರಿಸಬಹುದು ಎಂದು ಅವರು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ , ಏರೋ ಇಂಡಿಯಾ ರಾಜ್ಯದ ಹೆಮ್ಮೆಯ ಸಂಕೇತವಾಗಿದೆ, ಇದಕ್ಕೆ ಪೂರಕವಾಗಿ ರಸ್ತೆ ಅಭಿವೃದ್ಧಿ, ಮೂಲ ಸೌಕರ್ಯಗಳು, ಭದ್ರತೆ, ಅಗ್ನಿಶಾಮಕ ವ್ಯವಸ್ಥೆ, ಆರೋಗ್ಯ ಸೇವೆ, ಮಾನವ ಸಂಪನ್ಮೂಲ ವ್ಯವಸ್ಥೆಗಾಗಿ ರಾಜ್ಯ ಸರ್ಕಾರ ₹30 ಕೋಟಿ ವೆಚ್ಚ ಮಾಡಲಿದೆ ಎಂದರು.

ರಾಜ್ಯವು ವೈಮಾನಿಕ, ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಇದಕ್ಕೆ ಸಂಬಂಧಿಸಿದ ಉದ್ಯಮಗಳಿಗೆ ಪೂರಕ ವಾತಾವರಣ ಇದೆ. ಇವುಗಳಿಗೆ ಇನ್ನಷ್ಟು ಉತ್ತೇಜನ ನೀಡಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.

576 ಪ್ರದರ್ಶಕರು: ಈ ಬಾರಿ 576 ಪ್ರದರ್ಶಕರು ಮತ್ತು 35 ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ನೋಂದಣಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT