ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಹಂಕದಲ್ಲೇ ಏರೋ ಇಂಡಿಯಾ: ರಾಜ್ಯ ಸರ್ಕಾರದಿಂದ ಸಿದ್ಧತೆ ಆರಂಭ

2023ನೇ ಸಾಲಿನ ವೈಮಾನಿಕ ಪ್ರದರ್ಶನಕ್ಕೆ ರಾಜ್ಯ ಸರ್ಕಾರದಿಂದ ಸಿದ್ಧತೆ ಆರಂಭ
Last Updated 6 ಜುಲೈ 2022, 19:55 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಯಲ ಹಂಕದ ವಾಯುನೆಲೆಯಲ್ಲೇ 2023ನೇ ಸಾಲಿನ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ನಡೆಸಲು ಕೇಂದ್ರ ಸರ್ಕಾರ ಒಲವು ತೋರಿದೆ. ಈ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸಲು ಕರ್ನಾಟಕ ಸರ್ಕಾರ ಸಿದ್ಧತೆ ಆರಂಭಿಸಿದೆ.

1996ರಿಂದ ಅಂದರೆ, ಪ್ರಾರಂಭದಿಂದಲೂ ಯಲಹಂಕದ ವಾಯುನೆಲೆಯಲ್ಲಿಯೇ ಈ ಪ್ರದರ್ಶನ ನಡೆಯುತ್ತಿದೆ. ವೈಮಾನಿಕ ಪ್ರದರ್ಶನದ ಸ್ಥಳಾಂತರದ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ.

‘ವೈಮಾನಿಕ ಪ್ರದರ್ಶನವನ್ನು ಲಖನೌದಲ್ಲಿ ನಡೆಸಬೇಕು. ಇದರಿಂದ, ಉತ್ತರ ಪ್ರದೇಶದ ಅಭಿವೃದ್ಧಿಗೆ ಅನುಕೂಲವಾಗುತ್ತದೆ’ ಎಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೇಂದ್ರ ಸಚಿವರಿಗೆ 2019ರಲ್ಲಿ ಮನವಿ ಮಾಡಿದ್ದರು.

ಇದಕ್ಕೆ ಕರ್ನಾಟಕದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿ ಕೇಂದ್ರಕ್ಕೆ ಪತ್ರ ಬರೆದಿತ್ತು. ಕರ್ನಾಟಕದ ಸಂಸದರ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಒತ್ತಡ ಹೇರಿತ್ತು. ಬಳಿಕ ಸ್ಥಳಾಂತರದ ಪ್ರಸ್ತಾವವನ್ನು ಕೈಬಿಡಲಾಗಿತ್ತು. ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದರಿಂದ 2021ನೇ ಸಾಲಿನ ವೈಮಾನಿಕ ಪ್ರದರ್ಶನವನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿತ್ತು. ಬಳಿಕ ಸರ್ಕಾರ ಅನುಮತಿ ನೀಡಿತ್ತು. 2023ನೇ ಸಾಲಿನ ವೈಮಾನಿಕ ಪ್ರದರ್ಶನವನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸಬೇಕು ಎಂದುಉತ್ತರ ಪ್ರದೇಶ, ರಾಜಸ್ಥಾನ, ಗೋವಾ ಸೇರಿದಂತೆ ಅನೇಕ ರಾಜ್ಯಗಳು ಮನವಿ ಸಲ್ಲಿಸಿವೆ. ಆದರೆ, ಈ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.

ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಒಂದು ವೇಳೆ ವೈಮಾನಿಕ ಪ್ರದರ್ಶನವನ್ನು ಸ್ಥಳಾಂತರಿಸಿದರೆ ತಪ್ಪು ಸಂದೇಶ ಹೋಗಲಿದೆ ಎಂಬ ಆತಂಕ ಕೇಂದ್ರ ಸರ್ಕಾರವನ್ನು ಕಾಡುತ್ತಿದೆ. ಜತೆಗೆ, ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರಿನಷ್ಟು ಸೂಕ್ತ ನೆಲೆಬೇರೆ ಎಲ್ಲೂ ಇಲ್ಲ. ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯಲಿದೆ ಎಂಬುದನ್ನು ಖಚಿತಪಡಿಸಿಕೊಂಡಿರುವ ಕರ್ನಾಟಕ ಸರ್ಕಾರ, ಅದಕ್ಕಾಗಿ ಪೂರ್ವ ತಯಾರಿ ಆರಂಭಿಸಿದೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ಇದೇ 11ರಂದು ಸಂಜೆ 4ಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿದೆ.

ಸಭೆಗೆ ಹಾಜರಾಗುವಂತೆ ಹಲಕಾಸು ಇಲಾಖೆ, ಗೃಹ, ನಗರಾಭಿವೃದ್ಧಿ, ಲೋಕೋಪಯೋಗಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಮೂಲಸೌಕರ್ಯ, ಡಿಜಿಪಿ–ಐಜಿಪಿ, ಯಲಹಂಕದ ವಾಯುನೆಲೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT